ಬೆಂಗಳೂರು : ಲೋಕಾಯುಕ್ತ ಹೆಸರಿನಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಬೆದರಿಸಿ ನೂರಾರು ಕೋಟಿ ಹಣ ಸುಲಿಗೆ ಪ್ರಕರಣ ಸಂಬಂಧ ಆರೋಪಿತ ಐಪಿಎಸ್ ಅಧಿಕಾರಿ ಶ್ರೀನಾಥ್ ಜೋಶಿ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಸರ್ಕಾರಕ್ಕೆ ಲೋಕಾಯುಕ್ತ ಪತ್ರ ಬರೆದಿದೆ.
ಲೋಕಾಯುಕ್ತ ಸಂಸ್ಥೆ ಹೆಸರು ದುರ್ಬಳಕೆ ಮಾಡಿಕೊಂಡು ಹಣ ಸುಲಿಗೆ ಬಗ್ಗೆ ಗೌಪ್ಯ ಮಾಹಿತಿ ಲೋಕಾಯುಕ್ತರವರಿಗೆ ತಿಳಿದ ತಕ್ಷಣ ಸಂಸ್ಥೆಯ ಪೊಲೀಸ್ ಅಧೀಕ್ಷಕರಿಗೆ ತನಿಖೆಗೆ ಆದೇಶಿಸಿದ್ದರು. ಅದರನ್ವಯ ಬೆಂಗಳೂರು ನಗರ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಯಿತು.
ಪ್ರಕರಣದಲ್ಲಿ ನಿವೃತ್ತ ಹೆಡ್ ಕಾನ್‌ಸ್ಟೆಬಲ್ ನಿಂಗಪ್ಪನನ್ನು ಬಂಧಿಸಲಾಗಿತ್ತು. ಪ್ರಕರಣದ ಸಂಬಂಧ ತನಿಖೆ ವೇಳೆ ನಿಂಗಪ್ಪ ಜತೆ ಲೋಕಾಯುಕ್ತ ಎಸ್ಪಿ ಶ್ರೀನಾಥ್ ನಂಟು ಬಯಲಾಗಿದ್ದು, ಸರ್ಕಾರಿ ಅಧಿಕಾರಿಗಳಿಗೆ ಬೆದರಿಸಿ ಹಣವನ್ನು ಕೋಡ್ ವರ್ಡ್ ‘kg’ ಮುಖಾಂತರ ವಸೂಲು ಮಾಡುತ್ತಿರುವುದು ತನಿಖೆಯಲ್ಲಿ ಗೊತ್ತಾಗಿತ್ತು.
ಅಲ್ಲದೆ, ಕ್ರಿಪ್ಟೊ ಕರೆನ್ಸಿಯಲ್ಲಿ 4.92 ಕೋಟಿಯನ್ನು ನಿಂಗಪ್ಪ ಹೂಡಿಕೆ ಮಾಡಿರುವುದು ಪತ್ತೆಯಾಗಿತ್ತು. ಇನ್ನು ಎಸ್ಪಿ ಜೋಶಿ ಅವರ ಮನೆ ಶೋಧ ಕೂಡ ನಡೆಸಲಾಗಿದೆ. ಆದರೆ ಪ್ರಕರಣದ ತನಿಖೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಅಕ್ರಮವಾಗಿ ಹಣ ವಸೂಲಿ ಮಾಡಿರುವುದು ತನಿಖೆಯಲ್ಲಿ ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆಯಲ್ಲಿ ಇದೀಗ ಜೋಶಿ ವಿರುದ್ಧ ನಿಯಮಾನುಸಾರ ಸೂಕ್ತ ಕ್ರಮ ಜರುಗಿಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆಯಲಾಗಿದೆ ಎಂದು ಲೋಕಾಯು ಹೇಳಿದೆ.
ಇದನ್ನೂ ಓದಿ : ಏರೋಸ್ಪೇಸ್ ಪಾರ್ಕ್ಗೆ 1777 ಎಕ್ರೆ ಭೂಸ್ವಾಧೀನಕ್ಕೆ ವಿರೋಧ – ದೇವನಹಳ್ಳಿ ರೈತರೊಂದಿಗೆ ಇಂದು ಸಿಎಂ ಸಿದ್ದರಾಮಯ್ಯ ಸಭೆ!
