ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪಾ ಅವರು ನಿರ್ಮಿಸಿದ ‘ಕೊತ್ತಲವಾಡಿ’ ಸಿನಿಮಾ ಇಂದು ರಾಜ್ಯಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗಿದೆ. ಶ್ರೀರಾಜು ನಿರ್ದೇಶನದ ಈ ಸಿನಿಮಾದಲ್ಲಿ ನಟ ಪೃಥ್ವಿ ಅಂಬಾರ್- ಕಾವ್ಯ ಶೈವ ಅಭಿನಯಿಸಿದ್ದಾರೆ. ಮೊದಲ ದಿನವೇ ಕೊತ್ತಲವಾಡಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ರೊಮ್ಯಾಂಟಿಕ್ ಹೀರೋ ಆಗಿ ಮಿಂಚಿದ್ದ ಪೃಥ್ವಿ ಅಂಬಾರ್ ಈ ಸಿನಿಮಾದಲ್ಲಿ ಮಾಸ್ ಹಾಗೂ ರಗಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

‘ಕೊತ್ತಲವಾಡಿ’ ಸಿನಿಮಾದ ಕಥೆ ಸಾಗೋದು ಚಾಮರಾಜನಗರದ ಕೊತ್ತಲವಾಡಿ ಊರಿನಲ್ಲಿ. ಪಕ್ಕಾ ಗ್ರಾಮೀಣ ಸೊಗಡಿನಲ್ಲಿ ಸಿನಿಮಾದ ಕಥೆ ಸಾಗುತ್ತದೆ. ಈ ಸಿನಿಮಾದಲ್ಲಿ ಪೃಥ್ವಿ ಅಂಬಾರ್ ಹೀರೋ ಆದರೂ ಇಡೀ ಚಿತ್ರವನ್ನು ಆವರಿಸಿಕೊಳ್ಳೋದು ಗೋಪಾಲ ಕೃಷ್ಣ ದೇಶಪಾಂಡೆ. ಅವರ ಮಾಗಿದ ನಟನೆ ಎಲ್ಲರಿಗೂ ಇಷ್ಟ ಆಗಿದ್ದು, ಜನ ಸೇವಕನಾಗಿ, ಕುತಂತ್ರಿಯಾಗಿ, ಅಣ್ಣನಾಗಿ, ಸಮಯ ಸಾಧಕನಾಗಿ ಹಲವು ಶೇಡ್ಗಳನ್ನು ಅವರು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಇನ್ನು ರಾಜೇಶ್ ನಟನರಂಗ ಅವರು ಪೊಲೀಸ್ ಅಧಿಕಾರಿಯಾಗಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ಕಥಾ ನಾಯಕ ಮೋಹನ (ಪೃಥ್ವಿ ಅಂಬರ್) ಕೆಲಸಕ್ಕೆ ಜನರನ್ನು ಒಟ್ಟು ಮಾಡಿ ಕಳಿಸೋ ಕಾಯಕ ಮಾಡುತ್ತಾನೆ. ಹೀಗಾಗಿ ಊರಿನ ಜನತೆಗೆ ಆತ ಅಚ್ಚುಮೆಚ್ಚು. ಈ ಊರಿಗೆ ಒಂದು ಸಮಸ್ಯೆ ಎದುರಾಗುತ್ತದೆ. ಎಲ್ಲರೂ ಕಣ್ಣೀರಿನಲ್ಲಿ ಕೈ ತೊಳಿಯೋ ಪರಿಸ್ಥಿತಿ ಬರುತ್ತದೆ. ಆ ಸಮಸ್ಯೆಯನ್ನು ಎದುರಿಸಲು ಹೋದಾಗ ಕಥೆ ನಾನಾ ತಿರುವು ಪಡೆದುಕೊಳ್ಳುತ್ತದೆ. ನಂತರ ಏನಾಗುತ್ತದೆ, ಆ ಊರು ಹೇಗೆ ಕಾಪಾಡಲ್ಪಡುತ್ತದೆ ಎಂಬುದೇ ಚಿತ್ರದ ಕಥೆ.

ಸಿನಿಮಾದ ಹಾಡುಗಳಿಗೆ ವಿಕಾಸ್ ವಸಿಷ್ಠ ಮತ್ತು ಹೀರೋ ಇಂಟ್ರೊಡಕ್ಷನ್ ಹಾಡಿಗೆ ಹಾಗೂ ಹಿನ್ನಲೆ ಸಂಗೀತ ಅಭಿನಂದನ್ ಕಶ್ಯಪ್ ಸಂಯೋಜಿಸಿದ್ದಾರೆ. ಕಾರ್ತಿಕ್ ಎಸ್. ಛಾಯಾಗ್ರಹಣ ಮಾಡಿದ್ದಾರೆ. ರಾಮಿಸೆಟ್ಟಿ ಪವನ್ ಸಂಕಲನ ಮಾಡಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ವಿ. ನಾಗೇಂದ್ರ ಪ್ರಸಾದ್, ಕಿನ್ನಾಳ್ ರಾಜ್, ಪ್ರಮೋದ್ ಮರವಂತೆ, ಗೌಸ್ ಪಿರ್ ಸಾಹಿತ್ಯ ಬರೆದಿದ್ದಾರೆ. ಅಭಿನಂದನ್ ಕಶ್ಯಪ್ ಹಿನ್ನೆಲೆ ಸಂಗೀತ ನೀಡಿದ್ದಾರೆ.
ಇದನ್ನೂ ಓದಿ : ದಶಕದ ಸಂಭ್ರಮದಲ್ಲಿ ಪ್ರಿಸಂ ರೆಕಾರ್ಡಿಂಗ್ ಸ್ಟುಡಿಯೋಸ್ – ಪ್ರಿಸಂ ಫೌಂಡೇಶನ್.. ನೂತನ ಕಛೇರಿಗೆ ಶಾಸಕ ಡಾ.ಅಶ್ವಥ್ ನಾರಾಯಣ್ ಚಾಲನೆ!







