ಸದಾ ವಿವಾದಗಳಿಂದಲೇ ಸುದ್ದಿಯಾಗುವ ನಟಿ ರಶ್ಮಿಕಾ ಮಂದಣ್ಣ ಮತ್ತೊಂದು ಯಡವಟ್ಟು ಮಾಡಿಕೊಂಡಿದ್ದಾರೆ. ಕೊಡವ ಸಮುದಾಯದಿಂದ ಸಿನಿಮಾಗೆ ಬಂದವರಲ್ಲಿ ನಾನೇ ಮೊದಲು ಎಂದು ಹೇಳುವ ಮೂಲಕ ಮತ್ತೊಂದು ವಿವಾದದ ಸುಳಿಗೆ ಸಿಲಿಕಿದ್ದಾರೆ.
ಹೌದು.. ಸಂದರ್ಶನವೊಂದರಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರು ಮಾತನಾಡಿದ್ದು, ಸಿನಿಮಾದಲ್ಲಿ ನಟಿಸಿ, ನನ್ನ ಮೊದಲ ಚೆಕ್ ಸಿಕ್ಕಾಗ, ಮನೆಯಲ್ಲಿ ಏನೆಲ್ಲಾ ಮಾತಾಡುತ್ತಿದ್ದರು ಅಂತ ನನಗೆ ನೆನಪಿದೆ. ಅದು ಸುಲಭವೂ ಆಗಿರಲಿಲ್ಲ. ಯಾಕಂದ್ರೆ ಕೂರ್ಗ್ ಸಮುದಾಯದಲ್ಲಿ, ಯಾರೂ ಸಿನಿಮಾ ಜಗತ್ತಿಗೆ ಬಂದಿರಲಿಲ್ಲ ಅಂತ ನನಗನಿಸುತ್ತೆ. ಇಡೀ ಕೂರ್ಗ್ ಸಮುದಾಯದಲ್ಲಿ ನಾನೇ ಮೊದಲು ಸಿನಿಮಾ ಇಂಡಸ್ಟ್ರಿಗೆ ಬಂದಿದ್ದು ಎಂದು ಹೇಳಿದ್ದಾರೆ.
ಈ ವೇಳೆ ಸಂದರ್ಶಕಿ ನೀವೇ ಮೊದಲು ಎಂದು ಜನ ನಿರ್ಧರಿಸಿದ್ದಾರಾ ಎಂದು ಕೇಳಿದಾಗ, ಖಂಡಿತ ಕೊಡವ ಸಮುದಾಯದವರು ಇದನ್ನು ನಿರ್ಧರಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ರೀತಿ ಹೇಳಿಕೆ ನೀಡುವ ಮೂಲಕ ನಟಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಈಗಾಗಲೇ ಕೊಡವ ಸಮುದಾಯದಿಂದ ಸಾಕಷ್ಟು ನಾಯಕಿಯರು ಚಿತ್ರರಂಗಕ್ಕೆ ಬಂದಿದ್ದು, ಖ್ಯಾತಿಯನ್ನು ಗಳಿಸಿದ್ದಾರೆ. ನಟಿ ಪ್ರೇಮ, ನಿಧಿ ಸುಬ್ಬಯ್ಯಾ, ಹರ್ಷಿಕ ಪೂಣಚ್ಚ, ಶುಭ್ರ ಅಯ್ಯಪ್ಪ ಸೇರಿ ಹಲವರು ಬಂದಿದ್ದು, ಹೆಸರು ಮಾಡಿದ್ದಾರೆ. ಇವರೆಲ್ಲರಿಗೂ ಮುನ್ನ ನಟಿ ಪ್ರೇಮ ಹಲವು ಭಾಷೆಗಳಲ್ಲಿ ನಟಿಸಿ ಖ್ಯಾತಿ ಪಡೆದಿದ್ದರು ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
ಇದಕ್ಕೂ ಮುನ್ನ ಕನ್ನಡ ಚಲನಚಿತ್ರೋವತ್ಸಕ್ಕೆ ನಟಿ ರಶ್ಮಿಕಾರನ್ನು ಆಹ್ವಾನಿಸಿದಾಗ ನನಗೆ ಸಮಯವಿಲ್ಲ ಎಂದಿದ್ದರು. ಜೊತೆಗೆ ಛಾವಾ ಸಿನಿಮಾದ ಪ್ರಚಾರದ ಸಂದರ್ಭದಲ್ಲಿ `ನಾನು ಹೈದರಾಬಾದ್‌ನವಳು’ ಎಂದು ಹೇಳಿ ವಿವಾದಕ್ಕೆ ಒಳಗಾಗಿದ್ದರು.
ಇದನ್ನೂ ಓದಿ : ರಾಜ್ಯದಲ್ಲಿ ನಿಲ್ಲದ ಹಾರ್ಟ್ಅಟ್ಯಾಕ್ ದುರಂತ – ಬೆಳಗಾವಿಯಲ್ಲಿ ಕರ್ತವ್ಯ ನಿರತ ASI ಹೃದಯಾಘಾತದಿಂದ ನಿಧನ!
