ಮಂತ್ರಾಲಯ ರಾಯರ ಮಠದ ಹುಂಡಿ ಎಣಿಕೆ.. ಕೇವಲ 35 ದಿನಗಳಲ್ಲಿ 5.46 ಕೋಟಿ ರೂ.ಕಾಣಿಕೆ ಸಂಗ್ರಹ!

ರಾಯಚೂರು : ಕಲಿಯುಗ ಕಾಮಧೇನು ಎಂದೇ ಖ್ಯಾತವಾದ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಹುಂಡಿಗೆ ಜುಲೈ ತಿಂಗಳಲ್ಲಿ ಭಕ್ತರಿಂದ ದಾಖಲೆಯ ಕಾಣಿಕೆ ಸಂಗ್ರಹವಾಗಿದೆ. ಕೇವಲ 35 ದಿನಗಳಲ್ಲಿ ರಾಯರ ಹುಂಡಿಗೆ 5 ಕೋಟಿ 46 ಲಕ್ಷ 6 ಸಾವಿರ 555 ರೂಪಾಯಿ ಜಮಾ ಆಗಿದ್ದು, ಈ ವರ್ಷದಲ್ಲಿ ಇದುವರೆಗಿನ ಅತೀ ಹೆಚ್ಚು ಕಾಣಿಕೆಯಾಗಿದೆ. ಜೊತೆಗೆ, ಭಕ್ತರು 127 ಗ್ರಾಂ ಚಿನ್ನ ಮತ್ತು 1,820 ಗ್ರಾಂ ಬೆಳ್ಳಿಯ ಆಭರಣಗಳನ್ನು ಕಾಣಿಕೆಯಾಗಿ ಸಮರ್ಪಿಸಿದ್ದಾರೆ ಎಂದು ಮಂತ್ರಾಲಯ ಮಠದ ವ್ಯವಸ್ಥಾಪಕರು ಮಾಹಿತಿ ನೀಡಿದ್ದಾರೆ.

ಶ್ರೀಮಠದಲ್ಲಿ ನಿನ್ನೆ ಬೆಳಗ್ಗೆ ಆರಂಭವಾದ ಹುಂಡಿ ಎಣಿಕೆ ಕಾರ್ಯ ಸಂಜೆ 6 ಗಂಟೆಯ ವೇಳೆಗೆ ಮುಕ್ತಾಯಗೊಂಡಿತು. ಈ ಬಾರಿಯ ಕಾಣಿಕೆಯು ಜೂನ್ ತಿಂಗಳ 5 ಕೋಟಿ 28 ಲಕ್ಷ 39,538 ರೂಪಾಯಿಯ ದಾಖಲೆಯನ್ನು ಮುರಿದಿದೆ. ಕರ ಸೇವಕರು, ಭಕ್ತರು ಮತ್ತು ಮಠದ ಸಿಬ್ಬಂದಿಗಳು ಈ ಎಣಿಕೆ ಕಾರ್ಯದಲ್ಲಿ ಭಾಗವಹಿಸಿದ್ದರು.

ತುಂಗಾತೀರದಲ್ಲಿ ನೆಲೆಸಿರುವ ರಾಯರ ದರ್ಶನಕ್ಕಾಗಿ ದೇಶದ ವಿವಿಧ ಭಾಗಗಳಿಂದ ಆಗಮಿಸುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ಕಾಣಿಕೆಯ ಮೊತ್ತವು ಶ್ರೀಮಠದ ಜನಪ್ರಿಯತೆ ಮತ್ತು ಭಕ್ತರ ಶ್ರದ್ಧೆಯನ್ನು ತೋರಿಸುತ್ತದೆ. ಈ ಕಾಣಿಕೆಯು ಶ್ರೀಮಠದ ಧಾರ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳಿಗೆ ಬಳಕೆಯಾಗಲಿದೆ ಎಂದು ರಾಯರ ಮಠದ ಆಡಳಿತ ಮಂಡಳಿ ತಿಳಿಸಿದೆ.

ಇದನ್ನೂ ಓದಿ : ನಟ ಪ್ರಥಮ್‌ಗೆ ಕೊಲೆ ಬೆದರಿಕೆ – ದೂರಿನ ಬೆನ್ನಲ್ಲೇ ದರ್ಶನ್‌ ಅಭಿಮಾನಿಗಳ ವಿರುದ್ಧ FIR ದಾಖಲು!

Btv Kannada
Author: Btv Kannada

Read More