ಬೆಂಗಳೂರು : ಬಸ್, ಮೆಟ್ರೋ ಬಳಿಕ ಇಂದಿನಿಂದ ಆಟೋ ಮೀಟರ್ ದರ ಏರಿಕೆಯಾಗುತ್ತಿದ್ದು, ಬೆಂಗಳೂರಿಗರ ಜೇಬಿಗೆ ಮತ್ತೆ ಕತ್ತರಿ ಬೀಳಲಿದೆ. ಮಿನಿಮಮ್ ಆಟೋ ಪ್ರಯಾಣ ದರ 30ರಿಂದ 36 ರೂಪಾಯಿ ಏರಿಕೆ ಆಗಿದ್ದು, ನಂತರದ ಪ್ರತಿ ಕಿ.ಮೀ.ಗೆ 18 ರೂಪಾಯಿ ನಿಗದಿ ಮಾಡಲಾಗಿದೆ.
ಕಳೆದ ತಿಂಗಳ 14ನೇ ತಾರೀಖಿನಂದು ಬೆಂಗಳೂರು ಆಟೋ ದರವನ್ನು ಹೆಚ್ಚಿಸಿ ಬೆಂಗಳೂರು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರು. ಈ ಆದೇಶ ಇಂದಿನಿಂದ ಜಾರಿಗೆ ಬರ್ತಿದ್ದು, ಬೆಂಗಳೂರಿಗರಿಗೆ ದುಬಾರಿ ದುನಿಯಾದಲ್ಲಿ ಆಟೋ ಪ್ರಯಾಣ ದರವೂ ಹೊರೆಯಾಗಲಿದೆ. ಆಟೋ ಪ್ರಯಾಣ ದರ ಪರಿಷ್ಕರಣೆಗೆ ಚಾಲಕರು ಸಂತಸ ವ್ಯಕ್ತಪಡಿಸಿದರೆ, ಪ್ರಯಾಣಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.
ಪರಿಷ್ಕೃತ ಆಟೋ ಪ್ರಯಾಣ ದರ ಹೀಗಿದೆ :
– ಮೊದಲ 2 ಕಿ.ಮೀಗೆ ಕನಿಷ್ಠ 36 ರೂ.
– ನಂತರ ಪ್ರತಿ ಕಿ.ಮೀಗೆ 18 ರೂ.
– ಮೊದಲ ಐದು ನಿಮಿಷ ಕಾಯುವಿಕೆ ಉಚಿತ
– ಪ್ರತಿ 15 ನಿಮಿಷ ಕಾಯುವಿಕೆ ದರ 10 ರೂ.
– 20 ಕೆಜಿ ಲಗೇಜ್ ಉಚಿತ
– 20 ಕೆಜಿಗಿಂತ ಹೆಚ್ಚಿದ್ರೆ 10 ರೂ. ಲಗೇಜ್ ಶುಲ್ಕ
– ರಾತ್ರಿ 10ರಿಂದ ಬೆಳಗ್ಗೆ 5 ಗಂಟೆಯವರೆಗೆ ಒಂದೂವರೆ ಪಟ್ಟು ದರ
– ಹೊಸ ದರ ಪಟ್ಟಿ ಆಟೋದ ಮೇಲೆ ಕಡ್ಡಾಯ ಹಾಕಬೇಕು
– ಪರಿಷ್ಕೃತ ದರದ ಹೊಸ ಮೀಟರ್ ಅ.31ರ ಒಳಗೆ ಹಾಕಿಸಬೇಕು.
ಈ ದರ ಏರಿಕೆಯ ನಂತರವೂ ಹೆಚ್ಚು ಹಣ ಪಡೆದ್ರೆ ಕಠಿಣ ಕ್ರಮದ ಎಚ್ಚರಿಕೆಯನ್ನು ಜಿಲ್ಲಾಧಿಕಾರಿಗಳು ನೀಡಿದ್ದಾರೆ. ಮತ್ತೊಂದೆಡೆ ಆಟೋರಿಕ್ಷಾ ವಾಹನಗಳ ವಿರುದ್ದ ವಿಶೇಷ ಕಾರ್ಯಾಚರಣೆ ಸಂಚಾರಿ ಪೋಲಿಸರು ಕೈಗೆತ್ತಿಕೊಂಡಿದ್ದಾರೆ. ಬೆಂಗಳೂರು ನಗರ ಸಂಚಾರ ಪೋಲಿಸರು ಸಾರ್ವಜನಿಕರಿಂದ ಅತೀ ಹೆಚ್ಚು ಬಾಡಿಗೆ ಸಂಗ್ರಹಿಸುತ್ತಿರೋದು, ಸಾರ್ವಜನಿಕರು ಕರೆದ ಕಡೆಗೆ ಬಾಡಿಗೆ ಹೋಗದೇ ಇದ್ದು ಅಥವಾ ನಿಯಮ ಉಲ್ಲಂಘನೆ ಮಾಡೋ ಆಟೋಗಳ ವಿರುದ್ಧ ಕಾರ್ಯಾಚರಣೆಗೆ ಮುಂದಾಗಿದ್ದಾರೆ.
ಇದನ್ನೂ ಓದಿ : ಬೆಂಗಳೂರಲ್ಲಿ ಬಾಲಕನನ್ನು ಕಿಡ್ನ್ಯಾಪ್ ಮಾಡಿ ಬರ್ಬರ ಕೊಲೆ.. ಆರೋಪಿಗಳ ಕಾಲಿಗೆ ಗುಂಡು ಹೊಡೆದು ಬಂಧಿಸಿದ ಪೊಲೀಸರು!







