ಬೆಂಗಳೂರು : ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್ ಅಭಿವೃದ್ಧಿಗಾಗಿ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿ ವ್ಯಾಪ್ತಿಯ ಭೂಸ್ವಾಧೀನ ವಿರೋಧಿಸುತ್ತಿರುವ ರೈತರ ಜತೆ ಸಿಎಂ ಸಿದ್ದರಾಮಯ್ಯ ಇಂದು ಮನವೊಲಿಕೆ ಸಭೆ ನಡೆಸಲಿದ್ದಾರೆ.
ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್ ಅಭಿವೃದ್ಧಿಗಾಗಿ ಚನ್ನರಾಯಪಟ್ಟಣ ಹೋಬಳಿಗೆ ಸೇರಿದ 13 ಗ್ರಾಮಗಳ 1,777 ಎಕರೆ 2 ಗುಂಟೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು 20215 ಆ.27ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಿ, 2022ರ ಫೆ.15ರಂದು ಆದೇಶಿಸಲಾಗಿದೆ.
ಆದರೆ, ಭೂಸ್ವಾಧಿನಕ್ಕೆ ಸಂಬಂಧಿಸಿದಂತೆ ರೈತರಿಂದ ವಿರೋಧ ವ್ಯಕ್ತವಾದ ಹಿನ್ನೆಲೆ ಚನ್ನರಾಯಪಟ್ಟಣ ಹೋಬಳಿಯ ಚನ್ನರಾಯಪಟ್ಟಣ, ಮಟ್ಟಬಾರ್ಲು ಮತ್ತು ಪ್ರೋತ್ರೀಯ ತೆಲ್ಲೋಹಳ್ಳಿ ಗ್ರಾಮಗಳ 495 ಎಕರೆ ಭೂಮಿ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಲು ಸರ್ಕಾರ ನಿರ್ಧರಿಸಿದ್ದು, ಈ ಬಗ್ಗೆ ಈಗಾಗಲೇ ಪ್ರಕಟಿಸಲಾಗಿದೆ. ಆದರೆ, ಉಳಿದ 10 ಗ್ರಾಮಗಳ ರೈತರೂ ಕೂಡ ಭೂಸ್ವಾಧೀನ ಮಾಡಿಕೊಳ್ಳದಂತೆ ಆಗ್ರಹಿಸಿ ಪ್ರತಿಭಟನೆ ಮುಂದುವರಿಸಿದ್ದಾರೆ.
ಈ ಸಂಬಂಧ ಚರ್ಚೆ ನಡೆಸಲು, ಭೂಮಿಯನ್ನು ನೀಡುವುದಕ್ಕೆ ಸಂಬಂಧಿಸಿದಂತೆ ರೈತರ ಮನವೊಲಿಕೆ ಮಾಡಲು ಸಿದ್ದರಾಮಯ್ಯ ಸಭೆ ನಡೆಸಲಿದ್ದಾರೆ. ರೈತರೊಂದಿಗಿನ ಸಭೆಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಗುರುವಾರ, ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವರಾದ ಎಚ್.ಕೆ. ಪಾಟೀಲ್, ಎಂ.ಬಿ. ಪಾಟೀಲ್, ಕೆ.ಎಚ್. ಮುನಿಯಪ್ಪ, ಬಿ.ಎಸ್. ಸುರೇಶ್, ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರೊಂದಿಗೆ ಸಭೆ ನಡೆಸಿದ್ದಾರೆ. ಈ ವೇಳೆ ಸಿದ್ದರಾಮಯ್ಯ ಅವರು ಅಧಿಕಾರಿಗಳಿಂದ ಯೋಜನೆ ಮತ್ತು ರೈತರ ಮನವೊಲಿಕೆಗೆ ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಬಹುದು ಎಂಬ ಬಗ್ಗೆ ಮಾಹಿತಿಯನ್ನು ಪಡೆದಿದ್ದಾರೆ.
ಇದನ್ನೂ ಓದಿ : ಬೈಕ್-ಟ್ರ್ಯಾಕ್ಟರ್ ನಡುವೆ ಭೀಕರ ಅಪಘಾತ.. ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ದುರ್ಮರಣ!
