ನೈಸ್ ಯೋಜನೆಗಾಗಿ KIADB ವಶಪಡಿಸಿಕೊಂಡ 300 ಎಕರೆ ಭೂಸ್ವಾಧೀನ ರದ್ದು!

ಬೆಂಗಳೂರು : ನೈಸ್​ ರಸ್ತೆ ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ (KIADB) ಸ್ವಾಧೀನಪಡಿಸಿಕೊಂಡಿರುವ 300 ಎಕರೆಗೂ ಹೆಚ್ಚಿನ ಭೂಸ್ವಾಧೀನ ಅಧಿಸೂಚನೆಯನ್ನು ಹೈಕೋರ್ಟ್ ರದ್ದುಪಡಿಸಿದೆ. 

ಭೂಸ್ವಾಧೀನ ಅಧಿಸೂಚನೆ ಪ್ರಶ್ನಿಸಿ ಪಿ.ಶ್ರೀಧರಮೂರ್ತಿ ಸೇರಿದಂತೆ 50ಕ್ಕೂ ಹೆಚ್ಚು ಭೂಮಾಲೀಕರು ಸಲ್ಲಿಸಿದ್ದ ಪ್ರತ್ಯೇಕ ರಿಟ್ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ.

ನೈಸ್​ ರಸ್ತೆ ನಿರ್ಮಾಣಕ್ಕೆ ಭೂಸ್ವಾಧೀನ ಅಧಿಸೂಚನೆಯಾಗಿ 23 ವರ್ಷ ಕಳೆದರೂ ಪರಿಹಾರ (ಅವಾರ್ಡ್) ನಿಗದಿಯಾಗಿರಲಿಲ್ಲ. ಹೀಗಾಗಿ, 2014, 2016, 2020, 2022 ರಲ್ಲಿ 50ಕ್ಕೂ ಹೆಚ್ಚು ರೈತರು ಹೈಕೋರ್ಟ್​ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​ ಕೆಐಎಡಿಬಿ ಸ್ವಾಧೀನಪಡಿಸಿಕೊಂಡಿರುವ 300 ಎಕರೆಗೂ ಹೆಚ್ಚಿನ ಭೂಸ್ವಾಧೀನ ಅಧಿಸೂಚನೆಯನ್ನು ರದ್ದುಪಡಿಸಿದೆ. ಕೆಐಎಡಿಬಿ vs ಶಕುಂತಲಮ್ಮ ಪ್ರಕರಣದ ತೀರ್ಪು ಉಲ್ಲೇಖಿಸಿ ರೈತರ ಪರ ಹಿರಿಯ ವಕೀಲ ಹೆಚ್‌.ಎನ್.ಶಶಿಧರ್ ವಾದ ಮಂಡಿಸಿದರು.

ಏನಿದು ಯೋಜನೆ? ಬೆಂಗಳೂರು-ಮೈಸೂರು ನಡುವೆ 111 ಕಿಮೀ ಎಕ್ಸಪ್ರೆಸ್​ ವೇ ನಿರ್ಮಾಣಕ್ಕೆ ನೈಸ್​ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ. ಮೂರು ದಶಕಗಳ ಗುತ್ತಿಗೆ ಅವಧಿ ಮುಗಿಯುವ ಹಂತದಲ್ಲಿದೆ. ನೈಸ್​ ಯೋಜನೆಗೆ ಸಂಬಂಧಿಸಿದಂತೆ 374 ಭೂವ್ಯಾಜ್ಯ ಪ್ರಕರಣಗಳು ವಿವಿಧ ಕೋರ್ಟ್​ಗಳಲ್ಲಿವೆ. ಕೆಲವು ಪ್ರಕರಣಗಳಲ್ಲಿ ಭೂಸ್ವಾಧೀನವನ್ನು ಕೋರ್ಟ್​ ರದ್ದುಪಡಿಸಿದೆ.

ಇದನ್ನೂ ಓದಿ : ಪೊಲೀಸ್ ID ಕಾರ್ಡ್ ಹಿಡಿದು ಓಡಾಡ್ತಿದ್ದ ಕಳ್ಳ ಅರೆಸ್ಟ್!

Btv Kannada
Author: Btv Kannada

Read More