ಸಿಲಿಕಾನ್​​ ಸಿಟಿ ಮಂದಿಗೆ ಗುಡ್ ನ್ಯೂಸ್.. ಶೀಘ್ರವೇ ಹೆಬ್ಬಾಳ ಫ್ಲೈಓವರ್ ಸಂಚಾರಕ್ಕೆ ಮುಕ್ತ!

ಬೆಂಗಳೂರು : ಹೆಬ್ಬಾಳ ಫ್ಲೈಓವರ್ ಕಾಮಗಾರಿ ಆಗಸ್ಟ್ 15ರ ನಂತರ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಬಿಡಿಎ ಅಧ್ಯಕ್ಷ ಎನ್​ಎ ಹ್ಯಾರೀಸ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಕಾಮಗಾರಿಗೆ ವೇಗ ನೀಡಲಾಗಿದೆ. ನಿಧಾನಗತಿ ಕಾಮಗಾರಿಯಿಂದ ಹೆಚ್ಚು ವೆಚ್ಚವಾಗಿಲ್ಲ ಎಂದಿದ್ದಾರೆ.

ಹೆಬ್ಬಾಳ ಫ್ಲೈಓವರ್​ನ ಕೆ.ಆರ್.​ಪುರ ಲೂಪ್​ ನವೀಕರಿಸುವ ಕಾಮಗಾರಿಯನ್ನು 100 ದಿನದೊಳೊಳಗೆ ಪೂರ್ಣಗೊಳಿಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು 2025ರ ಜನವರಿಯಲ್ಲಿ ಬಿಡಿಎಗೆ ಸೂಚನೆ ನೀಡಿದ್ದರು. ಮುಖ್ಯ ಕಾರ್ಯದರ್ಶಿಗಳ ಸೂಚನೆ ಮೇರೆಗೆ ಸದ್ಯ ಕಾಮಗಾರಿ ವೇಗದಿಂದ ಸಾಗುತ್ತಿದೆ.

ವಿಮಾನ ನಿಲ್ದಾಣದ ಕಡೆಯಿಂದ ಹೆಬ್ಬಾಳ ಮೇಲ್ಸೇತುವೆ ಮಾರ್ಗವಾಗಿ ಬ್ಯಾಪ್ಟಿಸ್ಟ್​ ಆಸ್ಪತ್ರೆ ಕಡೆಗೆ ಬರುವ ಮಾರ್ಗದಲ್ಲಿ ಎರಡು ಪಥದ ರಸ್ತೆಯಿದ್ದು, ಇದನ್ನು ನಾಲ್ಕು ಪಥದ ರಸ್ತೆಯನ್ನಾಗಿ ವಿಸ್ತರಿಸಲಾಗುತ್ತಿದೆ. ಈ ಕಾಮಗಾರಿ ಪೂರ್ಣಗೊಂಡ ಬಳಿಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಯಿಂದ ಮೇಖ್ರಿ ವೃತ್ತದ ಕಡೆಗೆ ಪ್ರಯಾಣಿಸುವವರಿಗೆ ಅನುಕೂಲವಾಗಲಿದೆ.

ಬ್ಯಾಪ್ಟಿಸ್ಟ್​ ಆಸ್ಪತ್ರೆ ಕಡೆಯಿಂದ ನಿರ್ಮಾಣ ಹಂತದಲ್ಲಿರುವ ರ‍್ಯಾಂಪ್ ಕಾಮಗಾರಿಯನ್ನು ಪೂರ್ಣಗೊಳಿಸಿ ಕೆಆರ್​ಪುರ ಕಡೆಯಿಂದ ಮೇಖ್ರಿ ವೃತ್ತದ ಕಡೆಗೆ ಹೋಗುವ ವಾಹನಗಳಿಗೆ ಅನುಕೂಲ ಮಾಡಿಕೊಡಲು ಈ ಕಾಮಗಾರಿ ಕೈಗೊಳ್ಳಲಾಗುತ್ತಿದೆ.

ವಿಮಾನ ನಿಲ್ದಾಣ ಕಡೆಯಿಂದ ಮೇಖ್ರಿ ವೃತ್ತದ ಕಡೆಗೆ ಬರುವುದಕ್ಕೆ ದ್ವಿಪಥ ರಸ್ತೆ ಮಾತ್ರ ಇದೆ. ಕೆ.ಆರ್​.ಪುರ ಕಡೆಯಿಂದ ಬರುವ ರಸ್ತೆ ಇದನ್ನು ಸೇರಿಕೊಳ್ಳುತ್ತದೆ. ವಿಮಾನ ನಿಲ್ದಾಣ ಕಡೆಯಿಂದ ನಗರದ ಕಡೆಗೆ ಪ್ರಯಾಣಿಸುವ ವಾಹನಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಸಂಚಾರ ದಟ್ಟಣೆ ಉಂಟಾಗುತ್ತದೆ. ಈ ಸಂಚಾರ ದಟ್ಟಣೆಯನ್ನು ನಿವಾರಿಸಲು ರಸ್ತೆಯನ್ನು ವಿಸ್ತರಿಸಲಾಗುತ್ತಿದೆ.

ಹೆಬ್ಬಾಳ ಫ್ಲೈಓವರ್ ಬಳ್ಳಾರಿ ರಸ್ತೆ, ವಿಮಾನ ನಿಲ್ದಾಣ ಮತ್ತು ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಹೀಗಾಗಿ, ಹೆಚ್ಚು ಸಂಚಾರ ದಟ್ಟಣೆ ಉಂಟಾಗುತ್ತದೆ. ಕಾಮಗಾರಿ ಪೂರ್ಣಗೊಂಡ ಬಳಿಕ ಟ್ರಾಫಿಕ್​ ಸಮಸ್ಯೆಗೆ ಬ್ರೇಕ್​ ಬೀಳಲಿದೆ.

ಇದನ್ನೂ ಓದಿ : ಮದುವೆಯಾಗದೆ ತಾಯಿಯಾಗ್ತಿದ್ದಾರೆ ಭಾವನಾ ರಾಮಣ್ಣ.. 40ನೇ ವಯಸ್ಸಲ್ಲಿ ಗುಡ್​ನ್ಯೂಸ್ ಕೊಟ್ಟ ಸ್ಯಾಂಡಲ್​ವುಡ್​​ ನಟಿ!

Btv Kannada
Author: Btv Kannada

Read More