ಚಿಕ್ಕೋಡಿ : ಕಳೆದ 2 ತಿಂಗಳ ಅವಧಿಯಲ್ಲಿ ದೇಶದ 5 ರಾಜ್ಯಗಳಲ್ಲಿ 12 ಜನರನ್ನು ಬಲಿ ಪಡೆದಿರುವ ನರಸಂಬಂಧಿ ವ್ಯಾಧಿಯಾದ ಗುಯಿಲಿನ್ ಬರ್ರೆ ಸಿಂಡ್ರೋಮ್ (ಜಿಬಿಎಸ್)ಗೆ ಇದೀಗ ಕರ್ನಾಟಕದ ಮೊದಲ ವ್ಯಕ್ತಿ ಬಲಿಯಾಗಿದ್ದಾರೆ.
ಚಿಕ್ಕೋಡಿಯ 64 ವರ್ಷದ ವೃದ್ಧರೊಬ್ಬರು ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಶನಿವಾರ ಈ ಸ್ಲೋ-ಡೆಡ್ಲಿ ಸೋಂಕಿಗೆ ತುತ್ತಾಗಿ ಸಾವಿಗೀಡಾಗಿದ್ದಾರೆ. ಕರ್ನಾಟಕದವರು ಬಲಿಯಾದ ಮೊದಲ ಪ್ರಕರಣವಾಗಿದ್ದು, ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ಈಗಾಗಲೇ ಈ ವೈರಸ್ ಹೆಚ್ಚಾಗಿ ಕಾಣಿಸಿಕೊಂಡಿದೆ.
ಈ ವೈರಸ್ ತಗುಲು ನಿಖರ ಕಾರಣ ಏನು ಎಂಬುದು ಇದುವರೆಗೂ ಖಚಿತ ಮಾಹಿಲತಿ ಇಲ್ಲ. ಹಾಗಾಗಿ ವಿವಿಧ ರಾಜ್ಯಗಳಲ್ಲಿ ಈ ಕುರಿತು ಆತಂಕ ಉಂಟಾಗಿದೆ. ಮೊದಲಿಗೆ ಮಹಾರಾಷ್ಟ್ರ, ಆಂಧ್ರಪ್ರದೇಶದಲ್ಲಿ, ಅಸ್ಸಾಂ, ತಮಿಳುನಾಡಲ್ಲಿ ಕಾಣಿಸಿಕೊಂಡಿದ್ದ ಜಿಬಿಎಸ್, ಇದೀಗ ಕರ್ನಾಟಕದಲ್ಲೂ ಹಬ್ಬಿರೋ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಏನಿದು ಜಿಬಿಎಸ್? ಇದೊಂದು ನರಸಂಬಂಧಿ ವ್ಯಾಧಿ. ದೇಹದ ನರಮಂಡಲದ ಮೇಲೆ ಹಾಗೂ ರೋಗ ನಿರೋಧಕ ಶಕ್ತಿಯ ಮೇಲೆ ಇದು ಪ್ರಭಾವ ಬೀರುತ್ತದೆ. ಈ ವೈರಸ್ಗೆ ತುತ್ತಾದ ವ್ಯಕ್ತಿಯ ಕೈಕಾಲು ಮರಗಟ್ಟಿ, ಮಾಂಸ ಖಂಡಗಳು ಬಲಹೀನವಾಗಿ ನೋವು ಕಾಣಿಸಿಕೊಳ್ಳುತ್ತದೆ. ಇದರಿಂದಾಗಿ ಅಂಗಾಂಗಗಳ ನಡುವೆ ಸಹಕಾರ ಹಾಗೂ ಸಮತೋಲನ ಸಾಧಿಸಲು ಕಷ್ಟವಾಗುತ್ತದೆ. ಇದು ಹೆಚ್ಚಾಗಿ ನಡು ವಯಸ್ಕರು ಮತ್ತು ಮಕ್ಕಳಲ್ಲಿ ಕಂಡುಬರುತ್ತದೆ. ದೇಹದಲ್ಲಿನ ರೋಗನಿರೋಧಕ ಶಕ್ತಿಯು ನರಗಳ ಮೇಲೆ ದಾಳಿ ನಡೆಸಿದಾಗ ಜಿಬಿಎಸ್ ಉಂಟಾಗುತ್ತದೆ.
ಕಾರಣ ಏನು? ಜಿಬಿಎಸ್ ವ್ಯಾಧಿಗೆ ನಿಖರ ಕಾರಣ ಪತ್ತೆಯಾಗಿಲ್ಲವಾದರೂ, ಇದು ಕಲುಷಿತ ನೀರು, ಆಹಾರ ಸೇವನೆಯಿಂದ ನಮ್ಮ ದೇಹವನ್ನು ಸೇರುವ ವೈರಸ್ ಹಾಗೂ ಬ್ಯಾಕ್ಟೀರಿಯಾಗಳಿಂದ ಉಂಟಾಗುತ್ತದೆ. ಬ್ಯಾಕ್ಟೀರಿಯಾ ಅಥವಾ ವೈರಲ್ ಸೋಂಕು ಉಂಟಾಗಿದ್ದರೆ, ಇತ್ತೀಚೆಗಷ್ಟೇ ಲಸಿಕೆ ಪಡೆದಿದ್ದರೆ, ಶಸ್ತ್ರಚಿಕಿತ್ಸೆ ಮತ್ತು ನರರೋಗಗಳಿಗೆ ಒಳಗಾಗಿದ್ದರೆ ಈ ಕಾಯಿಲೆ ಬರುವ ಸಂಭವ ಅಧಿಕವಿರುತ್ತದೆ ಎನ್ನಲಾಗಿದೆ.
