ಬೆಂಗಳೂರು : ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಶಕ್ತಿ ಯೋಜನೆ’ಯು ಜಾರಿಯಾಗಿ ಭರ್ತಿ ಎರಡು ವರ್ಷ ಕಳೆದಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಮೊದಲು ಜಾರಿಗೊಳಿಸಿದ ಗ್ಯಾರಂಟಿ ಯೋಜನೆ ಇದಾಗಿದೆ. ಅಂದಿನಿಂದ 500 ಕೋಟಿ ಮಹಿಳೆಯರು ರಾಜ್ಯದ ಎಲ್ಲಾ ನಾಲ್ಕು ನಿಗಮಗಳ ಸಾರಿಗೆ ಬಸ್‌ಗಳಲ್ಲಿ ಸಂಚರಿಸಿದ್ದಾರೆ ಎಂದು ಕರ್ನಾಟಕ ಸಾರಿಗೆ ಇಲಾಖೆ ಮಾಹಿತಿ ನೀಡಿದೆ.

2023 ಜೂನ್ 11 ರಂದು ಮುಖ್ಯಮಂತ್ರಿಗಳು ಶಕ್ತಿ ಯೋಜನೆಗೆ ಚಾಲನೆ ನೀಡಿದ್ದರು. ಅಂದಿನಿಂದ ಪ್ರತಿ ತಿಂಗಳು ಸರಿಸುಮಾರು 20ರಿಂದ 22 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡುತ್ತಲೇ ಬಂದಿದ್ದಾರೆ. ಈವರೆಗೆ 493 ಕೋಟಿ ಮಹಿಳೆಯರು ಉಚಿತವಾಗಿ ಸಂಚಾರ ಮಾಡಿದ್ದಾರೆ. ಇದೇ ತಿಂಗಳ ಜುಲೈ 14 ಅಥವಾ 15ನೇ ದಿನಕ್ಕೆ ಒಟ್ಟು 500 ಕೋಟಿ ಮಹಿಳಾ ಪ್ರಯಾಣಿಕರು ಉಚಿತವಾಗಿ ಯೋಜನೆಯಡಿ ಸಂಚರಿಸಿದಂತಾಗುತ್ತದೆ. ಸರ್ಕಾರಿ ಯೋಜನೆಯ ಸದ್ಬಳಕೆ, ಜನರಿಗೆ ಯೋಜನೆ ಲಾಭ ತಲುಪುವ ನಿಟ್ಟಿನಲ್ಲಿ ಇದೊಂದು ಹೊಸ ದಾಖಲೆ, ಮೈಲಿಗಲ್ಲು ಸಾಧನೆ ಎಂದು ಇಲಾಖೆ ಬಣ್ಣಿಸಿದೆ.

ಮಹಿಳಾ ಸಬಲೀಕರಣದೆಡೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆ ದಿಟ್ಟ ಹೆಜ್ಜೆ ಇಟ್ಟಿದೆ. ಅದರ ನಿಟ್ಟಿನಲ್ಲಿ ಶಕ್ತಿ ಗ್ಯಾರೆಂಟಿ ಯೋಜನೆಯಲ್ಲಿ ಪ್ರಯಾಣಿಸಿದ ಮಹಿಳಾ ಪ್ರಯಾಣಿಕರ ಸಂಖ್ಯೆ ಶೀಘ್ರವೇ 500 ಕೋಟಿ ತಲುಪಲಿದೆ. ಶಕ್ತಿ ಯೋಜನೆ ಸೌಲಭ್ಯ ದೊರೆತ ಮೊದಲು ತಿಂಗಳು 2023 ಜೂನ್ ತಿಂಗಳಲ್ಲಿ ಎಲ್ಲ ಸಾರಿಗೆ ನಿಮಗದ ಬಸ್‌ಗಳಲ್ಲಿ 10,54,45,047 ಮಹಿಳೆಯರು ಸಂಚರಿಸಿದ್ದರು. ನಂತರದ ಜುಲೈ 2023ರಲ್ಲಿ 19 ಕೋಟಿಗೂ ಅಧಿಕ ಮಹಿಳೆಯರು ಸಂಚಾರ ಮಾಡಿದ್ದರು ಎಂದು ಸಾರಿಗೆ ಇಲಾಖೆ ಅಂಕಿ ಸಂಖ್ಯೆ ನೀಡಿದೆ.

ಶಕ್ತಿ ಗ್ಯಾರೆಂಟಿ ಯೋಜನೆಯಲ್ಲಿ ಪ್ರಯಾಣಿಕರ ಸಂಖ್ಯೆ 500 ಕೋಟಿ ಸಂಪೂರ್ಣವಾಗುವ ಸಂದರ್ಭದಲ್ಲಿ, ತಾಲೂಕು, ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮ ಆಯೋಜನೆಗೆ ಸರ್ಕಾರ ಹೊಸ ಫ್ಲ್ಯಾನ್ ರೂಪಿಸಿದೆ. ಈ ಕಾರ್ಯಕ್ರಮದಲ್ಲಿ ಲಕ್ಕಿ ಮಹಿಳೆಯನ್ನ ಗುರುತಿಸಲು ಸಾರಿಗೆ ಇಲಾಖೆ ಸಿದ್ದತೆ ಮಾಡಿಕೊಂಡಿದೆ. ಈ ಮೂಲಕ 500 ಕೋಟಿ ಮಹಿಳಾ ಪ್ರಯಾಣಿಕರ ಸಕ್ಸಸ್ ಕಾರ್ಯಕ್ರಮದ ತಯಾರಿಗೆ ಸರ್ಕಾರ ಮುಂದಾಗಿದೆ.

2023ರಿಂದ 2025 ಜುಲೈ 6ರವರೆಗೆ ಒಟ್ಟು ಸಂಚಾರ, ಪಟ್ಟಿ
- ಒಟ್ಟು ಪ್ರಯಾಣಿಕರು 831,60,40,033 (ಪುರುಷ & ಮಹಿಳೆ ಸೇರಿ)
- ಒಟ್ಟು ಮಹಿಳಾ ಪ್ರಯಾಣಿಕರು : 493,90,56,258
- ಮಹಿಳಾ ಪ್ರಯಾಣಿಕರ ಟಿಕೆಟ್ ಮೌಲ್ಯ : 12511,28,45,094
ಜೂನ್, 2023ರಿಂದ ಜುಲೈ 2025ರ ವರೆಗೆ ಪ್ರಯಾಣಿಸಿದ ಮಹಿಳೆಯರ ಸಂಖ್ಯೆ
- KSRTC ಬಸ್ ನಲ್ಲಿ ಪ್ರಯಾಣಿಸಿದ ಮಹಿಳೆಯರ ಸಂಖ್ಯೆ : 150,02,50,175 ಕೋಟಿ
- BMTC ಬಸ್ ನಲ್ಲಿ ಪ್ರಯಾಣಿಸಿದ ಮಹಿಳೆಯರ ಸಂಖ್ಯೆ : 156,82,07,373 ಕೋಟಿ
- NWKRTC ಬಸ್ ನಲ್ಲಿ ಪ್ರಯಾಣಿಸಿದ ಮಹಿಳೆಯರ ಸಂಖ್ಯೆ : 115,62,77,798 ಕೋಟಿ
- KKRTC ಬಸ್ ನಲ್ಲಿ ಪ್ರಯಾಣಿಸಿದ ಮಹಿಳೆಯರ ಸಂಖ್ಯೆ : 71, 43,10,912 ಕೋಟಿ
- ಶಕ್ತಿ ಯೋಜನೆಯಲ್ಲಿ ಪ್ರಯಾಣಿಸಿದ ಮಹಿಳೆಯರ ಸಂಖ್ಯೆ : 493,90,56,258 ಕೋಟಿ
ಇದನ್ನೂ ಓದಿ : ಇಂದು ಸಿಎಂ ಕಾರ್ಯಕ್ರಮಗಳಿಗೆ ಬ್ರೇಕ್.. ಇಡೀ ದಿನ ಮನೆಯಲ್ಲೇ ಸಿದ್ದರಾಮಯ್ಯ ವಿಶ್ರಾಂತಿ!







