ಮೋದಿ ನನ್ನ ಬೆಸ್ಟ್‌ ಫ್ರೆಂಡ್‌ ಎನ್ನುತ್ತಲೇ ಕುಟುಕಿದ ಟ್ರಂಪ್‌ – ಭಾರತಕ್ಕೆ ​​ಶೇ.25ರಷ್ಟು ಸುಂಕ ವಿಧಿಸಿದ ‘ವಿಶ್ವದ ದೊಡ್ಡಣ್ಣ’​​!

ನವದೆಹಲಿ : ಆಗಸ್ಟ್ 1ರಿಂದ ಜಾರಿಗೆ ಬರುವಂತೆ ಭಾರತದ ಸರಕುಗಳ ಮೇಲೆ ಶೇ. 25ರಷ್ಟು ತೆರಿಗೆ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಘೋಷಿಸಿದ್ದಾರೆ. ಇದಲ್ಲದೆ, ‘ರಷ್ಯಾದಿಂದ ಇಂಧನ ಮತ್ತು ಶಸ್ತ್ರಾಸ್ತ್ರಗಳನ್ನು ಖರೀದಿಸಿದರೆ ಭಾರತ ಹೆಚ್ಚುವರಿ ದಂಡವನ್ನು ಪಾವತಿಸಬೇಕಾಗುತ್ತದೆ’ ಎಂದೂ ಎಚ್ಚರಿಸಿದ್ದಾರೆ.

ಈ ಹಿಂದೆ ಏ.2ರಂದು ಟ್ರಂಪ್‌ ಭಾರತದ ಮೇಲೆ ಶೇ.26 ತೆರಿಗೆ ಘೋಷಿಸಿದ್ದರು. ಬಳಿಕ ಅದರ ಜಾರಿಯನ್ನು ಜು.9ಕ್ಕೆ ಮುಂದೂಡಿದ್ದರು ಹಾಗೂ ನಂತರ ಮತ್ತೆ ಆ.1ಕ್ಕೆ ಮುಂದೂಡಿದ್ದರು. ಅಷ್ಟರೊಳಗೆ ಭಾರತದ ಜತೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ಇರಾದೆ ವ್ಯಕ್ತಪಡಿಸಿದ್ದರು. ಆದರೆ ಹಲವು ಬಿಕ್ಕಟ್ಟುಗಳ ಕಾರಣ ವ್ಯಾಪಾರ ಒಪ್ಪಂದ ಸಾಕಾರಗೊಂಡಿಲ್ಲ. ಹೀಗಾಗಿ ಆ.1ರ ಗಡುವು ಸಮೀಪಿಸುತ್ತಿರುವ ಕಾರಣ ಅವರು ಶೇ.25ರಷ್ಟು ತರಿಗೆ ಘೋಷಿಸಿದ್ದಾರೆ.

ಹೀಗಾಗಿ ಭಾರತದ ಯಾವುದೇ ವಸ್ತು ಅಮೆರಿಕಕ್ಕೆ ರಫ್ತಾದರೆ ಅದರ ಮೇಲೆ ಈಗಾಗಲೇ ಇರುವ ಶೇ.10ರಷ್ಟು ಮೂಲ ತೆರಿಗೆ ಜೊತೆಗೆ ಶೇ.25ರಷ್ಟು ಹೆಚ್ಚುವರಿ ತೆರಿಗೆ ಬೀಳುತ್ತದೆ. ಆದರೆ ರಷ್ಯಾದಿಂದ ಖರೀದಿಯನ್ನು ಭಾರತ ಮುಂದುವರಿಸಿದರೆ ಹೆಚ್ಚಿನ ದಂಡ ವಿಧಿಸುವ ಟ್ರಂಪ್‌ ಹೇಳಿಕೆ ಬಗ್ಗೆ ಸ್ಪಷ್ಟತೆ ಇಲ್ಲ. ಏಕೆಂದರೆ ದಂಡ ಎಷ್ಟು ಎಂದು ಅವರು ಹೇಳಿಲ್ಲ.

ಟ್ರಂಪ್ ಹೇಳಿದ್ದೇನು? ‘ನೆನಪಿಡಿ, ಭಾರತ ನಮ್ಮ ಸ್ನೇಹಿತನಾಗಿದ್ದರೂ, ನಾವು ವರ್ಷಗಳಲ್ಲಿ ಅವರೊಂದಿಗೆ ತುಲನಾತ್ಮಕವಾಗಿ ಕಡಿಮೆ ವ್ಯವಹಾರ ಮಾಡಿದ್ದೇವೆ. ಏಕೆಂದರೆ ಅವರ ಸುಂಕಗಳು ತುಂಬಾ ಹೆಚ್ಚಿವೆ. ವಿಶ್ವದಲ್ಲೇ ಅತ್ಯಧಿಕವಾಗಿವೆ ಮತ್ತು ಅವರು ಯಾವುದೇ ದೇಶಕ್ಕಿಂತ ಅತ್ಯಂತ ಕಠಿಣ ಮತ್ತು ಅಸಹ್ಯಕರವಾದ ವಿತ್ತೀಯವಲ್ಲದ ವ್ಯಾಪಾರ ಅಡೆತಡೆಗಳನ್ನು ಹೊಂದಿದ್ದಾರೆ ಎಂದು ಎಂದು ಟ್ರಂಪ್ ಟ್ರುತ್ ಸೋಶಿಯಲ್‌ ಸಾಮಾಜಿಕ ಮಾಧ್ಯಮದಲ್ಲಿ ಮಾಡಿದ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಅಲ್ಲದೆ, ‘ಅವರು ಭಾರತ ಯಾವಾಗಲೂ ತಮ್ಮ ಮಿಲಿಟರಿ ಉಪಕರಣಗಳ ಬಹುಪಾಲು ರಷ್ಯಾದಿಂದಲೇ ಖರೀದಿಸಿದ್ದಾರೆ. ಮತ್ತು ಚೀನಾ ಬಳಿಕ ರಷ್ಯಾದ ಅತಿದೊಡ್ಡ ಇಂಧನ ಖರೀದಿದಾರರಾಗಿದ್ದಾರೆ. ರಷ್ಯಾ ಉಕ್ರೇನ್‌ನಲ್ಲಿ ನಡೆಸುತ್ತಿರುವ ಹತ್ಯೆಯನ್ನು ನಿಲ್ಲಿಸಬೇಕೆಂದು ಎಲ್ಲರೂ ಬಯಸುತ್ತಿದ್ದಾರೆ. ಆದರೂ ಭಾರತವು ರಷ್ಯಾ ಜತೆಗೆ ನಂಟು ಬಿಟ್ಟಿಲ್ಲ. ಇದು ಎಲ್ಲವೂ ಒಳ್ಳೆಯದಲ್ಲ! ಆದ್ದರಿಂದ ಭಾರತವು ಆಗಸ್ಟ್‌ 1ರಿಂದ 25% ಸುಂಕವನ್ನು ಮತ್ತು ದಂಡವನ್ನು ಪಾವತಿಸುತ್ತದೆ. ಇದು ನಿಮ್ಮ (ಭಾರತದ) ಗಮನಕ್ಕೆ. ಧನ್ಯವಾದಗಳು’ ಎಂದಿದ್ದಾರೆ.

ದೇಶ ಹಿತಕ್ಕೆ ಆದ್ಯತೆ: ಮೋದಿ ಸರ್ಕಾರ ದ್ವಿಪಕ್ಷೀಯ ವ್ಯಾಪಾರದ ಕುರಿತು ಟ್ರಂಪ್‌ ಹೇಳಿಕೆ ಗಮನಿಸಿದ್ದೇವೆ. ಅದರ ಪರಿಣಾಮಗಳನ್ನು ಅಧ್ಯಯನ ಮಾಡುತ್ತಿದ್ದೇವೆ. ಟ್ರಂಪ್‌ ಜತೆ ವ್ಯಾಪಾರ ಮಾತುಕತೆ ಪ್ರಗತಿಯಲ್ಲಿದೆ. ನಾವು ರೈತರು, ಉದ್ಯಮಿಗಳು, ಸಣ್ಣಕೈಗಾರಿಕೆ ಹಿತರಕ್ಷಣೆಗೆ ಆದ್ಯತೆ ನೀಡುತ್ತೇವೆ. ಬ್ರಿಟನ್‌ ಜತೆಗಿನ ಒಪ್ಪಂದದ ರೀತಿಯೇ ನಮ್ಮ ರಾಷ್ಟ್ರೀಯ ಹಿತಾಸಕ್ತಿ ಭದ್ರಪಡಿಸಿಕೊಳ್ಳಲು ಅಗತ್ಯವಿರುವ ಎಲ್ಲಾ ಕ್ರಮ ಕೈಗೊಳ್ಳುತ್ತೇವೆ ಎಂದು ಭಾರತ ಸರ್ಕಾರ ತಿಳಿಸಿದೆ.

ಇದನ್ನೂ ಓದಿ : ಸೇನಾ ವಾಹನದ ಮೇಲೆ ಬಂಡೆ ಬಿದ್ದು ಇಬ್ಬರು ಯೋಧರು ಹುತಾತ್ಮ!

Btv Kannada
Author: Btv Kannada

Read More