ರಣಭೀಕರ ಮಳೆಗೆ ತತ್ತರಿಸಿದ ಹಿಮಾಚಲ ಪ್ರದೇಶ – 63 ಮಂದಿ ಸಾವು.. 400 ಕೋಟಿಗೂ ಅಧಿಕ ಮೌಲ್ಯದ ಆಸ್ತಿಪಾಸ್ತಿ ನಷ್ಟ!

ಹಿಮಾಚಲ ಪ್ರದೇಶ : ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಿಂದ ಜನ ಜೀವನ ಸಂಕಷ್ಟಕ್ಕೀಡಾಗಿದೆ. ರಣಭೀಕರ ಮಳೆಗೆ 63ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಗುಡ್ಡಗಾಡು ರಾಜ್ಯ ಹಿಮಾಚಲ ಪ್ರದೇಶದಲ್ಲಿ ಮಳೆಯಿಂದ ಭಾರೀ ಪ್ರಮಾಣದಲ್ಲಿ ಹಾನಿಯಾಗಿದೆ.

ಹಿಮಾಚಲ ಪ್ರದೇಶ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಂದಾಜಿನ ಪ್ರಕಾರ, 400 ಕೋಟಿ ರೂಪಾಯಿ ಆಸ್ತಿಪಾಸ್ತಿ ನಷ್ಟ ಸಂಭವಿಸಿದೆ. ಭಾರತೀಯ ಹವಾಮಾನ ಇಲಾಖೆಯು ಜುಲೈ 7ರವರೆಗೂ ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಿದೆ.

ಹಿಮಾಚಲ ಪ್ರದೇಶದಲ್ಲಿ ಮಂಡಿ ಜಿಲ್ಲೆಯಲ್ಲಿ ಅತಿ ಹೆಚ್ಚು ಹಾನಿ ಸಂಭವಿಸಿದೆ. ಮಂಡಿ ಜಿಲ್ಲೆಯಲ್ಲಿ ಭಾರೀ ಹಾನಿ ಸಂಭವಿಸಿದ್ದು, ರಸ್ತೆಗಳು ಹೆಚ್ಚು ಹಾಳಾಗಿವೆ. ವಾಹನಗಳು ಸಂಚಾರ ಮಾಡಲಾಗದ ಸ್ಥಿತಿಗೆ ರಸ್ತೆಗಳು ತಲುಪಿವೆ. ಜೊತೆಗೆ ವಿದ್ಯುತ್ , ಕುಡಿಯುವ ನೀರಿನ ಸಂಪರ್ಕದಲ್ಲೂ ವ್ಯತ್ಯಯವಾಗಿದೆ.

ವಿಪತ್ತು ನಿರ್ವಹಣಾ ಪ್ರಾಧಿಕಾರದ ಸ್ಪೆಷಲ್ ಸೆಕ್ರೆಟರಿ ಡಿ.ಸಿ.ರಾಣಾ ಹೇಳುವ ಪ್ರಕಾರ, ನಾವು 400 ಕೋಟಿ ರೂಪಾಯಿಯಷ್ಟು ಆಸ್ತಿಪಾಸ್ತಿ ನಷ್ಟವಾಗಿರುವುದನ್ನು ದಾಖಲಿಸಿದ್ದೇವೆ. ಆದರೆ ವಾಸ್ತವವಾಗಿ ನಷ್ಟ ಇನ್ನೂ ಹೆಚ್ಚಾಗಿದೆ. ನಮ್ಮ ಪ್ರಾಥಮಿಕ ಆದ್ಯತೆ ಈಗ ಶೋಧ, ರಕ್ಷಣೆ ಮತ್ತು ಸಂಪರ್ಕದ ಮರುಸ್ಥಾಪನೆಯತ್ತ ಇದೆ ಎಂದಿದ್ದಾರೆ.

ರೀಲೀಫ್ ಕ್ಯಾಂಪ್​ಗಳನ್ನು ತೆರೆಯಲಾಗಿದ್ದು, ಇಂಡಿಯನ್ ಏರ್ ಪೋರ್ಸ್ ವಿಮಾನಗಳ ಮೂಲಕ ಫುಡ್ ಪ್ಯಾಕೆಟ್ ಗಳನ್ನು ಏರ್ ಡ್ರಾಪ್ ಮಾಡಲಾಗುತ್ತಿದೆ. ಮಂಡಿ ಜಿಲ್ಲೆಯಲ್ಲಿ ಹಳ್ಳಿಯೊಂದು ಸಂಪೂರ್ಣ ನಾಶವಾಗಿ ಹೋಗಿದೆ.

ಹಿರಿಯ ಅಧಿಕಾರಿಗಳು, ಹಳ್ಳಿ ಹಾಳಾದ ಪ್ರದೇಶದಲ್ಲಿ ಮೊಕ್ಕಾಂ ಹೂಡಿದ್ದಾರೆ. ಪಿಡಬ್ಲ್ಯುಡಿ, ಇಂಧನ ಇಲಾಖೆ, ಜಲಶಕ್ತಿ ಇಲಾಖೆಯ ಅಧಿಕಾರಿಗಳು ರಸ್ತೆ, ವಿದ್ಯುತ್, ಕುಡಿಯುವ ನೀರಿನ ಸಂಪರ್ಕದ ಮರುಸ್ಥಾಪನೆಗೆ ಯತ್ನಿಸುತ್ತಿದ್ದಾರೆ.ಹಲವೆಡೆ ಶಾಲಾ-ಕಾಲೇಜುಗಳ ಕ್ಲಾಸ್ ರೂಮುಗಳು ಜಲಾವೃತ್ತವಾಗಿದ್ದು, ವಿದ್ಯಾರ್ಥಿಗಳಲ್ಲಿ ಭಯ, ಆತಂಕ ಆವರಿಸಿದೆ.

ಇದನ್ನೂ ಓದಿ : ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗಲ್ಲ – ಡಿಸಿಎಂ ಡಿಕೆಶಿ ಮಾರ್ಮಿಕ ನುಡಿ!

Btv Kannada
Author: Btv Kannada

Read More