ಮಂಗಳೂರು : ಕರಾವಳಿಯಲ್ಲಿ ಬಿಜೆಪಿ ಮುಖಂಡನ ಪುತ್ರನ ವಿರುದ್ಧ ಲವ್, ಸೆಕ್ಸ್, ದೋಖಾ ಆರೋಪ ಪ್ರಕರಣ ದಾಖಲಾಗಿದೆ. ಮದುವೆಯಾಗುವುದಾಗಿ ನಂಬಿಸಿ ಯುವತಿಯೊಬ್ಬಳನ್ನು ಗರ್ಭಿಣಿ ಮಾಡಿದ ಪ್ರಕರಣದಲ್ಲಿ ಸ್ಥಳೀಯ ಬಿಜೆಪಿ ಮುಖಂಡನ ಪುತ್ರ ಎಸ್ಕೇಪ್ ಆಗಿದ್ದು, ಆತನ ಪತ್ತೆಗೆ ಸದ್ಯ ಪೊಲೀಸರು ಬಲೆ ಬೀಸಿದ್ದಾರೆ.

ಪುತ್ತೂರಿನ ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಪುತ್ರಪುತ್ರ ಕೃಷ್ಣರಾವ್ (21) ವಿರುದ್ದ ಪ್ರಕರಣ ದಾಖಲಾಗಿದ್ದು, ಮಂಗಳೂರಿನ ಖಾಸಗಿ ಕಾಲೇಜಿನ BSC ಫಾರೆನ್ಸಿಕ್ ಸೈನ್ಸ್ ವಿದ್ಯಾರ್ಥಿನಿ ದೂರು ನೀಡಿದ್ದಾರೆ. ಪುತ್ತೂರಿನಲ್ಲಿ ಹೈಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವೇಳೆ ಇಬ್ಬರಿಗೂ ಪ್ರೇಮಾಂಕುರವಾಗಿತ್ತು. ಬಳಿಕ 2024ರ ಅಕ್ಟೋಬರ್ 11ರಂದು ಕೃಷ್ಣ ರಾವ್ ಮನೆಗೆ ಕರೆದು ದೈಹಿಕ ಸಂಪರ್ಕ ಬೆಳೆಸಿದ ಆರೋಪ ಮಾಡಿದ್ದಾರೆ.

ಸಹಪಾಠಿ ಯುವತಿಯನ್ನು ಗರ್ಭಿಣಿ ಮಾಡಿ ಕೃಷ್ಣ ರಾವ್ ಕೈ ಕೊಟ್ಟಿದ್ದು, ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ಕರೆಸಿ ಯುವತಿ ಜೊತೆ ಲೈಂಗಿಕ ಸಂಪರ್ಕ ಬೆಳೆಸಿದ್ದಾನೆ. 2025ರ ಜನವರಿಯಲ್ಲಿ ಮತ್ತೆ ಬಲವಂತವಾಗಿ ಕೃಷ್ಣ ರಾವ್ ಯುವತಿ ಜೊತೆ ಲೈಂಗಿಕ ಸಂಪರ್ಕ ಮಾಡಿದ್ದಾನೆ.
ಕೆಲ ತಿಂಗಳ ಬಳಿಕ ನಾನು ಗರ್ಭಿಣಿ ಎಂದು ಕೃಷ್ಣ ರಾವ್ಗೆ ಯುವತಿ ತಿಳಿಸಿದ್ದಳು. ಲವ್ ಹೆಸರಲ್ಲಿ ಯುವತಿಯನ್ನು ಗರ್ಭವತಿಯನ್ನಾಗಿ ಮಾಡಿ ಆ ಬಳಿಕ ಕೃಷ್ಣ ರಾವ್ ಉಲ್ಟಾ ಹೊಡೆದಿದ್ದಾನೆ. ಇದೀಗ ಯುವತಿಯನ್ನು ಮದುವೆಯಾಗಲು ನಿರಾಕರಿಸಿರುವ ಆರೋಪಿ ಕೃಷ್ಣ ರಾವ್ ವಿರುದ್ದ ಯುವತಿ ಹಾಗೂ ಪೋಷಕರು ಪುತ್ತೂರು ಮಹಿಳಾ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿ 5 ದಿನವಾದರೂ ಪ್ರೀತಿ ಹೆಸರಲ್ಲಿ ಮೋಸ ಮಾಡಿದ ಕೃಷ್ಣ ಇನ್ನೂ ಪತ್ತೆಯಾಗಿಲ್ಲ. BNS 64(1), 69ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಲೆಮರೆಸಿಕೊಂಡಿರುವ ಆರೋಪಿಗಾಗಿ ಬಲೆ ಬೀಸಿದ್ದಾರೆ.
ಇದನ್ನೂ ಓದಿ : ‘ಲೋಕಾ’ ಹೆಸರಲ್ಲಿ ನೂರಾರು ಕೋಟಿ ವಸೂಲಿ – ಎಸ್ಪಿ ಶ್ರೀನಾಥ್ ಜೋಶಿ ವಿರುದ್ಧ ಕ್ರಮ ಜರುಗಿಸುವಂತೆ ಸರ್ಕಾರಕ್ಕೆ ಲೋಕಾಯುಕ್ತ ಪತ್ರ!
