ಮಹಾನ್ ಸಿನಿಮಾಗೆ ನಾಯಕಿಯಾಗಿ ‘ರಂಗಿತರಂಗ’ ಖ್ಯಾತಿಯ ರಾಧಿಕಾ ನಾರಾಯಣ್!

ಕನ್ನಡದಲ್ಲಿ ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನಿರ್ದೇಶಿಸಿರುವ ಪಿ.ಸಿ.ಶೇಖರ್ ನಿರ್ದೇಶನದ, ವಿಜಯ್ ರಾಘವೇಂದ್ರ ನಾಯಕನಾಗಿ ನಟಿಸುತ್ತಿರುವ “ಮಹಾನ್” ಚಿತ್ರದ ಪ್ರಮುಖಪಾತ್ರದಲ್ಲಿ “ರಂಗಿತರಂಗ” ಖ್ಯಾತಿಯ ರಾಧಿಕಾ ನಾರಾಯಣ್ ನಟಿಸುತ್ತಿದ್ದಾರೆ. ವಿಶೇಷ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ “ಮಹಾನ್” ತಂಡಕ್ಕೆ ರಾಧಿಕಾ ನಾರಾಯಣ್ ಅವರಿಗೆ ಸ್ವಾಗತ ಕೋರಿದೆ. “ಮಹಾನ್” ಸಿನಿಮಾ ಪ್ರತಿಷ್ಠಿತ ಸಂಸ್ಥೆಯ ಸಹಯೋಗದೊಂದಿಗೆ ಆಕಾಶ್ ಪಿಕ್ಚರ್ಸ್ ಲಾಂಛನದಲ್ಲಿ ಪ್ರಕಾಶ್ ಬುದ್ದೂರು ಅವರು ನಿರ್ಮಿಸುತ್ತಿದ್ದಾರೆ.

“ಮಹಾನ್” ರೈತರ ಕುರಿತಾದ ಚಿತ್ರ. ಈ ಚಿತ್ರದಲ್ಲಿ ನಟಿಸಲು ನನಗೆ ಬಹಳ ಸಂತೋಷವಾಗಿದೆ. ಪಿ.ಸಿ.ಶೇಖರ್ ಅವರ ನಿರ್ದೇಶನದಲ್ಲಿ ನನಗೆ ನಟಿಸಬೇಕೆಂಬ ಆಸೆಯಿತ್ತು. ಆದರೆ ಇಷ್ಟು ದಿನ ಅದು ಸಾಧ್ಯವಾಗಿರಲಿಲ್ಲ. ಈಗ ಅವರ ನಿರ್ದೇಶನದ “ಮಹಾನ್” ಚಿತ್ರದಲ್ಲಿ ನಟಿಸುತ್ತಿದ್ದೇನೆ. ಅದ್ಭುತ ನಟ ವಿಜಯ ರಾಘವೇಂದ್ರ ಅವರು ನಾಯಕನ್ನಾಗಿ ಹಾಗೂ ಪ್ರತಿಷ್ಠಿತ ವಿದ್ಯಾಸಂಸ್ಥೆ ನಡೆಸುತ್ತಿರುವ ಪ್ರಕಾಶ್ ಅವರು ನಿರ್ಮಾಣ ಮಾಡುತ್ತಿರುವ ಮತ್ತು ಸಮಾಜಿಕ ಕಳಕಳಿ ಹೊಂದಿರುವ ಈ ಚಿತ್ರದಲ್ಲಿ ಅಭಿನಯಿಸುತ್ತಿರುವುದು ಬಹಳ ಖುಷಿ. ಇನ್ನೂ ನಿರ್ದೇಶಕರು ಇದೊಂದು ರೈತರ ಕುರಿತಾದ ಚಿತ್ರ ಎಂದು ಹೇಳಿದ ತಕ್ಷಣ ನನಗೆ ಕಥೆ ಬಹಳ ಇಷ್ಟವಾಯಿತು. ನಾನು ಈ ಚಿತ್ರದಲ್ಲಿ ಹಳ್ಳಿಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ ಎಂದು ನಟಿ ರಾಧಿಕಾ ನಾರಾಯಣ್ ಹೇಳಿದರು.

ನಿರ್ದೇಶಕ ಪಿ.ಸಿ.ಶೇಖರ್ ಅವರು, ಈ ಹಿಂದೆ ರಾಧಿಕಾ ನಾರಾಯಣ್ ಅವರ ಜೊತೆಗೆ ಎರಡು ಮೂರು ಕಥೆಗಳನ್ನು ಚರ್ಚಿಸಿದ್ದೆ. ಅದು ಆಗಿರಲಿಲ್ಲ. ಈಗ ನನ್ನ ನಿರ್ದೇಶನದ “ಮಹಾನ್” ಚಿತ್ರದಲ್ಲಿ ರಾಧಿಕಾ ನಾರಾಯಣ್ ಅವರು ನಟಿಸುತ್ತಿರುವುದು ಬಹಳ ಸಂತೋಷವಾಗಿದೆ. ಅವರ ಪಾತ್ರ ಕೂಡ ವಿಭಿನ್ನವಾಗಿರಲಿದೆ ಎಂದರು.

ನಮ್ಮ ಸಂಸ್ಥೆಯ ಮೊದಲ ನಿರ್ಮಾಣದ ಚಿತ್ರದಲ್ಲಿ “ರಂಗಿತರಂಗ” ಸೇರಿದಂತೆ ಕನ್ನಡದ ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿರುವ ರಾಧಿಕಾ ಚೇತನ್ ಅವರು ಪ್ರಮುಖಪಾತ್ರದಲ್ಲಿ ಅಭಿನಯಿಸುತ್ತಿರುವುದು ಸಂತಸ ತಂದಿದೆ ಎಂದು ನಿರ್ಮಾಪಕ‌ ಪ್ರಕಾಶ್ ಬುದ್ದೂರು ತಿಳಿಸಿದ್ದಾರೆ‌. ಇತ್ತೀಚೆಗಷ್ಟೇ ಈ ಚಿತ್ರದ ಶೀರ್ಷಿಕೆಯನ್ನು ಕರುನಾಡ ಚಕ್ರವರ್ತಿ ಶಿವರಾಜ್​ಕುಮಾರ್ ಅನಾವರಣ ಮಾಡಿದ್ದರು.

ಇದನ್ನೂ ಓದಿ : ನಮ್ಮ ವಕೀಲ್ ಸಾಬ್ ಜಗ್ಗಣ್ಣ ಅಟಕಾಯಿಸಿಕೊಂಡ ಮೇಲೆ ಆಟೋ ಚಾಲಕರಿಗೆ ದಿನಕ್ಕೊಂದು ಸಂಕಷ್ಟ – ಇದು 5,000 ಫೈನ್ ಸಬ್ಜೆಕ್ಟ್!

Btv Kannada
Author: Btv Kannada

Read More