ರೇಣುಕಾಸ್ವಾಮಿ ಕೇಸ್​​ ರೀತಿ ಮತ್ತೊಂದು ಅಮಾನುಷ ಕೃತ್ಯ – ಹುಡುಗಿ ವಿಚಾರಕ್ಕೆ ಯುವಕನ ಬಟ್ಟೆ ಬಿಚ್ಚಿ ಹಲ್ಲೆ.. ನಾಲ್ವರ ಬಂಧನ!

ಬೆಂಗಳೂರು : ನನ್ನ ಹುಡುಗಿಗೆ ಫೋನ್‌, ಮೆಸೆಜ್‌ ಮಾಡ್ತೀಯಾ ಅಂತ ಯುವಕನೊಬ್ಬನ ಮೇಲೆ ಪುಂಡರ ಗ್ಯಾಂಗ್‌ ಅಮಾನವೀಯವಾಗಿ ಹಲ್ಲೆ ನಡೆಸಿದ ಘಟನೆ ನಗರದ ಹೊರವಲಯದ ಸೋಲದೇವನಹಳ್ಳಿಯಲ್ಲಿ ನಡೆದಿದೆ.

ಕುಶಾಲ್ ಎಂಬಾತನ ಮೇಲೆ ಹಲ್ಲೆ ನಡೆದಿದೆ. ಕಾಲೇಜಿಗೆ ಹೋಗುವಾಗ ಕುಶಾಲ್ ಹಾಗೂ ಯುವತಿ ಮಧ್ಯೆ ಪ್ರೀತಿಯಾಗಿತ್ತು. ಎರಡು ವರ್ಷದ ಪ್ರೀತಿ ಕೆಲ ತಿಂಗಳ ಹಿಂದೆ ಮುರಿದು ಬಿದ್ದಿತ್ತು. ಈ ಸಮಯದಲ್ಲಿ ಯುವತಿಗೆ ಬೇರೊಂದು ಹುಡುಗನ ಪರಿಚಯವಾಗಿತ್ತು. ಇದರಿಂದ ಕುಶಾಲ್ ಯುವತಿಗೆ ಅಶ್ಲೀಲ ಮೆಸೆಜ್ ಮಾಡಿದ್ದ ಎನ್ನಲಾಗಿದೆ.

ಇದೇ ಕಾರಣಕ್ಕೆ ಮಾತುಕತೆಗೆ ಕರೆಸಿ, ಯುವತಿ ತನ್ನ ಗೆಳೆಯ ಹಾಗೂ ಸ್ನೇಹಿತರ ಜೊತೆ ಸೇರಿ ಆತನನ್ನು ಕಾರಿನಲ್ಲಿ ಅಪಹರಿಸಿ, ನಿರ್ಜನ ಪ್ರದೇಶಕ್ಕೆ ಕೆರದೊಯ್ದು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಹಲ್ಲೆ ವೇಳೆ ಪುಂಡರು ಕೊಲೆಯಾದ ಚಿತ್ರದುರ್ಗದ ರೇಣುಕಾಸ್ವಾಮಿ ಹೆಸರು ಉಲ್ಲೇಖಿಸಿದ್ದಾರೆ.

ರೇಣುಕಾಸ್ವಾಮಿ ಕೊಲೆ ಕೇಸ್‌ನಂತೆ ಇದು ಆಗುತ್ತೆ. ಎ1 ಹೇಮಂತ್‌, ಎ 2 ನಾನು ಎಂದು ಯುವಕನನ್ನು ಬೆತ್ತಲೆ ಮಾಡಿ, 8-10 ಯುವಕರು ಸೇರಿ ಹಲ್ಲೆ ಮಾಡಿ ವಿಡಿಯೋ ಮಾಡಿದ್ದಾರೆ. ಅಲ್ಲದೇ ಯುವಕನ ಮರ್ಮಾಂಗ ತುಳಿದು ವಿಕೃತಿ ಮೆರೆದಿದ್ದಾರೆ. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿಗಳಾದ ಹೇಮಂತ್, ಯಶ್ವಂತ್, ಶಿವಶಂಕರ್, ಶಶಾಂಕ್ ಗೌಡ ಎಂಬವರನ್ನು ಬಂಧಿಸಲಾಗಿದೆ.

ಇದನ್ನೂ ಓದಿ : ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳ ಮೇಲೆ ದಾಳಿ ಪ್ರಕರಣ – ರೌಡಿಶೀಟರ್ ಸೋಮಶೇಖರ್ ಸೇರಿ ನಾಲ್ವರು ವಶಕ್ಕೆ!

Btv Kannada
Author: Btv Kannada

Read More