ಬೆಂಗಳೂರು : ಕೋಟಿ ಕೋಟಿ ರೂಪಾಯಿ ತೆರಿಗೆ ವಂಚಿಸಿ ಬೆಂಗಳೂರಿನಲ್ಲಿ ಓಡಾಡಿಕೊಂಡಿದ್ದ ಐಷಾರಾಮಿ ಫೆರಾರಿ ಕಾರು ಮಾಲೀಕನಿಗೆ ಆರ್‌ಟಿಓ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.
7.5 ಕೋಟಿ ಆರಂಭಿಕ ಬೆಲೆ ಹೊಂದಿರುವ ಕೆಂಪು ಬಣ್ಣದ ಫೆರಾರಿ SF90 ಸ್ಟ್ರಾಡೇಲ್, ಕಳೆದ ಕೆಲವು ತಿಂಗಳುಗಳಿಂದ ಬೆಂಗಳೂರಿನ ಬೀದಿಗಳಲ್ಲಿ ಸುತ್ತುತ್ತಿತ್ತು. ಮಹಾರಾಷ್ಟ್ರ ರಿಜಿಸ್ಟ್ರೇಷನ್ ಹೊಂದಿದ ಕಾರು ಇದಾಗಿದೆ. ಮಹಾರಾಷ್ಟ್ರದಲ್ಲಿ 20 ಲಕ್ಷ ರೂಪಾಯಿ ತೆರಿಗೆ ಪಾವತಿಸಿ 2023ರ ಸೆಪ್ಟೆಂಬರ್‌ನಿಂದಲೂ ರಾಜ್ಯದಲ್ಲಿ ಅನಧಿಕೃತವಾಗಿ ಓಡಾಟ ನಡೆಸುತ್ತಿತ್ತು ಎನ್ನಲಾಗಿದೆ.
ಕಾರಿನ ಅನಧಿಕೃತ ಓಡಾಟದ ಬಗ್ಗೆ ಟ್ರಾಫಿಕ್ ಪೊಲೀಸರು ಆರ್‌ಟಿಓಗೆ ಮಾಹಿತಿ ನೀಡಿದ್ದರು. ಜೂನ್ 2ರಂದು ಬೆಂಗಳೂರಿನ ಲಾಲ್ ಬಾಗ್ ಬಳಿ ಕಾರನ್ನು ಆರ್‌ಟಿಓ ಅಧಿಕಾರಿಗಳು ತಡೆದು ತಪಾಸಣೆ ನಡೆಸಿದರು. ಆಗ ತೆರಿಗೆ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ನಿಯಮ ಪಾಲಿಸದಿದ್ದರೆ ಕಾನೂನು ಪರಿಣಾಮ ಎದುರಿಸಬೇಕಾಗುತ್ತದೆ ಎಂದು ನೋಟಿಸ್‌ನಲ್ಲಿ ಎಚ್ಚರಿಸಲಾಗಿತ್ತು. ಹೀಗಾಗಿ ತ್ವರಿತವಾಗಿ ಕಾರ್ಯನಿರ್ವಹಿಸಿದ ಮಾಲೀಕರು 1,41,59,041 ರೂಪಾಯಿಗಳ ಸಂಪೂರ್ಣ ಬಾಕಿ ಮತ್ತು ದಂಡವನ್ನು ಪಾವತಿಸಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಅತಿ ದೊಡ್ಡ ಏಕ-ವಾಹನ ತೆರಿಗೆ ವಸೂಲಿಗಳಲ್ಲಿ ಇದು ಒಂದಾಗಿದೆ. ತೆರಿಗೆ ಪಾವತಿಗಳಿಲ್ಲದೆ ಕಾರ್ಯನಿರ್ವಹಿಸುವ ಐಷಾರಾಮಿ ವಾಹನಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಇಲಾಖೆ ತಿಳಿಸಿದೆ. ಫೆಬ್ರವರಿಯಲ್ಲಿ ತೆರಿಗೆ ವಂಚನೆಗಾಗಿ ಸಾರಿಗೆ ಇಲಾಖೆಯು ಫೆರಾರಿ, ಪೋರ್ಷೆ, ಬಿಎಂಡಬ್ಲ್ಯು, ಆಡಿ, ಆಸ್ಟನ್ ಮಾರ್ಟಿನ್ ಮತ್ತು ರೇಂಜ್ ರೋವರ್‌ಗಳು ಸೇರಿದಂತೆ 30 ಐಷಾರಾಮಿ ಕಾರುಗಳನ್ನು ವಶಪಡಿಸಿಕೊಂಡಿದೆ.
ಇದನ್ನೂ ಓದಿ : ಯಾದಗಿರಿ SP ಪೃಥ್ವಿಕ್ ಶಂಕರ್ ವರ್ಗಾವಣೆ ಬೇಡ - ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದ ಮಾಜಿ ಸಚಿವ ರಾಜುಗೌಡ!
