ದಾಖಲೆ ಲಾಭ ಗಳಿಸಿದ ರಿಲಯನ್ಸ್ ಇಂಡಸ್ಟ್ರೀಸ್.. ಕೇವಲ 3 ತಿಂಗಳಲ್ಲಿ ಬರೋಬ್ಬರಿ 26,994 ಕೋಟಿ ರೂ. ಪ್ರಾಫಿಟ್!

ನವದೆಹಲಿ : ದೇಶದ ನಂಬರ್​ 1 ಉದ್ಯಮಿ ಮುಕೇಶ್‌ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಶುಕ್ರವಾರ ಪ್ರಸಕ್ತ ವರ್ಷದ ಮೊದಲ ತ್ರೈಮಾಸಿಕ ಅವಧಿಯ ಆರ್ಥಿಕ ಫಲಿತಾಂಶವನ್ನು ಪ್ರಕಟಿಸಿದೆ. ಏಪ್ರಿಲ್‌ನಿಂದ ಜೂನ್‌ವರೆಗಿನ ಅವಧಿಯಲ್ಲಿ 26,994 ಕೋಟಿ ರೂ. ಲಾಭಗಳಿಸಿದ್ದು, ಇದು ಈವರೆಗಿನ ಅತ್ಯಧಿಕ ತ್ರೈಮಾಸಿಕ ಲಾಭವಾಗಿದೆ. ಹಿಂದಿನ ವರ್ಷದ ಇದೇ ಅವಧಿಗಿಂತ ಇದು ಶೇ. 78.3ರಷ್ಟು ಬೆಳವಣಿಗೆ ಕಂಡಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಕಂಪನಿ 15,138 ಕೋಟಿ ರೂ. ಲಾಭ ಗಳಿಸಿತ್ತು ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

ನಿವ್ವಳ ಲಾಭವು ಜನವರಿಯಿಂದ ಮಾರ್ಚ್‌ವರೆಗಿನ ತ್ರೈಮಾಸಿಕದಲ್ಲಿ ಗಳಿಸಿದ 19,407 ಕೋಟಿ ರೂ.ಗೆ ಹೋಲಿಸಿದರೆ ಶೇ. 39ರಷ್ಟು ಹೆಚ್ಚಾಗಿದೆ. ರಿಟೇಲ್ ಮತ್ತು ದೂರಸಂಪರ್ಕ ಕ್ಷೇತ್ರಗಳಲ್ಲಿನ ಏರಿಕೆಯನ್ನು ಕಂಪನಿ ಕಾಯ್ದುಕೊಂಡಿದೆ. ಜಿಯೋಗೆ ಅದರ ಗ್ರಾಹಕರ ಸಂಖ್ಯೆಯ ಏರಿಕೆಯಿಂದ ಲಾಭವಾಗಿದ್ದರೆ, ಅಂಗಡಿಗಳ ವಿಸ್ತ್ರತ ಜಾಲದಲ್ಲಿ ಹೆಚ್ಚಿನ ಗ್ರಾಹಕರ ಆಗಮನದಿಂದ ರಿಟೇಲ್ ವ್ಯವಹಾರ ಲಾಭ ಮಾಡಿದೆ.

ಕಾರ್ಯಾಚರಣೆಯಿಂದ ಬಂದ ಆದಾಯ ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ ಆಗಿದ್ದ 2.36 ಲಕ್ಷ ಕೋಟಿ ರೂ. ಗೆ ಹೋಲಿಸಿದರೆ ಶೇ. 5.26ರಷ್ಟು ಏರಿಕೆಯಾಗಿ 2.48 ಲಕ್ಷ ಕೋಟಿ ರೂ.ಗೆ ತಲುಪಿದೆ. ಕಚ್ಚಾ ತೈಲ ಬೆಲೆ ಕುಸಿತದಿಂದಾಗಿ ತೈಲ ಸಂಸ್ಕರಣೆ ಮತ್ತು ಪೆಟ್ರೋಕೆಮಿಕಲ್ ವ್ಯವಹಾರ ವಾರ್ಷಿಕವಾಗಿ ಶೇ. 1.5ರಷ್ಟು ಕಡಿಮೆಯಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ರಿಲಯನ್ಸ್ ಒಡೆಯ ಮುಕೇಶ್ ಅಂಬಾನಿ, ಕಚ್ಚಾ ತೈಲ ಬೆಲೆಯ ಭಾರಿ ಏರಿಳಿತ, ಇಂಧನ ವಲಯದ ತೀವ್ರ ಅನಿಶ್ಚಿತತೆ ಹೊರತಾಗಿಯೂ ನಮ್ಮ ಕಂಪನಿ ಪ್ರಬಲ ಬೆಳವಣಿಗೆ ದಾಖಲಿಸಿರುವುದು ಸಂತಸ ಉಂಟು ಮಾಡಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ದೂರು ಕೊಟ್ಟ ಕೂಡಲೇ FIR ಮಾಡಿ – ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಖಡಕ್ ಆದೇಶ!

Btv Kannada
Author: Btv Kannada

Read More