ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ಒಪ್ಪಿಗೆ!

ನವದೆಹಲಿ : ಶರಾವತಿ ಕಣಿವೆಯ ಸಿಂಹದ ಬಾಲದ ಸಿಂಗಳೀಕ ಅಭಯಾರಣ್ಯದಲ್ಲಿ ಅನುಷ್ಠಾನಗೊಳ್ಳಲಿರುವ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ತಾತ್ವಿಕ ಒಪ್ಪಿಗೆ ನೀಡಿದೆ. ಹಾಗೆಯೇ 28 ಷರತ್ತುಗಳನ್ನು ಪಾಲಿಸಿ ಯೋಜನೆ ಅನುಷ್ಠಾನಗೊಳಿಸಬೇಕು ಎಂದು ಸೂಚಿಸಿದೆ.

ವಿದ್ಯುತ್ ಉತ್ಪಾದನೆಗೆ ಬಳಸಿದ ನೀರನ್ನು ಮತ್ತೆ ಮತ್ತೆ ಪಂಪ್‌ಗಳ ಮೂಲಕ ಹಿಂದಕ್ಕೆ ಕೊಂಡೊಯ್ದು, ತಲಾ 250 ಮೆಗಾವಾಟ್ ಸಾಮರ್ಥ್ಯದ ಎಂಟು ಜಲ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಬಳಸುವ 9,000 ಸಾವಿರ ಕೋಟಿ ಮೊತ್ತದ ಯೋಜನೆ ಇದು. ಒಟ್ಟು 2,000 ಮೆಗಾವಾಟ್ ವಿದ್ಯುತ್‌ ಉತ್ಪಾದನೆಗೆ ಯೋಜನೆ ರೂಪಿಸಲಾಗಿದೆ. ಯೋಜನೆಗೆ ಡಿಪಿಆರ್‌ಗೆ ಕೇಂದ್ರ ವಿದ್ಯುತ್ ಪ್ರಾಧಿಕಾರವು 2024ರ ಆಗಸ್ಟ್‌ನಲ್ಲಿ ಅನುಮೋದನೆ ನೀಡಿತ್ತು. ಈ ಯೋಜನೆಗೆ 352.77 ಎಕರೆ ಜಮೀನು ಅಗತ್ಯವಿದೆ. ಅದರಲ್ಲಿ 133.81 ಎಕರೆ ಅರಣ್ಯ ಭೂಮಿಯಾಗಿದೆ.

ಕೇಂದ್ರ ಅರಣ್ಯ ಸಚಿವ ಭೂಪೆಂದರ್ ಯಾದವ್‌ ಅಧ್ಯಕ್ಷತೆಯಲ್ಲಿ ನವದೆಹಲಿಯಲ್ಲಿ ನಡೆದ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಯ 84ನೇ ಸಭೆಯಲ್ಲಿ ಈ ಯೋಜನೆಯಿಂದಾಗಿ ಸಿಂಹದ ಬಾಲದ ಸಿಂಗಳೀಕ ಸೇರಿದಂತೆ ವಿವಿಧ ವನ್ಯಜೀವಿಗಳ ಮೇಲೆ ಪರಾಮರ್ಶೆ ನಡೆಸಲಾಗಿದೆ.

ಈ ಅಭಯಾರಣ್ಯದಲ್ಲಿ 700ಕ್ಕೂ ಹೆಚ್ಚು ಸಿಂಹದ ಬಾಲದ ಸಿಂಗಳೀಕಗಳಿವೆ. ಇಷ್ಟೊಂದು ಸಿಂಗಳೀಕಗಳು ಬೇರೆ ಯಾವುದೇ ಸಂರಕ್ಷಿತ ಪ್ರದೇಶದಲ್ಲಿ ಇಲ್ಲ ಎಂಬ ವರದಿಗಳನ್ನು ಮಂಡಳಿ ಗಮನಿಸಿದೆ. ಇನ್ನು ಈ ಯೋಜನೆಗೆ ಒಪ್ಪಿಗೆ ನೀಡುವುದಕ್ಕೆ ಸಮಿತಿಯ ಸದಸ್ಯರಾದ ಡಾ. ಎಚ್.ಎಸ್. ಸಿಂಗ್ ಹಾಗೂ ಡಾ. ಆರ್.ಸುಕುಮಾರ್ ತೀವ್ರ ವಿರೋಧ ವ್ಯಕ್ತಪಡಿಸಿದರು. ಯೋಜನೆಗೆ ಅರಣ್ಯ ಅನುಮೋದನೆ ಪಡೆದ ನಂತರ ಸ್ಥಾಯಿ ಸಮಿತಿಯ ಪರಿಗಣನೆಗೆ ಪ್ರಸ್ತಾವನೆಯನ್ನು ಮತ್ತೊಮ್ಮೆ ಮಂಡಿಸಬಹುದು ಎಂದು ಸಚಿವ ಯಾದವ್ ಸೂಚಿಸಿದರು.

ಮಂಡಳಿಯ ಪ್ರಮುಖ ಷರತ್ತುಗಳೇನು? 

  • ವನ್ಯ ಸಂರಕ್ಷಣಾ ಕಾಯ್ದೆ 1980ರ ಅಡಿಯಲ್ಲಿ ಅನುಮೋದನೆ ಪಡೆಯಲು ಪ್ರಸ್ತಾವವನ್ನು ಸ್ಥಾಯಿ ಸಮಿತಿಗೆ ಸಲ್ಲಿಸಬೇಕು.
  • 12.3 ಕಿ.ಮೀ. ರಸ್ತೆ ನಿರ್ಮಾಣಕ್ಕಾಗಿ 13,756 ಮರಗಳನ್ನು ಕಡಿಯಲು ಪ್ರಸ್ತಾಪಿಸಲಾಗಿದೆ. ಪ್ರಸ್ತಾವಿತ ರಸ್ತೆಯನ್ನು ನೆಲದಡಿ ನಿರ್ಮಿಸಿದರೆ 12 ಸಾವಿರ ಮರಗಳನ್ನು ಉಳಿಸಬಹುದು
  • ಪಂಪ್ಡ್ ಸ್ಟೋರೇಜ್ ಕಾಮಗಾರಿ ಪೂರ್ಣಗೊಳ್ಳಲು ಕನಿಷ್ಠ 5 ವರ್ಷಗಳು ಬೇಕು. ಹೀಗಾಗಿ, ಕಾಮಗಾರಿಯ ಸಂದರ್ಭದಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು
  • ಇದು ಜಲವಿದ್ಯುತ್ ಯೋಜನೆ ಅಲ್ಲ ಎಂದು ಕರ್ನಾಟಕ ವಿದ್ಯುತ್ ನಿಗಮ ಪ್ರಸ್ತಾವದಲ್ಲಿ ತಿಳಿಸಿದೆ. ನಿಗಮವ ವಿವರಣೆ ತೃಪ್ತಿಕರವಾಗಿಲ್ಲ. ಈ ಸಂಬಂಧ ನಿಗಮವು ಸ್ಪಷ್ಟನೆ ನೀಡಬೇಕು.
  • ಯೋಜನೆಯ ಅನುಷ್ಠಾನದ ಸಂದರ್ಭದಲ್ಲಿ ಅಳಿವಿನಂಚಿನಲ್ಲಿರುವ ಪ್ರಭೇದಗಳು ಸೇರಿದಂತೆ ವನ್ಯಜೀವಿಗಳಿಗೆ ತೊಂದರೆ ಆಗದಂತೆ ಕಟ್ಟೆಚ್ಚರ ವಹಿಸಬೇಕು

ಇದನ್ನೂ ಓದಿ : ‘ಲವ್ ಮ್ಯಾಟ್ರು’ ಹೇಳಲು ಸಜ್ಜಾದ ನಟ ವಿರಾಟ ಬಿಲ್ವ.. ಬಹುತಾರಾಗಣದ ಸಿನಿಮಾ ಶೀಘ್ರವೇ ತೆರೆಗೆ!

Btv Kannada
Author: Btv Kannada

Read More