ಬೆಂಗಳೂರು : ಬಿ ಖಾತಾ ಹೊಂದಿರುವ ಬೆಂಗಳೂರಿಗರಿಗೆ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ. ಬೆಂಗಳೂರಿನಲ್ಲಿ ಬಿ ಖಾತಾ ಹೊಂದಿರುವ ಆಸ್ತಿ ಮಾಲೀಕರ ಸಮಸ್ಯೆಗಳ ನಿವಾರಣೆ ನಿಟ್ಟಿನಲ್ಲಿ ಸಚಿವ ಸಂಪುಟ ಮಹತ್ವದ ನಿರ್ಧಾರ ಕೈಗೊಂಡಿದ್ದು, ಬಿ ಖಾತಾ ಹೊಂದಿರುವ ಎಲ್ಲರಿಗೆ ಎ ಖಾತಾ ಕಾನೂನು ಮಾನ್ಯತೆ ನೀಡಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಎ ಖಾತಾದಂತೆ ಬಿ ಖಾತಾಗೂ ಅಧಿಕೃತ ಮಾನ್ಯತೆ ನೀಡಲು ಸಂಪುಟ ತೀರ್ಮಾನಿಸಿದ್ದು, ಶೀಘ್ರದಲ್ಲೇ ಈ ಬಗ್ಗೆ ರಾಜ್ಯ ಸರ್ಕಾರದಿಂದ ಅಧಿಕೃತ ಅಧಿಸೂಚನೆ ಹೊರಬೀಳಲಿದೆ. 2020ರ ಮೇ 22ರಿಂದ ಅನ್ವಯ ಆಗಲಿದ್ದು, 2024 ಸೆ.30ರವರೆಗೆ ಮಾತ್ರ ಹಾಲಿ ಇರುವ ಬಿ ಖಾತಾಗಳನ್ನು ಎಲ್ಲಾ ಕಾನೂನು ಉದ್ದೇಶಕ್ಕೆ ಅಧಿಕೃತ ಖಾತಾ ಎಂದು ಪರಿಗಣಿಸುವುದಾಗಿ ಸಂಪುಟ ತೀರ್ಮಾನಿಸಿದೆ. ಈ ಮೂಲಕ ಬಿ ಖಾತಾಗಳಿಗಿದ್ದ ಬಿಬಿಎಂಪಿ ಪ್ಲಾನಿಂಗ್, ಓಸಿ, ಬ್ಯಾಂಕ್ ಲೋನ್ ಸಮಸ್ಯೆಗೆ ಮುಕ್ತಿ ಸಿಗಲಿದ್ದು, ಸರ್ಕಾರದ ಮಾನದಂಡಗಳು ಮುಂದಿನ ದಿನಗಗಳಲ್ಲಿ ಸ್ಪಷ್ಟವಾಗಲಿದೆ.
ಯಾರಾರಿಗೆಲ್ಲ ಅನುಕೂಲ?
- ಬಿಬಿಎಂಪಿಯಿಂದ ‘ಬಿ’ ಖಾತಾ ಪಡೆದಿರುವ ನಿವೇಶನದಾರರು
- ಅನಧಿಕೃತ ನಿವೇಶನ/ ಬಡಾವಣೆಯಲ್ಲಿ ‘ಬಿ’ ಖಾತಾ ಹೊಂದಿದ್ದ ಅಥವಾ ಹೊಂದಿರದ ಕಟ್ಟಡಗಳು
- ಏಕ ನಿವೇಶನದಲ್ಲಿ ಬಿಬಿಎಂಪಿ ಖಾತಾ ಹೊಂದದೆ ನಿರ್ಮಾಣವಾಗಿರುವ ಅಪಾರ್ಟ್‌ಮೆಂಟ್
- ಜಿಲ್ಲಾಧಿಕಾರಿಯಿಂದ ಭೂ ಪರಿವರ್ತನೆಯಾಗಿ, ಕೆಟಿಸಿಪಿ ಕಾಯ್ದೆಯಂತೆ ಅನುಮೋದನೆ ಪಡೆಯದ ಖಾಲಿ ನಿವೇಶನ
- ಭೂ ಪರಿವರ್ತನೆಯಾಗಿ, ನೋಂದಣಿ ಪತ್ರದ ಮೂಲಕ ವಿಭಾಗಗೊಂಡಿರುವ ಖಾಲಿ ನಿವೇಶನಗಳು
- ಭೂ ಪರಿವರ್ತನೆಯಾಗದೆ ವಿಭಾಗವಾಗದ ಸರ್ವೆ ಸಂಖ್ಯೆ/ ಹಿಸ್ಸಾ ಸಂಖ್ಯೆ ಖಾಲಿ ನಿವೇಶನ
- ಭೂ ಪರಿವರ್ತನೆಯಾಗದೆ ಸರ್ವೆ ಸಂಖ್ಯೆ/ ಹಿಸ್ಪಾ ಸಂಖ್ಯೆಯಲ್ಲಿ ಅನಧಿಕೃತ ವಾಗಿ ಭಾಗವಾಗಿ 2024ರ ಸೆಪ್ಟೆಂಬರ್ 30ರೊಳಗೆ ನೋಂದಣಿ ಪತ್ರದ ಮೂಲಕ ದಾಖಲೆ ಹೊಂದಿರುವ ನಿವೇಶನ
ಇದೇ ವೇಳೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿ 5 ಪಾಲಿಕಗಳ ರಚನೆಗೆ ಕ್ಯಾಬಿನೆಟ್ ಒಪ್ಪಿಗೆ ಸೂಚಿಸಿದೆ. ಆದರೆ, 5 ಪಾಲಿಕೆಗಳ ವ್ಯಾಪ್ತಿ ಪ್ರದೇಶ, ಗಡಿಗಳ ವಿಚಾರದಲ್ಲಿ ಗೊಂದಲ ಇದ್ದು, ಶಾಸಕರ ಸಭೆ ಕರೆದು ಅಂತಿಮಗೊಳಿಸುತ್ತೇವೆ ಎಂದು ಕ್ಯಾಬಿನೆಟ್ ಸಲಹೆ ನೀಡಿದೆ.
ಪರಮಾಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ಕ್ಯಾಬಿನೆಟ್ ತಾತ್ವಿಕ ಅನುಮೋದನೆ ನೀಡಿದ್ದು, ಎನ್‌ಟಿಪಿಸಿ ಗುರುತಿಸಿರುವ ಸಂಭಾವ್ಯ ಸ್ಥಳಗಳ ಪರಿಶೀಲನೆಗೆ ನಿರ್ಧಾರ ಮಾಡಿದೆ. ಇಡೀ ಕರ್ನಾಟಕದಲ್ಲಿ ಎಲ್ಲೆಲ್ಲಿ ಸಾಧ್ಯವೋ ಆ ಸ್ಥಳಗಳ ಅಧ್ಯಯನ ಮಾಡಲು ಕ್ಯಾಬಿನೆಟ್ ನಿರ್ಧರಿಸಿದೆ. ಅಂದಹಾಗೆ 3 ಸ್ಥಳಗಳ ಪರಿಶೀಲನೆಗೆ ಎನ್ಟಿಪಿಸಿ ಸಲಹೆ ನೀಡಿದ್ದರೂ, ಇಡೀ ಕರ್ನಾಟಕದಲ್ಲಿ ಒಟ್ಟಾರೆ ಸ್ಥಳ ಪರಿಶೀಲನೆ ಅಧ್ಯಯನ ನಡೆಸಲು ಕ್ಯಾಬಿನೆಟ್ ತೀರ್ಮಾನಿಸಿದೆ.
ಇದನ್ನೂ ಓದಿ : ಚಿತ್ರರಂಗಕ್ಕೆ ಗಣಿದಣಿ ಪುತ್ರ ಕಿರೀಟಿ ಗ್ರ್ಯಾಂಡ್ ಎಂಟ್ರಿ – ಇಂದು ದೇಶಾದ್ಯಂತ ‘ಜೂನಿಯರ್’ ಸಿನಿಮಾ ರಿಲೀಸ್!







