ದಿಲ್ಲಿಯಲ್ಲಿ 22 ನಿಗಮ-ಮಂಡಳಿಗಳ ಅಧ್ಯಕ್ಷ, ಉಪಾಧ್ಯಕ್ಷರ ಹೆಸರು ಅಂತಿಮಗೊಳಿಸಿದ ಸಿಎಂ, ಡಿಸಿಎಂ!

ಬೆಂಗಳೂರು : ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌ ಗುರುವಾರ ಸಂಜೆ ದೆಹಲಿಯಲ್ಲಿ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್ ಸಿಂಗ್‌ ಸುರ್ಜೇವಾಲಾ ಅವರೊಂದಿಗೆ ಸಭೆ ನಡೆಸಿದ್ದಾರೆ. ಈ ವೇಳೆ 22 ನಿಗಮಗಳ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ನೇಮಕ ಪಟ್ಟಿಯನ್ನು ಬಹುತೇಕ ಅಂತಿಮಗೊಳಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಮೂಲಕ ನೇಮಕ ಪಟ್ಟಿಗೆ ಇದೇ ತಿಂಗಳಾಂತ್ಯಕ್ಕೆ ಹೈಕಮಾಂಡ್‌ ಮುದ್ರೆ ಬೀಳುವ ಸಾಧ್ಯತೆಯಿದೆ.

ಅಲ್ಲದೆ, 950 ನಿರ್ದೇಶಕ/ಸದಸ್ಯರ ಸ್ಥಾನಗಳಲ್ಲಿ ಶೇ.70 ರಷ್ಟು ಸದಸ್ಯರ ಆಯ್ಕೆ ಪೂರ್ಣಗೊಂಡಿದ್ದು, ಉಳಿದ ಸದಸ್ಯರ ಆಯ್ಕೆಗೆ ಮತ್ತೊಂದು ಸುತ್ತಿನ ಸಭೆ ನಡೆಸುವ ನಿರೀಕ್ಷೆಯಿದೆ. ಹೀಗಾಗಿ ತಿಂಗಳಾಂತ್ಯದ ಒಳಗಾಗಿ ಇಲಾಖಾವಾರು ನೇಮಕಾತಿ ಆದೇಶ ಹೊರ ಬೀಳುವ ಸಾಧ್ಯತೆಯಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಇನ್ನು ವಿಧಾನಪರಿಷತ್‌ ಸದಸ್ಯರ ನೇಮಕ ವಿಚಾರದಲ್ಲಿ ಈಗಾಗಲೇ ರಾಜ್ಯ ಕಾಂಗ್ರೆಸ್‌ ವತಿಯಿಂದ 4 ಹೆಸರುಗಳನ್ನು ಅಂತಿಮಗೊಳಿಸಿ ಹೈಕಮಾಂಡ್‌ಗೆ ಕಳುಹಿಸಲಾಗಿದೆ. ಈ ಪಟ್ಟಿಯಲ್ಲಿರುವವರನ್ನೇ ನೇಮಕಾತಿ ಮಾಡಲಾಗುತ್ತದೆಯೇ ಎಂಬ ಕುರಿತು ಗೊಂದಲ ಮುಂದುವರೆದಿದ್ದು, ಹೈಕಮಾಂಡ್‌ನ ಅಂತಿಮ ನಿರ್ಧಾರದ ಬಗ್ಗೆ ಕುತೂಹಲ ಮೂಡಿದೆ.

ಮುಂದಿನ ಶುಕ್ರವಾರ ದೆಹಲಿಯಲ್ಲಿ ನಡೆಯಲಿರುವ ಒಬಿಸಿ ಸಮಾವೇಶದಲ್ಲಿ ರಾಹುಲ್‌ ಗಾಂಧಿ, ಸಿಎಂ ಸಿದ್ದರಾಮಯ್ಯ ಮುಖಾಮುಖಿ ಆಗಲಿದ್ದಾರೆ. ಈ ವೇಳೆ ಸಾಧ್ಯವಾದರೆ ಪರಿಷತ್‌ ಸದಸ್ಯರ ನೇಮಕದ ಬಗ್ಗೆ ಚರ್ಚೆ ನಡೆದರೆ ಪಟ್ಟಿ ಬೇಗ ಅಂತಿಮಗೊಳ್ಳಲಿದೆ. ಇಲ್ಲದಿದ್ದರೆ, ರಾಹುಲ್‌ ಗಾಂಧಿ ಅವರು ಉಭಯ ನಾಯಕರೊಂದಿಗೆ ಯಾವಾಗ ಭೇಟಿ ಮಾಡುವರೋ ಆಗಲೇ ಪಟ್ಟಿಯ ಬಗ್ಗೆ ಅಂತಿಮ ತೀರ್ಮಾನವಾಗಲಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ : SSLC ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್.. ಇನ್ಮುಂದೆ ಪರೀಕ್ಷೆಯಲ್ಲಿ 35 ಅಲ್ಲ, 33 ಅಂಕ ಬಂದ್ರೂ ಪಾಸ್!

 

 

 

Btv Kannada
Author: Btv Kannada

Read More