ಯಾದಗಿರಿ : ಕಾನೂನು ಸುವ್ಯವಸ್ಥೆ ಕಾಪಾಡಿದ ಪ್ರಾಮಾಣಿಕ ದಿಟ್ಟ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಅವರನ್ನು ಯಾದಗಿರಿ ಜಿಲ್ಲೆಯಲ್ಲಿ ಮುಂದುವರಿಸಬೇಕು ಎಂದು ಮಾಜಿ ಸಚಿವ ರಾಜುಗೌಡ ಅವರು ಸಿಎಂ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಮಂಡ್ಯ ಮೂಲದ ಖಡಕ್ ಐಪಿಎಸ್ ಅಧಿಕಾರಿ ಪೃಥ್ವಿಕ್ ಶಂಕರ್, ಯಾದಗಿರಿಯ ಎಸ್ಪಿಯಾಗಿ ನೇಮಕಗೊಂಡು ಕೇವಲ 7 ತಿಂಗಳಲ್ಲಿ ಜಿಲ್ಲೆಯಲ್ಲಿ ಮಟ್ಕಾ, ಜೂಜಾಟ, ಅಕ್ರಮ ಮರಳುಗಾರಿಕೆ ನಿಯಂತ್ರಿಸಿ ಶಾಂತಿ ಸುವ್ಯವಸ್ಥೆ ಕಾಪಾಡಿದ್ದಾರೆ. ರಾಜಕೀಯ ವ್ಯವಸ್ಥೆಯಿಂದಾಗಿ ದಕ್ಷ ನಿಷ್ಠಾವಂತ ಪೊಲೀಸ್ ಅಧಿಕಾರಿ ಪೃಥ್ವಿಕ್ ಶಂಕರ್ ವರ್ಗಾವಣೆ ಮಾಡಿದ್ದು, ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣವಾಗಿದೆ. ವೈಯಕ್ತಿಕ ನನಗೂ ಬೇಸರ ತರಿಸಿದೆ ಎಂದು ಅವರು ತಿಳಿಸಿದ್ದಾರೆ.
ಅಧಿಕಾರ ಸ್ವೀಕರಿಸಿದ ದಿನದಿಂದಲೇ ಅಕ್ರಮಗಳ ವಿರುದ್ದ ಕಾರ್ಯಾಚರಣೆ ಆರಂಭಿಸಿದ್ದ ಅವರು, ದಂಧೆಕೋರರಿಗೆ ಭೀತಿ ಮೂಡಿಸಿದ್ದರು. ಇದರ ಪರಿಣಾಮವಾಗಿ, ಪ್ರಭಾವಿ ಶಾಸಕರೊಬ್ಬರ ಒತ್ತಡದ ಹಿನ್ನೆಲೆಯಲ್ಲಿ ಸರ್ಕಾರ ಎಸ್ಪಿಯವರ ವರ್ಗಾವಣೆಗೆ ಮುಂದಾಗಿದೆ ಎಂಬ ಆರೋಪಗಳೂ ಕೇಳಿಬರುತ್ತಿವೆ. ಖಡಕ್ ಕ್ರಮಗಳನ್ನು ಕೈಗೊಂಡಿದ್ದ ಶಂಕರ್ ಅವರನ್ನು ಮರಳು ಯತ್ನಿಸಿದ ಅಕ್ರಮ ದಂಧೆಕೋರರು ಅದರಲ್ಲಿ ವಿಫಲರಾಗಿದ್ದರು. ಹೀಗಾಗಿ ಇನ್ನೆರಡು ದಿನಗಳಲ್ಲಿ ಶಂಕರ್ ವರ್ಗಾವಣೆ ಆದೇಶ ಬರಲಿದೆ ಎನ್ನಲಾಗಿದೆ.
ಇದಕ್ಕೆ ಬೇಸರಗೊಂಡಿರುವ ಮಾಜಿ ಸಚಿವ ರಾಜುಗೌಡ ಅವರು ಎಸ್ಪಿ ಪೃಥ್ವಿಕ್ ಶಂಕರ್ ವರ್ಗಾವಣೆ ಆದೇಶವನ್ನು ತಡೆಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಅಕ್ರಮ ದಂಧೆಗೆ ಕಡಿವಾಣ ಹಾಕಿದ ಶಂಕರ್ ಅವರ ಸೇವೆ ಜಿಲ್ಲೆಗೆ ಅಗತ್ಯವಾಗಿದೆ. ಈ ರೀತಿ ಪ್ರಾಮಾಣಿಕ ಅಧಿಕಾರಿಗೆ ಕೆಲಸ ಮಾಡಲು ಅವಕಾಶ ಇಲ್ಲದಿರುವುದು ಬೇಸರ ತರಿಸಿದೆ ಎಂದು ಪತ್ರದಲ್ಲಿ ಹೇಳಿದ್ದಾರೆ.
ಇನ್ನು ಅಹಿತಕರ, ಅಕ್ರಮ ಚಟುವಟಿಕೆಗಳ ಮಟ್ಟ ಹಾಕಿ ಕಾನೂನು ಸುವ್ಯವಸ್ಥೆ ಕಲ್ಪಿಸಿದ ನಿಷ್ಠಾವಂತ ಅಧಿಕಾರಿಯನ್ನು ಜನರು ಹೋರಾಟ ಮಾಡುವ ಮುಂಚೆಯೇ ವರ್ಗಾವಣೆ ಹಿಂಪಡೆದು ಜಿಲ್ಲೆಯಲ್ಲಿ ಕರ್ತವ್ಯ ನಿಭಾಯಿಸಲು ಅವಕಾಶ ನೀಡಬೇಕು ಎಂದು ಮಾಜಿ ಸಚಿವ ರಾಜುಗೌಡ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಪತ್ನಿ, ಸಹೋದರನ ಜೊತೆ ಚಾಮುಂಡಿ ಬೆಟ್ಟಕ್ಕೆ ನಟ ದರ್ಶನ್ ಭೇಟಿ.. ನಾಡ ಅಧಿದೇವತೆಗೆ ವಿಶೇಷ ಪೂಜೆ ಸಲ್ಲಿಕೆ!
