‘ಲವ್ ಸಬ್ಜೆಕ್ಟ್’ ಸಿನಿಮಾಗಳು ಬಹುತೇಕರಿಗೆ ಇಷ್ಟವಾಗುತ್ತವೆ. ಏಕಂದ್ರೆ ಅಲ್ಲೊಂದು ಮಧುರ ಪ್ರೇಮವಿರುತ್ತದೆ, ಇಂಪಾದ ಪ್ರೇಮಗೀತೆ ಇರುತ್ತದೆ. ಇದೀಗ ‘ಲವ್ ಮ್ಯಾಟ್ರು’ ಶೀರ್ಷಿಕೆಯ ಸಿನಿಮಾ ತನ್ನೆಲ್ಲಾ ಕೆಲಸಗಳನ್ನು ಮುಗಿಸಿಕೊಂಡು, ಸಿನಿಪ್ರೇಮಿಗಳೆದುರು ಬರಲು ಸಜ್ಜಾಗುತ್ತಿದೆ.

ಶೀರ್ಷಿಕೆ ಕೇಳಿದಾಗ ಇದೊಂದು ಕಂಪ್ಲೀಟ್ ಲವ್ ಕಂಟೆಂಟ್ ಸಿನಿಮಾ ಅನಿಸೋದರಲ್ಲಿ ಅನುಮಾನವಿಲ್ಲ. ಇತ್ತೀಚೆಗೆ ತಂಡ ಹಾಡುಗಳನ್ನು ರಿಲೀಸ್ ಮಾಡಿದ್ದು, ಕೇಳುಗರಿಗೆ ಖುಷಿ ಕೊಡುವಂತಿದೆ.

ಸಿನಿಮಾದ ‘ಏನೋ ಗೊತ್ತಿಲ್ಲ’ ಎಂಬ ಹಾಡು ಇತ್ತೀಚೆಗೆ ರಿಲೀಸ್ ಆಗಿದೆ. ಈ ಹಾಡಿಗೆ ನಟ ವಿರಾಟ ಬಿಲ್ವ ಹಾಗೂ ಸೋನಾಲ್ ಹೆಜ್ಜೆ ಹಾಕಿದ್ದಾರೆ. ಶೇಡ್ರಾಕ್ ಸೋಲೋಮನ್ ಸಂಗೀತದಲ್ಲಿ ಚಿತ್ರದ ಹಾಡುಗಳು ಅದ್ಭುತವಾಗಿ ಮೂಡಿಬಂದಿವೆ.

ಇನ್ನು ಈ ಸಿನಿಮಾಗೆ ನಾಯಕ ನಟ ವಿರಾಟ ಬಿಲ್ವ ಅವರೇ ನಿರ್ದೇಶನ ಮಾಡಿದ್ದಾರೆ. ಸುಕ್ಕಾ ಸೂರಿ, ಪ್ರಶಾಂತ್ ನೀಲ್, ಕೆ.ಎಂ ಚೈತನ್ಯ ಅವರ ಸಿನಿಮಾಗಳೇ ಇವರಿಗೆ ಸ್ಪೂರ್ತಿ. ಈ ಮೂವರು ವಿರಾಟ ಬಿಲ್ವ ಅವರ ಗುರುಗಳು. ಕಡ್ಡಿಪುಡಿಯಲ್ಲೂ ನಟಿಸಿದ್ದು, ಬಳಿಕ ಈ ಸಿನಿಮಾ ಮೂಲಕ ನಟನೆ ಹಾಗೂ ನಿರ್ದೇಶನ ಎರಡರ ಜವಾಬ್ದಾರಿಯನ್ನು ತಮ್ಮ ಹೆಗಲ ಮೇಲೆ ಹೊತ್ತಿದ್ದಾರೆ.

ವಂದನ ಪ್ರಿಯ ವಿ ಅವರ ಸಿಲ್ವರಿಥಮ್ ಪ್ರೊಡಕ್ಷನ್ ಮತ್ತು INK ಸಿನಿಮಾಸ್ ಸಂಸ್ಥೆ ನಿರ್ಮಾಣ ಮಾಡಿರುವ ಲವ್ ಮ್ಯಾಟ್ರು, ಎಲ್ಲರ ಶ್ರಮದಿಂದ ರಿಲೀಸ್ಗೆ ಹಂತಕ್ಕೆ ಬಂದು ನಿಂತಿದೆ. ಸೋನಾಲ್, ಸುಶ್ಮಿತಾ ಗೋಪಿನಾಥ್, ಅಚ್ಯುತ್ ಕುಮಾರ್, ಸುಮನ್ ರಂಗನಾಥ್, ಅನಿತಾ ಭಟ್ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ. ಶೇಡ್ರಾಕ್ ಸೋಲೋಮನ್ ಅವರ ಸಂಗೀತ, ದೇವೇಂದ್ರ ಆರ್ ನಾಯ್ಡು ಮತ್ತು ಪರಮೇಶ್ ಸಿ ಎಂ ಅವರ ಕ್ಯಾಮರಾ ಕೈಚಳಕ, ಸುರೇಶ್ ಅರಸ್ ಅವರ ಸಂಕಲನ ಈ ಸಿನಿಮಾಗಿದೆ. ಶೀಘ್ರದಲ್ಲೇ ಚಿತ್ರ ತೆರೆಗಪ್ಪಳಿಸಲಿದೆ.

ಇದನ್ನೂ ಓದಿ : DCP ಗೋಪಾಲ ರೆಡ್ಡಿಗೆ ಭಾರೀ ವಂಚನೆ – ಜನಸ್ಮಾಲ್ ಬ್ಯಾಂಕ್ ಸಿಬ್ಬಂದಿ, ಸ್ವರ್ಣ ಭಾರತಿ ಸಹಕಾರ ಬ್ಯಾಂಕ್ ವಿರುದ್ಧ FIR!







