ರಾಕಿಂಗ್ ಸ್ಟಾರ್ ಯಶ್, ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ನಟಿಸಿರುವ ರಾಮಾಯಣ ಚಿತ್ರದ ಟೈಟಲ್ ಟೀಸರ್ ವಿಶ್ವದಾದ್ಯಂತ ಬಿಡುಗಡೆಯಾಗಿದ್ದು, ಇದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ರಾಮಾಯಣ ಟೈಟಲ್ ಟೀಸರ್ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಮಿಲಿಯನ್ಸ್ ವ್ಯೂವ್ಸ್ ಪಡೆದಿದೆ.
ಜುಲೈ 3 ರಂದು ಭಾರತದ ಒಂಬತ್ತು ನಗರಗಳಲ್ಲಿ ಅದ್ಭುತವಾಗಿ ಬಿಡುಗಡೆಯಾದ ನಂತರ, ಮಹಾಕಾವ್ಯದ ಜಾಗತಿಕ ಅನಾವರಣವು ಅಮೆರಿಕಾದಲ್ಲಿ ಮುಂದುವರೆದಿದ್ದು, ನ್ಯೂಯಾರ್ಕ್ನ ಟೈಮ್ಸ್ ಸ್ಕ್ವೇರ್‌ನಲ್ಲಿ ರಾಮಾಯಣ ಟೈಟಲ್ ಟೀಸರ್ ಬಿಡುಗಡೆಯಾಗಿದೆ. ರಾಕಿಂಗ್ ಸ್ಟಾರ್ ಯಶ್ ಅನ್ನು ರಾವಣನಾಗಿ ಕಂಡು ನ್ಯೂಯಾರ್ಕ್ ಜನರು ಫುಲ್ ಫಿದಾ ಆಗಿದ್ದಾರೆ.
ಜುಲೈ 3 ರಂದು, ಭಾರತವು ಮುಂಬೈ, ದೆಹಲಿ, ಕೋಲ್ಕತ್ತಾ, ಚೆನ್ನೈ, ಹೈದರಾಬಾದ್, ಬೆಂಗಳೂರು, ಪುಣೆ, ಅಹಮದಾಬಾದ್ ಮತ್ತು ಕೊಚ್ಚಿಯಲ್ಲಿ ಏಕಕಾಲದಲ್ಲಿ ರಾಮಾಯಣ: ದಿ ಇಂಟ್ರೊಡಕ್ಷನ್ ಅನ್ನು ಅನಾವರಣಗೊಳಿಸಿತು. ಜುಲೈ 4 ರಂದು ನ್ಯೂಯಾರ್ಕ್ನ ಟೈಮ್ಸ್ ಸ್ಕ್ವೇರ್‌ನಲ್ಲಿ ರಾಮಾಯಣ ಟೈಟಲ್ ಟೀಸರ್ ರಿಲೀಸ್ ಆಗಿದೆ.
ನಿತೀಶ್ ತಿವಾರಿ ನಿರ್ದೇಶನದಲ್ಲಿ ಮೂಡಿ ಬರ್ತಿರೋ ರಾಮಾಯಣ ಸಿನಿಮಾವನ್ನು ನಮಿತ್ ಮಲ್ಹೋತ್ರ ನಿರ್ಮಾಣ ಮಾಡ್ತಿದ್ದಾರೆ. ರಾಮಾಯಣ ಸಿನಿಮಾ ಎರಡು ಭಾಗಗಳಲ್ಲಿ ಬರಲಿದ್ದು, ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ಈ ಸಿನಿಮಾದಲ್ಲಿ ರಾಮನಾಗಿ ನಟಿಸುತ್ತಿದ್ದು, ಸೀತೆಯಾಗಿ ಸಾಯಿ ಪಲ್ಲವಿ ಅಭಿನಯಿಸುತ್ತಿದ್ದಾರೆ. ಪುರಾಣದ ಎರಡು ಅತ್ಯಂತ ಅಪ್ರತಿಮ ಶಕ್ತಿಗಳಾದ ರಾಮ ಮತ್ತು ರಾವಣನ ನಡುವಿನ ಯುದ್ಧಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ಭಾರತದ 9 ಪ್ರಮುಖ ನಗರಗಳಲ್ಲಿ ಅಭಿಮಾನಿಗಳಿಗಾಗಿ ವಿಶೇಷ ಪ್ರದರ್ಶನ ಸೇರಿದಂತೆ ನ್ಯೂಯಾರ್ಕ್ ನ ಟೈಮ್ಸ್ ಸ್ವ್ಕೇರ್ ನಲ್ಲೂ ಅದ್ಭುತ ಪ್ರದರ್ಶನ ಕಾಣುವ ಮೂಲಕ ರಾಮಾಯಣ ಟೈಟಲ್ ಟೀಸರ್ ಜಗತ್ತಿನಾದ್ಯಂತ ಗಮನ ಸೆಳೆಯಿತು. ರಾಮಾಯಣ ಸಿನಿಮಾ IMAXಗಾಗಿ ಚಿತ್ರಿಕರಣಗೊಳ್ಳುತ್ತಿದ್ದು, ಭಾಗ-1 2026 ದೀಪಾವಳಿಗೆ ಹಾಗೂ ಭಾಗ – 2 2027 ದೀಪಾವಳಿಯಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.
ನಮಿತ್ ಮಲ್ಹೋತ್ರಾ ಅವರ ಪ್ರೈಮ್ ಫೋಕಸ್ ಸ್ಟುಡಿಯೋಸ್ ಮತ್ತು 8 ಬಾರಿ ಆಸ್ಕರ್ ಪ್ರಶಸ್ತಿ ವಿಜೇತ ವಿಎಫ್‌ಎಕ್ಸ್ ಸ್ಟೂಡಿಯೋ DNEG, ಯಶ್ ಅವರ ಮಾಸ್ಟರ್ ಮೈಂಡ್ ಕ್ರಿಯೇಷನ್ಸ್ ಸಹಯೋಗದೊಂದಿಗೆ ನಿರ್ಮಾಣವಾಗುತ್ತಿದೆ. ಹನುಮಂತನ ಪಾತ್ರದಲ್ಲಿ ಭಾರತೀಯ ಸಿನಿಮಾರಂಗದ ಆಕ್ಷನ್ ಹೀರೋ ಸನ್ನಿ ಡಿಯೋಲ್, ರಾಮನ ನಿಷ್ಠಾವಂತ ಸಹೋದರ ಲಕ್ಷ್ಮಣನ ಪಾತ್ರದಲ್ಲಿ ರವಿ ದುಬೆ ಅಭಿನಯ ಮಾಡಲಿದ್ದಾರೆ. ಈ ಚಿತ್ರಕ್ಕೆ ಹಾಲಿವುಡ್‌ನ ಖ್ಯಾತ ಸಾಹಸ ನಿರ್ದೇಶಕರಾದ ಟೆರ್ರಿ ನೋಟರಿ (ಅವೆಂಜರ್ಸ್, ಪ್ಲಾನೆಟ್ ಆಫ್ ದಿ ಏಪ್ಸ್) ಮತ್ತು ಗೈ ನಾರ್ರಿಸ್ (ಮ್ಯಾಡ್ ಮ್ಯಾಕ್ಸ್: ಫ್ಯೂರಿ ರೋಡ್, ಫ್ಯೂರಿಯೋಸಾ) ಸ್ಟಂಟ್ ಡೈರೆಕ್ಟರ್ ಆಗಿದ್ದಾರೆ.
ಇದನ್ನೂ ಓದಿ : KSRTC ಬಸ್ಗೆ ಹಿಂಬದಿಯಿಂದ ಬೈಕ್ ಡಿಕ್ಕಿ – ಯುವಕ ಸ್ಥಳದಲ್ಲೇ ಸಾವು!
