‘ಶಕ್ತಿ ಯೋಜನೆ’ ಸಕ್ಸಸ್ ಸೆಲೆಬ್ರೇಶನ್ – ಇಂದು ಕಂಡಕ್ಟರ್ ಆಗಲಿದ್ದಾರೆ ಸಿಎಂ ಸಿದ್ದು.. ಯಾವ ಬಸ್‌ನಲ್ಲಿ ಟಿಕೆಟ್ ಕೊಡ್ತಾರೆ ಗೊತ್ತಾ?

ಬೆಂಗಳೂರು : ಕೆಎಸ್​ಆರ್​​ಟಿಸಿ, ಬಿಸಿಎಂಟಿ ಸೇರಿದಂತೆ ಕರ್ನಾಟಕದ ಸಾರಿಗೆ ಬಸ್‍ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿರುವ ‘ಶಕ್ತಿ’ ಯೋಜನೆಯನ್ನು ಸದುಪಯೋಗಪಡಿಸಿಕೊಂಡು ಉಚಿತವಾಗಿ ಬಸ್‌ ಪ್ರಯಾಣ ಮಾಡಿರುವ ಮಹಿಳಾ ಫಲಾನುಭವಿಗಳ ಸಂಖ್ಯೆ 500 ಕೋಟಿ ದಾಟಿರುವ ಹಿನ್ನೆಲೆಯಲ್ಲಿ ಯೋಜನೆಯ ವಿಶಿಷ್ಟ ಟಿಕೆಟ್ ಅನ್ನು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿತರಣೆ ಮಾಡಲಿದ್ದಾರೆ.

ಬೆಂಗಳೂರಿನ ಕುಮಾರಪಾರ್ಕ್‌ ಈಸ್ಟ್‌ ಗೇಟ್ ಬಳಿ ನಡೆಯುವ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ 500ನೇ ಕೋಟಿ ಟಿಕೆಟ್‌ ಅನ್ನು ಸಾಂಕೇತಿಕವಾಗಿ ಮಹಿಳೆಯರಿಗೆ ವಿತರಣೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರು ಭಾಗಿಯಾಗಲಿದ್ದಾರೆ.

ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ 2023ರ ಜೂನ್‌ 11ರಂದು ಆರಂಭವಾಗಿದ್ದು, ಈ ಯೋಜನೆ ಅಡಿಯಲ್ಲಿ ಬಸ್​​ನಲ್ಲಿ ಮಹಿಳೆಯರು ಪ್ರಯಾಣಿಸಿರುವ ಟಿಕೆಟ್‌ ಮೊತ್ತ 12,500 ಕೋಟಿ ರೂ.ಗಿಂತ ಹೆಚ್ಚಾಗಿದೆ. ಮಹಿಳೆಯರ ಮನ ಗೆದ್ದಿರುವ ಈ ಯೋಜನೆಯಡಿ ಫಲಾನುಭವಿಗಳ ಸಂಖ್ಯೆ 500 ಕೋಟಿ ದಾಟುತ್ತಿರುವ ಹಿನ್ನೆಲೆಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿಯ ರಾಜ್ಯಾಧ್ಯಕ್ಷ ಎಚ್‌.ಎಂ. ರೇವಣ್ಣ ಅವರು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಸಮಿತಿಗಳ ಪದಾಧಿಕಾರಿಗಳು ಇಂದು ಪ್ರತಿ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸಿಹಿ ಹಂಚಿ ಸಂಭ್ರಮಿಸಬೇಕೆಂದು ಸೂಚನೆ ನೀಡಿದ್ದಾರೆ.

ರಾಜ್ಯದ ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಪ್ರತಿನಿತ್ಯ ಸುಮಾರು ಒಂದು ಕೋಟಿಗೂ ಅಧಿಕ ಮಂದಿ ಪ್ರಯಾಣಿಸುತ್ತಾರೆ. ಅದರಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ 80 ಲಕ್ಷದವರೆಗೆ ತಲುಪಿದ್ದು, ‘ಶಕ್ತಿ ಯೋಜನೆಯಡಿ ಪ್ರತಿನಿತ್ಯ ರೂ 20 ಕೋಟಿಗಳಷ್ಟು ಉಚಿತ ಟಿಕೆಟ್‌ ಅನ್ನು ಮಹಿಳೆಯರಿಗೆ ವಿತರಿಸಲಾಗುತ್ತಿದೆ.

ಶಕ್ತಿ’ ಯೋಜನೆ : ಕಾಂಗ್ರೆಸ್ ಸರಕಾರವು ರಾಜ್ಯದ ಎಲ್ಲ ಮಹಿಳೆಯರಿಗೆ ರಾಜ್ಯದೊಳಗೆ ಉಚಿತ ಬಸ್ ಪ್ರಯಾಣವನ್ನು ಒದಗಿಸುವ ನಿಟ್ಟಿನಲ್ಲಿ ‘ಶಕ್ತಿ’ ಯೋಜನೆಯನ್ನು 2023ರ ಜೂನ್ 11ರಿಂದ ಜಾರಿ ಮಾಡಿದೆ. ಈ ಯೋಜನೆಯಡಿಯಲ್ಲಿ ಕೆಎಸ್ಸಾರ್ಟಿಸಿ, ಬಿಎಂಟಿಸಿ, ಕೆಕೆಆರ್‌ಟಿಸಿ ಮತ್ತು ಎನ್‍ಡಬ್ಲ್ಯೂಆರ್‌ಟಿಸಿ ಸಾರಿಗೆ ಬಸ್‍ಗಳಲ್ಲಿ ಮಹಿಳೆಯರು ರಾಜ್ಯದೊಳಗೆ ಉಚಿತವಾಗಿ ಪ್ರಯಾಣಿಸಬಹುದಾಗಿದೆ.

ಇದನ್ನೂ ಓದಿ : ಸಿಗಂದೂರು ಸೇತುವೆ ಉದ್ಘಾಟನೆ ಕಾರ್ಯಕ್ರಮ ಮುಂದೂಡಿ – ನಿತಿನ್​ ಗಡ್ಕರಿಗೆ ಸಿಎಂ ಸಿದ್ದರಾಮಯ್ಯ ಪತ್ರ!

Btv Kannada
Author: Btv Kannada

Read More