ಮೈಸೂರು : ಇಂದು ಎರಡನೇ ಆಷಾಢ ಶುಕ್ರವಾರ ಹಿನ್ನೆಲೆ ನಾಡ ಅಧಿದೇವತೆ ಚಾಮುಂಡೇಶ್ವರಿ ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬಂದಿದೆ. ತಾಯಿ ಚಾಮುಂಡೇಶ್ವರಿಗೆ ಬೆಳಗಿನಿಂದಲೇ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಲಾಗ್ತಿದೆ. ಬೆಳ್ಳಂಬೆಳಗ್ಗೆ ಸ್ಯಾಂಡಲ್ವುಡ್ ನಟ ದರ್ಶನ್ ಅವರು ಕೂಡ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದು, ಪತ್ನಿ ವಿಜಯಲಕ್ಷ್ಮಿ, ಸಹೋದರ ದಿನಕರ್ ಸಮೇತ ದೇಗುಲಕ್ಕೆ ಬಂದ ದರ್ಶನ್ ದೇವಿಯ ದರ್ಶನ ಪಡೆದು ವಾಪಾಸ್ ಆಗಿದ್ದಾರೆ.
ನಟ ದರ್ಶನ್ ಹಾಗೂ ಕುಟುಂಬಸ್ಥರು ಚಾಮುಂಡೇಶ್ವರಿ ದೇವಿ ಮೇಲೆ ಅಪಾರ ನಂಬಿಕೆ ಹೊಂದಿದ್ದಾರೆ. ಆಗಾಗ ದೇಗುಲಕ್ಕೆ ಭೇಟಿ ನೀಡುತ್ತಲೇ ಇರುತ್ತಾರೆ. ಕಳೆದ ವರ್ಷ ಕೊಲೆ ಕೇಸ್ನಲ್ಲಿ ಜೈಲು ಸೇರಿದ್ದ ಹಿನ್ನೆಲೆ ಹಿಂದಿನ ವರ್ಷದ ಆಷಾಢಕ್ಕೆ ನಟ ದರ್ಶನ್ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ಈ ಬಾರಿ ದಂಪತಿ ಸಮೇತ ಆಗಮಿಸಿ ಚಾಮುಂಡಿ ತಾಯಿಯ ದರ್ಶನ ಪಡೆದಿದ್ದಾರೆ.
ನಟ ದರ್ಶನ್ ಕಾರು ಚಾಮುಂಡಿ ಬೆಟ್ಟಕ್ಕೆ ಬರ್ತಿದ್ದಂತೆ ಅಭಿಮಾನಿಗಳು ಕಾರಿನ ಸುತ್ತ ಸುತ್ತವರಿದಿದ್ದು, ಕಾರು ಇಳಿದ ದರ್ಶನ್ ಕಂಡು ಡಿಬಾಸ್, ಡಿಬಾಸ್ ಎಂದು ಕೂಗಿದ್ದಾರೆ. ಮೊಬೈಲ್ ಹಿಡಿದು ವಿಡಿಯೋ ಮಾಡಲು ಜನರು ಪರದಾಡಿದ್ದಾರೆ. ಅಭಿಮಾನಿಗಳಿಗೆ ಕೈ ಮುಗಿದ ದರ್ಶನ್, ದೇವಸ್ಥಾನದ ಒಳಗೆ ತೆರಳಿದ್ದಾರೆ.
ಚಾಮುಂಡೇಶ್ವರಿಗೆ ವಿಶೇಷ ಅಲಂಕಾರ : 2ನೇ ಆಷಾಢದ ಶುಕ್ರವಾರದ ಹಿನ್ನೆಲೆ ದೇವಿಗೆ ಮುಂಜಾನೆ 3:30ಕ್ಕೆ ವಿವಿಧ ಅಭಿಷೇಕಗಳನ್ನು ಮಾಡಲಾಗಿದೆ. ಬೆಳಿಗ್ಗೆ 6 ಗಂಟೆಯಿಂದ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆಯುತ್ತಿದ್ದಾರೆ. ರಾಜ್ಯದ ಮೂಲೆ ಮೂಲೆಗಳಿಂದಲೂ ಭಕ್ತರ ದಂಡೇ ದೇಗುಲಕ್ಕೆ ಹರಿದು ಬರ್ತಿದ್ದು, ದೇವಾಲಯದ ಒಳಗೆ ವಿವಿಧ ಬಗೆಯ ಹಣ್ಣುಗಳಿಂದ ತಾಯಿ ಚಾಮುಂಡೇಶ್ವರಿಗೆ ಅಲಂಕಾರ ಮಾಡಲಾಗಿದೆ.
ಜನರ ಆಗಮನ ಹೆಚ್ಚಿದ ಹಿನ್ನೆಲೆ ನೂಕು ನುಗ್ಗುಲು ಉಂಟಾಗದ ರೀತಿಯಲ್ಲಿ ಬ್ಯಾರಿಕೇಡ್ಗಳ ವ್ಯವಸ್ಥೆ ಮಾಡಲಾಗಿದ್ದು, ಅಹಿತಕರ ಘಟನೆ ಜರುಗದಂತೆ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ. ಇನ್ನು ಚಾಮುಂಡಿ ಬೆಟ್ಟಕ್ಕೆ ಖಾಸಗಿ ವಾಹನಗಳ ನಿಷೇಧ ಮಾಡಲಾಗಿದೆ. ಲಲಿತಮಹಲ್ ಮೈದಾನದಿಂದ ಉಚಿತ ಸಾರಿಗೆ ಬಸ್ ವ್ಯವಸ್ಥೆ ಇದೆ. ಕುಡಿಯುವ ನೀರು, ಶೌಚಾಲಯ, ಮೂಲಭೂತ ಸೌಕರ್ಯಗಳ ವ್ಯವಸ್ಥೆಯನ್ನೂ ಮಾಡಲಾಗಿದೆ.
ಇದನ್ನೂ ಓದಿ : CS ಶಾಲಿನಿ ರಜನೀಶ್ ಬಗ್ಗೆ ಅವಹೇಳನಕಾರಿ ಹೇಳಿಕೆ – MLC ರವಿಕುಮಾರ್ಗೆ ನೋಟಿಸ್ ನೀಡಲು ಪೊಲೀಸರ ತಯಾರಿ!
