ಆಂಧ್ರದಲ್ಲಿ ಬೆಂಗಳೂರಿನ ಇಬ್ಬರು ಬಿಜೆಪಿ ಮುಖಂಡರ ಬರ್ಬರ ಹತ್ಯೆ.. ಕತ್ತು ಸೀಳಿ ಹೆದ್ದಾರಿಯಲ್ಲಿ ಮೃತದೇಹ ಬಿಸಾಡಿದ ಹಂತಕರು!

ಬೆಂಗಳೂರು : ಬೆಂಗಳೂರು ಮೂಲದ ಇಬ್ಬರು ಉದ್ಯಮಿ ಹಾಗೂ ಬಿಜೆಪಿ ಮುಖಂಡರನ್ನು ಆಂಧ್ರಪ್ರದೇಶ ರಾಜ್ಯದ ಬಾಪಟ್ಲ ಜಿಲ್ಲೆಯಲ್ಲಿ ಬರ್ಬರವಾಗಿ ಕತ್ತು ಸೀಳಿ ಕೊಲೆ ಮಾಡಿ, ಹೆದ್ದಾರಿ ಬಳಿ ಮೃತದೇಹ ಬಿಸಾಡಿರುವ ಘಟನೆ ನಡೆದಿದೆ. ಮೃತರು ತಂದೆ-ಮಗ ಆಗಿದ್ದು, ರಿಯಲ್ ಎಸ್ಟೇಟ್‌ಗೆ ಸಂಬಂಧಿಸಿದಂತೆ ಕೋರ್ಟ್ ಕೇಸಿಗೆ ತೆರಳಿದ್ದಾಗ, ಇಬ್ಬರನ್ನೂ ಅಪಹರಿಸಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಮೃತರನ್ನು ಬೆಂಗಳೂರಿನ ಮಹದೇವಪುರದ ಬಿಜೆಪಿ ಯುವ ಮುಖಂಡ ಪ್ರಶಾಂತ್​ ರೆಡ್ಡಿ ಹಾಗೂ ತಂದೆ ವೀರಸ್ವಾಮಿ ರೆಡ್ಡಿ ಎಂದು ಗುರುತಿಸಲಾಗಿದೆ.

ವೀರಸ್ವಾಮಿರೆಡ್ಡಿ
ವೀರಸ್ವಾಮಿ ರೆಡ್ಡಿ

ವೀರಸ್ವಾಮಿ ರೆಡ್ಡಿ ಹಾಗೂ ಪ್ರಶಾಂತ್​ ರೆಡ್ಡಿ ಬೆಂಗಳೂರಿನ ಕಾಡುಗೋಡಿಯಲ್ಲಿ ನೆಲೆಸಿದ್ದು, ಸಕ್ರಿಯವಾಗಿ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು. ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದ ಕೋರ್ಟ್ ಕೇಸ್ ವಿಚಾರಣೆಗೆ ಆಂಧ್ರಪ್ರದೇಶಕ್ಕೆ ತೆರಳಿದ್ದರು. ಈ ವೇಳೆ ಇಬ್ಬರನ್ನೂ ಅಪಹರಿಸಿ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಬೆಂಗಳೂರಿನಲ್ಲಿ ಪ್ರಶಾಂತ್ ಮತ್ತು ವೀರಸ್ವಾಮಿ ರೆಡ್ಡಿ ಇಬ್ಬರೂ ಮಾರ್ವಲ್ ಬಿಲ್ಡರ್ ಮಾಧವ ರೆಡ್ಡಿ ಮತ್ತು ಅನಿಲ್ ರೆಡ್ಡಿ ಮೇಲೆ ಚೆಕ್ ಬೌನ್ಸ್ ಕೇಸು ದಾಖಲಿಸಿದ್ದರು. ಇದಕ್ಕೆ ಪ್ರತಿಯಾಗಿ ಆಂಧ್ರ ಮೂಲದ ಮಾಧವ ರೆಡ್ಡಿ ಮತ್ತು ಅನಿಲ್ ರೆಡ್ಡಿ ಅಪ್ಪ-ಮಗನ ಮೇಲೆ ಚೆಕ್ ಬೌನ್ಸ್ ಕೇಸ್‌ ದಾಖಲಿಸಿದ್ದರು. ನಿನ್ನೆ ವಿಮಾನದ ಮೂಲಕ ಅಪ್ಪ-ಮಗ ಕೋರ್ಟ್ ಕೇಸ್‌ ವಿಚಾರಣೆಗೆ ತೆರಳಿದ್ದರು.

ಮಧ್ಯಾಹ್ನ ಕೋರ್ಟ್ ಬಳಿಯೇ ತಂದೆ-ಮಗ ಇಬ್ಬರನ್ನೂ ಮಾತುಕತೆಗೆ ಕರೆದ ಮಾಧವರೆಡ್ಡಿ ಮತ್ತು ಅನಿಲ್ ರೆಡ್ಡಿ ರಾಜಿಯಾಗೋಣ ಎಂದು ಮಾತನಾಡುತ್ತಲೇ, ತಮ್ಮ ಸ್ಕಾರ್ಪಿಯೋ ಕಾರಿನಲ್ಲಿ ಕೂರಿಸಿಕೊಂಡ ಕಿಡ್ನ್ಯಾಪ್ ಮಾಡಿದ್ದಾರೆ. ಇದಾದ ಬಳಿಕ ಇಬ್ಬರ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿ ಹೆದ್ದಾರಿಯಲ್ಲೇ ಬೀಸಾಡಿ ಹೋಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಇನ್ನೂ ಘಟನಾ ಸ್ಥಳಕ್ಕೆ ಬಾಪಟ್ಲ ಜಿಲ್ಲಾ ಎಸ್‌ಪಿ ಶ್ರೀನಿವಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಲಾಗಿದೆ. ಇಂದು (ಜುಲೈ 24) ಮೃತರ ಪಾರ್ಥಿವ ಶರೀರಗಳು ಬೆಂಗಳೂರಿಗೆ ತಲುಪುವ ನಿರೀಕ್ಷೆಯಿದೆ. ಕೊಲೆಯಾದ ತಂದೆ-ಮಗ ಬಿಜೆಪಿ ಮಾಜಿ ಸಚಿವ ಅರವಿಂದ ಲಿಂಬಾವಳಿ ಆಪ್ತರಾಗಿದ್ದರು ಎಂದು ತಿಳಿದುಬಂದಿದ್ದು, ವೀರಸ್ವಾಮಿ ರೆಡ್ಡಿ ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದರು ಎನ್ನಲಾಗಿದೆ. ಪ್ರಶಾಂತ್ ರೆಡ್ಡಿ ಮಹದೇವಪುರ ಬಿಜೆಪಿಯ ಯುವ ಮೋರ್ಚದ ಅಧ್ಯಕ್ಷರಾಗಿದ್ದಾರೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು, ಕೆ.ವಿ. ಪ್ರಶಾಂತ್ ರೆಡ್ಡಿ ಹಾಗೂ ಅವರ ತಂದೆ ವೀರಸ್ವಾಮಿರೆಡ್ಡಿ ಅವರು ಹತ್ಯೆಗೀಡಾಗಿರುವ ಘಟನೆ ಅತ್ಯಂತ ಅಮಾನವೀಯ ಹಾಗೂ ದುಃಖಕರ, ಈ ದುರ್ಘಟನೆಯನ್ನು ಖಂಡಿಸಿ ಮೃತರ ಆತ್ಮಕ್ಕೆ ಶಾಂತಿ ಕೋರುವೆ. ಕೊಲೆಗಡುಕರನ್ನು ಬಂಧಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ತನಿಖೆ ಚುರುಕುಗೊಳಿಸಲಿ, ನೊಂದ ಕುಟುಂಬಕ್ಕೆ ನ್ಯಾಯ ಸಿಗಲಿ. ಮೃತರ ಕುಟುಂಬ ವರ್ಗದವರಿಗೆ ಈ ದುಃಖ ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ ಎಂದು ಹೇಳಿದ್ದಾರೆ.

 

Btv Kannada
Author: Btv Kannada

Read More