ದಾವಣಗೆರೆ : ಆನ್‌ಲೈನ್ ಬೆಟ್ಟಿಂಗ್ ಚಟಕ್ಕೆ ಬಿದ್ದು ಸಾಲ ಮಾಡಿಕೊಂಡಿದ್ದ ಯುವಕನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಇಲ್ಲಿನ ಸರಸ್ವತಿ ಬಡಾವಣೆಯ ನಿವಾಸಿ ಶಶಿಕುಮಾರ್ (25 ವರ್ಷ) ಆತ್ಮಹತ್ಯೆ ಮಾಡಿಕೊಂಡ ಯುವಕ.
ಶಶಿಕುಮಾರ ಆತ್ಮಹತ್ಯೆಗೂ ಮುನ್ನ 6 ಪುಟಗಳ ಡೆತ್ ನೋಟ್ ಬರೆದು, ಸೆಲ್ಫಿ ವೀಡಿಯೋ ಮಾಡಿದ್ದಾನೆ. ಆನಲೈನ್ ಗೇಮಿಂಗ್ನಲ್ಲಿ 18 ಲಕ್ಷ ರೂ. ಕಳೆದುಕೊಂಡಿದ್ದೇನೆ. ಆದರೆ ಇದೇ ಆನಲೈನ್ ಗೇಮಿಂಗ್ನಲ್ಲಿ 19 ಕೋಟಿ ರೂ.ಗಳಿಗೂ ಅಧಿಕ ಹಣ ನಾನು ಗೆದ್ದಿದ್ದರೂ ಆನಲೈನ್ ಗೇಮ್ ನಡೆಸುವವರು ನನಗೆ ಹಣ ಕೊಟ್ಟಿಲ್ಲ.
ಈ ಬಗ್ಗೆ ವಿದ್ಯಾನಗರ ಠಾಣೆಗೆ ದೂರು ನೀಡಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇದರಿಂದಾಗಿ ಮಾನಸಿಕವಾಗಿ ತೀವ್ರ ಖಿನ್ನತೆಗೆ ಒಳಗಾಗಿದ್ದೇನೆ. ಆನ್‌ಲೈನ್ ಗೇಮಿಂಗ್ ಹಿಂದಿರುವ ಕಾಣದ ಕೈಗಳ ವಿರುದ್ಧ ಪೊಲೀಸ್ ಇಲಾಖೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ತನ್ನಂತೆಯೇ ಮುಂದಿನ ಪೀಳಿಗೆಗೆ ಸಮಸ್ಯೆ ಆಗದಿರಲಿ ಎಂದು ಆನ್‌ಲೈನ್ ಗೇಮಿಂಗ್ ದಂಧೆ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳಿ ಎಂಬುದಾಗಿ ಶಶಿಕುಮಾರ ಡೆತ್ ನೋಟ್ ಬರೆದಿದ್ದು, ಸೆಲ್ಫಿ ವೀಡಿಯೋದಲ್ಲೂ ತನ್ನ ಹೇಳಿಕೆ ರೆಕಾರ್ಡ್ ಮಾಡಿದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ವಿಘ್ನಗಳನ್ನು ದಾಟಿ ಕೊನೆಗೂ ಬಂದ ‘ಕರ್ಣ’ – ಇನ್ನು ಭವ್ಯಾ, ನಮ್ರತಾ, ಕಿರಣ್ ರಾಜ್ ತ್ರಿವಳಿ ಆಟ ಶುರು!
