ಬೆಂಗಳೂರು : ಅದಾನಿ ಗ್ರೂಪ್, ಟಾಟಾ ಪ್ರಾಜೆಕ್ಟ್, ಎಲ್ ಆ್ಯಂಡ್ ಟಿ ಸೇರಿದಂತೆ ದೇಶದ ಪ್ರಮುಖ ಹತ್ತು ಸಂಸ್ಥೆಗಳು ಬೆಂಗಳೂರಿನ ಸುರಂಗ ರಸ್ತೆ ಯೋಜನೆಯ ಟೆಂಡರ್‌ನಲ್ಲಿ ಭಾಗವಹಿಸಲು ಆಸಕ್ತಿ ತೋರಿವೆ.
ಬೆಂಗಳೂರು ಸ್ಮಾರ್ಟ್ ಇನ್‌ಫ್ರಾಸ್ಟ್ರಕ್ಟರ್ ನಿಯಮಿತ (ಬಿ-ಸ್ಟೈಲ್) ಹೆಬ್ಬಾಳ ಜಂಕ್ಷನ್‌ನಿಂದ ಸಿಲ್ಕ್ ಬೋರ್ಡ್ ಜಂಕ್ಷನ್‌ವರೆಗೆ 16.75 ಕಿ.ಮೀ ಸುರಂಗ ರಸ್ತೆ ನಿರ್ಮಿಸಲು ಟೆಂಡರ್ ಆಹ್ವಾನಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ ಸೋಮವಾರ ನಡೆದ ಪ್ರೀ ಬಿಡ್ ಸಭೆಯಲ್ಲಿ, ಮೆಗಾ ಎಂಜಿನಿಯರಿಂಗ್ ಆ್ಯಂಡ್ ಇನ್‌ಫ್ರಾಸ್ಟ್ರಕ್ಟರ್, ಐಟಿಡಿ ಸೆಮೆಂಟೇಷನ್ ಇಂಡಿಯಾ, ವಿಶ್ವ ಸಮುದ್ರ ಎಂಜಿನಿಯರಿಂಗ್ ಲಿಮಿಟೆಡ್, ಜಯಶಂಕರ್, ಸೀಗಲ್ ಇಂಡಿಯಾ, ಆಫ್‌ಕಾನ್ಸ್ ಇನ್‌ಫ್ರಾಸ್ಟ್ರಕ್ಟರ್, ಐಆರ್‌ಬಿ ಇನ್‌ಫ್ರಾಸ್ಟ್ರಕ್ಟರ್ ಪ್ರತಿನಿಧಿಗಳು ಭಾಗವಹಿಸಿದ್ದರು.
ನಿರ್ಮಾಣ, ಕಾರ್ಯಾಚರಣೆ, ವರ್ಗಾವಣೆ (ಬೂಟ್) ಆಧಾರದಲ್ಲಿ ಸುರಂಗ ರಸ್ತೆ ಯೋಜನೆಯನ್ನು ಕೈಗೊಳ್ಳುತ್ತಿರುವುದರಿಂದ, ಎಷ್ಟು ಸಂಸ್ಥೆಗಳು ಆಸಕ್ತಿ ವಹಿಸುತ್ತವೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಬೂಟ್ ಪ್ರಕಾರ, ಯೋಜನೆಯ ಶೇ 60ರಷ್ಟು ಮೊತ್ತವನ್ನು ಕಂಪನಿಗಳು ಭರಿಸಬೇಕು. ಅದು ಸುಮಾರು 10,619 ಕೋಟಿಯಾಗಲಿದ್ದು, ಬಿಡ್ ಸಲ್ಲಿಸುವ ಸಂದರ್ಭದಲ್ಲಿ₹44 ಕೋಟಿಯನ್ನು ಠೇವಣಿಯನ್ನಾಗಿ ಇಡಬೇಕು. 30 ವರ್ಷಗಳ ಅವಧಿಗೆ ಟೋಲ್ ಅನ್ನು ಗುತ್ತಿಗೆದಾರ ಸಂಸ್ಥೆ ಸಂಗ್ರಹಿಸಬಹುದು.
ಒಂದೂವರೆ ಗಂಟೆ ನಡೆದ ಸಭೆಯಲ್ಲಿ, 200ಕ್ಕೂ ಹೆಚ್ಚು ಪ್ರಶ್ನೆಗಳನ್ನು ಪ್ರತಿನಿಧಿಗಳು ಕೇಳಿದರು ಎನ್ನಲಾಗಿದೆ. ‘ಅಗ್ರ ನಿರ್ಮಾಣ ಕಂಪನಿಗಳು ಅವರ ಪ್ರತಿನಿಧಿಗಳನ್ನು ಫ್ರೀ ಬಿಡ್ ಸಭೆಗೆ ಕಳುಹಿಸಿದ್ದವು. ಬಿಡ್ ಸಲ್ಲಿಸುವ ದಿನವನ್ನು ವಿಸ್ತರಿಸಬೇಕು ಎಂದು ಕೆಲವರು ಮನವಿ ಮಾಡಿಕೊಂಡರು. ತ್ಯಾಜ್ಯ ವಿಲೇವಾರಿಗೆ ಭೂಮಿಯ ಬಗ್ಗೆಯೂ ಅವರು ಪ್ರಶ್ನಿಸಿದರು. ಅಂತಿಮ ಬಿಡ್‌ನಲ್ಲಿ ಹಲವು ಕಂಪನಿಗಳು ಭಾಗವಹಿಸುವ ನಿರೀಕ್ಷೆ ಇದೆ’ ಎಂದು ಬಿ-ಸ್ಟೈಲ್ ತಾಂತ್ರಿಕ ನಿರ್ದೇಶಕ ಬಿ.ಎಸ್. ಪ್ರಹ್ಲಾದ್ ತಿಳಿಸಿದರು.
ವಿಸ್ತ್ರತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಿದ ಸಂಸ್ಥೆಯವರೊಂದಿಗೆ ಬಿಬಿಎಂಪಿ ಯೋಜನಾ ವಿಭಾಗದ ವಿಶೇಷ ಆಯುಕ್ತ ಕರೀಗೌಡ ಮಾತುಕತೆ ನಡೆಸಿದರು. ಯೋಜನೆಯಂತೆ, ನಿರ್ಮಾಣ ಕಂಪನಿಗಳು ಒಟ್ಟು ಎಂಟು ಸುರಂಗ ಕೊರೆಯುವ ಯಂತ್ರಗಳನ್ನು (ಟಿಪಿಎಂ) ಅಳವಡಿಸಿಕೊಳ್ಳಬೇಕು. ಪ್ರತಿವರ್ಷ ಪ್ರತಿ ಯಂತ್ರ 2 ಕಿ.ಮೀ ಉದ್ದದ ಸುರಂಗ ಮಾರ್ಗ ಕೊರೆಯಬೇಕಾಗಿದೆ.
ಇದನ್ನೂ ಓದಿ : 10,12 ವರ್ಷದ ಬಾಲಕಿಯರ ಕಳೇಬರ ಪತ್ತೆ.. ಧರ್ಮಸ್ಥಳ ಗ್ರಾಮದಲ್ಲಿ ಸಿಕ್ಕಿದ್ದು ಒಂದಲ್ಲ, ಎರಡಲ್ಲ ಬರೋಬ್ಬರಿ 9 ಅಸ್ಥಿಪಂಜರ!







