ಮಂಗಳೂರು : ಬಿಜೆಪಿ ಮುಖಂಡನ ಪುತ್ರನ ಲವ್, ಸೆಕ್ಸ್, ದೋಖಾ ಪ್ರಕರಣ ರಾಜ್ಯದಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು. ಇದೀಗ ಆರೋಪಿ ಶ್ರೀಕೃಷ್ಣ ರಾವ್ ಪೊಲೀಸ್ ತನಿಖೆಯಲ್ಲಿ ಮತ್ತೆ ಯುವತಿಯೊಂದಿಗೆ ಮದುವೆಯಾಗಲು ನಿರಾಕರಿಸಿದ್ದಾನೆ ಎಂದು ತಿಳಿದುಬಂದಿದೆ. ಯುವತಿಯನ್ನು ಮದುವೆಯಾಗುವ ಬದಲು ಜೈಲಿನಲ್ಲೇ ಇರುವುದಾಗಿ ಆತ ಪೊಲೀಸರಿಗೆ ತಿಳಿಸಿರುವ ವಿಚಾರವನ್ನು ಸಂತ್ರಸ್ತೆಯ ತಾಯಿ ನಮಿತಾ ಮಾಧ್ಯಮದ ಮುಂದೆ ಹೇಳಿದ್ದಾರೆ.
ಹಿಂದೂ ಸಂಘಟನೆಯ ಮುಖಂಡರು, ಪುತ್ತೂರು ಶಾಸಕರು ಯುವಕನನ್ನು ಯುವತಿಯೊಂದಿಗೆ ಮದುವೆ ಮಾಡಿಸುವ ಭರವಸೆಯ ನಡುವೆಯೇ ಯುವಕ ಈ ನಿರ್ಧಾರ ಕೈಗೊಂಡಿರೋದು ಯುವತಿಯ ಪೋಷಕರ ಮತ್ತು ಮದುವೆಗೆ ಸಿದ್ಧತೆ ನಡೆಸಿದ್ದ ಮುಖಂಡರ ನಿದ್ದೆಗೆಡಿಸಿದೆ. ಈ ನಡುವೆ ಮಗವಿನ ಡಿಎನ್ಎ ಪರೀಕ್ಷೆಯಲ್ಲೂ ಯುವಕನ ಕಡೆಯಿಂದ ಗೋಲ್ಮಾಲ್ ನಡೆಯಬಹುದು ಎನ್ನುವ ಆತಂಕದಲ್ಲಿ ಸಂತ್ರಸ್ತೆಯ ಪೋಷಕರಿದ್ದಾರೆ.

ಆರೋಪಿ ಶ್ರೀ ಕೃಷ್ಣ.ಜೆ.ರಾವ್ ಸಂತ್ರಸ್ತೆ ಯುವತಿಯನ್ನು ಮದುವೆಯಾಗಲು ನಿರಾಕರಿಸಿದ್ದಾನೆ. ಪೊಲೀಸರಿಂದ ಬಂಧನಕ್ಕೊಳಗಾದ ಬಳಿಕ ಯುವಕ ಪೊಲೀಸರಲ್ಲಿ ಈ ವಿಚಾರವನ್ನು ತಿಳಿಸಿದ್ದಾನೆ. ಜೈಲಿನಲ್ಲಿ ಬೇಕಾದರೂ ಇರುವೆ ಆದರೆ ಯುವತಿಯನ್ನು ಮದುವೆಯಾಗುವುದಿಲ್ಲ ಎಂದು ಯುವಕ ಹೇಳಿರುವುದು ಸದ್ಯ ಸಂತ್ರಸ್ತೆ ಕುಟುಂಬವನ್ನು ಆತಂಕಕ್ಕೀಡು ಮಾಡಿದೆ. ಅಲ್ಲದೆ ಹೇಗಾದರೂ ಮಾಡಿ ಆರೋಪಿಯೊಂದಿಗೆ ಸಂತ್ರಸ್ತೆ ಯುವತಿಯನ್ನು ಮದುವೆ ಮಾಡಿಸುವುದಾಗಿ ಹೇಳಿಕೆ ಕೊಟ್ಟ ಮುಖಂಡರಿಗೂ ಈ ಬೆಳವಣಿಗೆ ಹಿನ್ನಡೆ ತಂದಿದೆ.
ಮಗಳನ್ನು ಗರ್ಭಿಣಿ ಮಾಡಿದ್ದ ಶ್ರೀಕೃಷ್ಣ.ಜೆ.ರಾವ್ ವಿರುದ್ಧ ಯುವತಿಯ ತಾಯಿ ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ ತಕ್ಷಣವೇ ಮಹಿಳಾ ಪೊಲೀಸರು ಆರೋಪಿ ಶ್ರೀಕೃಷ್ಣನನ್ನು ವಶಕ್ಕೆ ಪಡೆದಿದ್ದರು. ಆರೋಪಿ ಪೊಲೀಸ್ ವಶದಲ್ಲಿರುವ ಸಂದರ್ಭದಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ದೂರು ನೀಡದಂತೆ ಯುವತಿ ಪೋಷಕರಿಗೆ ಒತ್ತಡ ಹೇರಿದ್ದರು. ಅಂದು ಕಾನೂನಿಗೆ ಬೆಲೆ ಕೊಟ್ಟು ದೂರು ವಾಪಾಸು ಪಡೆದುಕೊಂಡಿದ್ದ ಸಂತ್ರಸ್ತೆಗೆ ಇದೀಗ ಅದೇ ಕಾನೂನು ಮುಳ್ಳಾಗಿದೆ. ಅಂದು ಮಧ್ಯಸ್ತಿಕೆ ನಡೆಸಲು ಬಂದಿದ್ದ ಮುಖಂಡರು ಯುವಕ ಮದುವೆಗೆ ಒಪ್ಪದಿದ್ದಲ್ಲಿ ಏನೂ ಮಾಡಲು ಸಾಧ್ಯವಿಲ್ಲ ಎಂದು ಕೈ ಚೆಲ್ಲುತ್ತಿರೋದು ಸಂತ್ರಸ್ತೆಯ ಪೋಷಕರನ್ನು ಗೊಂದಲಕ್ಕೆ ದೂಡಿದೆ.

ಹಲವು ಪಕ್ಷಗಳು ಸಂಘಟನೆಗಳು ಸಂತ್ರಸ್ತೆಗೆ ನ್ಯಾಯಕ್ಕಾಗಿ ಹೋರಾಟ ಆರಂಭಿಸಿದೆ. ಸಂತ್ರಸ್ತೆಯನ್ನು ಮದುವೆ ಆಗುದಿಲ್ಲ ಎಂದು ಪಟ್ಟು ಹಿಡಿದಿರುವ ಯುವಕನನ್ನು ಮದುವೆಗೆ ಒಪ್ಪಿಸುವ ಜವಾಬ್ದಾರಿ ನಾಯಕರ ಮೇಲೆ ಹಾಕಲಾಗಿದೆ. ಪರಿಹಾರದ ಭರವಸೆ ನೀಡಲು ಬರುವ ಎಲ್ಲರಲ್ಲೂ ಯುವತಿಯ ಪೋಷಕರು ಮನವಿ ಮಾಡುತ್ತಿದ್ದಾರೆ.
ಇದನ್ನೂ ಓದಿ : ನಟ ದರ್ಶನ್ ವಿದೇಶ ಪ್ರಯಾಣಕ್ಕೆ ಕೋರ್ಟ್ ಅನುಮತಿ – ಥೈಲ್ಯಾಂಡ್ನಲ್ಲಿ ಡೆವಿಲ್ ಸಿನಿಮಾ ಶೂಟಿಂಗ್!







