ನವದೆಹಲಿ : ಮತಗಳ್ಳತನದ ವಿರುದ್ಧ ಇಂದು ಬೆಂಗಳೂರಿನಲ್ಲಿ ಕಾಂಗ್ರೆಸ್‌ನಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಇದಕ್ಕೂ ಮುನ್ನ ಮತಗಳ್ಳತನದ ಸ್ಫೋಟಕ ದಾಖಲೆಯನ್ನು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನವದೆಹಲಿಯಲ್ಲಿ ಬಿಡುಗಡೆ ಮಾಡಿದ್ದಾರೆ.

ಮಹದೇವಪುರದಲ್ಲಿ 1 ಲಕ್ಷ ಮತಗಳ್ಳತನ : 2024ರ ಲೋಕಸಭಾ ಚುನಾವಣೆಯಲ್ಲಿ, ಅದರಲ್ಲೂ ವಿಶೇಷವಾಗಿ ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ ಬೃಹತ್ ಪ್ರಮಾಣದಲ್ಲಿ ‘ಮತ ಕಳ್ಳತನ’ ನಡೆದಿದೆ ಎಂದು ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ‘ವೋಟ್ ಚೋರಿ’ ಶೀರ್ಷಿಕೆಯಡಿ ವಿವರವಾದ ವರದಿಯನ್ನು ಅವರು ಬಿಡುಗಡೆ ಮಾಡಿದ್ದು, ವ್ಯವಸ್ಥಿತವಾಗಿ ಚುನಾವಣಾ ಅಕ್ರಮ ನಡೆದಿದೆ ಎಂದು ಪ್ರತಿಪಾದಿಸಿದ್ದಾರೆ.

ಅವರ ಪ್ರಕಾರ, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮಹದೇವಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸುಮಾರು 1,00,250 ಮತಗಳನ್ನು ಅಕ್ರಮವಾಗಿ ಸೇರಿಸಲಾಗಿದ್ದು, ಇದು ಚುನಾವಣಾ ಫಲಿತಾಂಶದ ಮೇಲೆ ನೇರ ಪರಿಣಾಮ ಬೀರಿದೆ ಎಂದು ಆರೋಪಿಸಿದ್ದಾರೆ. ರಾಹುಲ್ ತಮ್ಮ ತನಿಖಾ ವರದಿಯಲ್ಲಿ ಐದು ಪ್ರಮುಖ ವಿಧಾನಗಳ ಮೂಲಕ ಮತ ಕಳ್ಳತನ ನಡೆದಿದೆ ಎಂದು ವಿವರಿಸಿದ್ದಾರೆ.

- ನಕಲಿ ಮತದಾರರು, ಅಂದರೆ ಒಬ್ಬನೇ ವ್ಯಕ್ತಿಯ ಹೆಸರು ಮತ್ತು ವಿವರಗಳು ಮತದಾರರ ಪಟ್ಟಿಯಲ್ಲಿ ಹಲವು ಬಾರಿ ಕಾಣಿಸಿಕೊಂಡಿದೆ. ಕೆಲವೊಮ್ಮೆ ಒಂದೇ ವ್ಯಕ್ತಿಗೆ ಬೆಂಗಳೂರಿನ ಜೊತೆಗೆ ಮುಂಬೈ, ಲಕ್ನೋದಂತಹ ಬೇರೆ ರಾಜ್ಯಗಳಲ್ಲೂ ಮತದಾನದ ಹಕ್ಕು ನೀಡಲಾಗಿದೆ. ಅಂಥಹವರು 11,965 ಪತ್ತೆಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
- ನಕಲಿ ಮತ್ತು ಅಮಾನ್ಯ ವಿಳಾಸಗಳನ್ನು ನೀಡಿರುವುದು ಅವರ ಇನ್ನೊಂದು ಆರೋಪ. ಮತದಾರರ ವಿಳಾಸದ ಜಾಗದಲ್ಲಿ ‘0’ ಅಥವಾ ಅಸ್ತಿತ್ವದಲ್ಲಿಲ್ಲದ ವಿಳಾಸಗಳನ್ನು ನಮೂದಿಸಿ ಸಾವಿರಾರು ನಕಲಿ ಮತದಾರರನ್ನು ಸೃಷ್ಟಿಸಲಾಗಿದೆ ಎಂದು ಅವರು ದೂರಿದ್ದಾರೆ.
- ಒಂದೇ ವಿಳಾಸದಲ್ಲಿ ಬೃಹತ್ ಸಂಖ್ಯೆಯ ಮತದಾರರು ಅಂದರೆ, ಸಣ್ಣ ಮನೆ ಅಥವಾ ವಾಣಿಜ್ಯ ಮಳಿಗೆಯ ವಿಳಾಸದಲ್ಲಿ 50 ರಿಂದ 80ಕ್ಕೂ ಹೆಚ್ಚು ಮತದಾರರನ್ನು ನೋಂದಣಿ ಮಾಡಲಾಗಿದೆ. ಉದಾಹರಣೆಗೆ, ಒಂದು ಬ್ರೂವರಿಯ ವಿಳಾಸದಲ್ಲಿ 68 ಮತದಾರರು ಇರುವುದಾಗಿ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಈ ರೀತಿಯ 10,452 ಮತದಾರರು ಪತ್ತೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.
- ಅಮಾನ್ಯ ಫೋಟೋಗಳು ಅಂದರೆ ಮತದಾರರ ಗುರುತು ಪತ್ತೆಹಚ್ಚಲು ಸಾಧ್ಯವಾಗದಷ್ಟು ಚಿಕ್ಕದಾದ ಅಥವಾ ಅಸ್ಪಷ್ಟವಾದ ಫೋಟೋಗಳನ್ನು ಬಳಸಲಾಗಿದೆ. ಇಂಥಹ 4,132 ಮತದಾರರು ಪತ್ತೆಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
- ಫಾರ್ಮ್-6ರ ದುರ್ಬಳಕೆ ಅಂದರೆ, ಹೊಸ ಮತದಾರರ ನೋಂದಣಿಗೆ ಬಳಸುವ ಫಾರ್ಮ್-6 ಅನ್ನು ದುರ್ಬಳಕೆ ಮಾಡಿಕೊಂಡು, ಈಗಾಗಲೇ ಮತದಾರರಾಗಿರುವವರನ್ನು ಮತ್ತೆ ಹೊಸದಾಗಿ ನೋಂದಣಿ ಮಾಡಲಾಗಿದೆ. ಇಂಥಹ 33,692 ಪ್ರಕರಗಳು ನಮಗೆ ಸಿಕ್ಕಿವೆ. 70 ವರ್ಷದ ಮಹಿಳೆಯೊಬ್ಬರನ್ನು ಎರಡು ತಿಂಗಳ ಅಂತರದಲ್ಲಿ ಎರಡು ಬಾರಿ ನೋಂದಣಿ ಮಾಡಿ, ಎರಡೂ ಕಡೆ ಮತ ಚಲಾಯಿಸಿರುವ ಬಗ್ಗೆ ವರದಿಯಲ್ಲಿ ದಾಖಲೆ ಸಮೇತ ವಿವರಿಸಲಾಗಿದೆ.
ಇವನ್ನೆಲ್ಲಾ ಇಟ್ಟುಕೊಂಡು, ಈ ಎಲ್ಲಾ ಅಕ್ರಮಗಳಿಗೆ ಚುನಾವಣಾ ಆಯೋಗದ ವೈಫಲ್ಯವೇ ಕಾರಣ ಎಂದು ಕಾಂಗ್ರೆಸ್ ಪಕ್ಷ ದೂರಿದೆ. “ಪಾರದರ್ಶಕತೆಗಾಗಿ ಯಂತ್ರ ಓದಬಲ್ಲ ಡಿಜಿಟಲ್ ಮತದಾರರ ಪಟ್ಟಿಯನ್ನು ನೀಡಲು ಚುನಾವಣಾ ಆಯೋಗ ನಿರಾಕರಿಸಿದೆ. ಮತದಾನದ ಪ್ರಕ್ರಿಯೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆಯುವ ನಿಯಮಗಳನ್ನು ಬದಲಾಯಿಸಿ, ಸಾಕ್ಷ್ಯ ನಾಶಕ್ಕೆ ಅನುವು ಮಾಡಿಕೊಡಲಾಗಿದೆ,” ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ : ಬಿಜೆಪಿ ನಾಯಕ ಬಿ. ಶ್ರೀರಾಮುಲು ಹುಟ್ಟುಹಬ್ಬಕ್ಕೆ ಭಾವನಾತ್ಮಕ ಶುಭಾಶಯ ಕೋರಿದ ಜನಾರ್ದನ ರೆಡ್ಡಿ!







