ಮಾಜಿ ಸಚಿವ ಈಶ್ವರಪ್ಪ ಕುಟುಂಬಕ್ಕೆ ‘ಲೋಕಾ’ ಶಾಕ್ – ಕೋರ್ಟ್​ ಸೂಚನೆಯಂತೆ ಈಶ್ವರಪ್ಪ, ಮಗ-ಸೊಸೆ ವಿರುದ್ಧ FIR!

ಶಿವಮೊಗ್ಗ : ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಮಾಜಿ ಸಚಿವ ಕೆಎಸ್‌ ಈಶ್ವರಪ್ಪ, ಪುತ್ರ ಕೆ ಈ ಕಾಂತೇಶ್‌ ಮತ್ತು ಸೊಸೆ ಆರ್‌ ಶಾಲಿನಿ ವಿರುದ್ಧ ಲೋಕಾಯುಕ್ತದಲ್ಲಿ FIR ದಾಖಲಾಗಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 13(1)(ಡೀ), 13(1)(ಸಿ), 120(ಬಿ) ಮತ್ತು 420 ಹಾಗೂ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

ಈ ಹಿಂದೆ ಶಿವಮೊಗ್ಗದ ವಕೀಲ ವಿನೋದ್, ಈಶ್ವರಪ್ಪ ಮತ್ತು ಅವರ ಕುಟುಂಬದ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಆ ದೂರಿನ ಆಧಾರದಲ್ಲಿ ವಿಚಾರಣೆ ನಡೆಸಿದ ಲೋಕಾಯುಕ್ತ ಪೊಲೀಸರು, ಲೋಕಾಯುಕ್ತ ನ್ಯಾಯಾಲಯಕ್ಕೆ ಬಿ-ರಿಪೋರ್ಟ್ ಸಲ್ಲಿಸಿದ್ದರು. ಆದರೆ, ಹೈಕೋರ್ಟ್‌ನಲ್ಲಿ ಲೋಕಾಯುಕ್ತ ಸಲ್ಲಿಸಿದ ಬಿ-ರಿಪೋರ್ಟ್‌ನ್ನು ವಕೀಲ ವಿನೋದ್ ಪ್ರಶ್ನಿಸಿದ್ದರು. ಸುಮಾರು 2 ತಿಂಗಳ ಹಿಂದೆ ಹೈಕೋರ್ಟ್, ಈಶ್ವರಪ್ಪ ವಿರುದ್ಧ ಪ್ರಕರಣವನ್ನು ಮತ್ತೆ ದಾಖಲಿಸಿ, ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ನಿರ್ದೇಶನ ನೀಡಿತು. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಲೋಕಾಯುಕ್ತ ನ್ಯಾಯಾಲಯದಲ್ಲಿ FIR ದಾಖಲಿಸಲಾಗಿದೆ.

ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಅವರ ಪುತ್ರ ಕಾಂತೇಶ್ ಮತ್ತು ಸೊಸೆ ಶಾಲಿನಿ ಅವರ ವಿರುದ್ಧ FIR ದಾಖಲಾಗಿದ್ದು, ಜುಲೈ 4ರಂದು ಪ್ರಕರಣಕ್ಕೆ ಸಂಬಂಧಪಟ್ಟ ದಾಖಲೆಗಳೊಂದಿಗೆ ಹಾಜರಾಗುವಂತೆ ಲೋಕಾಯುಕ್ತ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ.

ಇದನ್ನೂ ಓದಿ : MLC ರವಿಕುಮಾರ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ IAS ಅಧಿಕಾರಿಗಳ ಸಂಘ ಸಿಎಂಗೆ ಮನವಿ!

Btv Kannada
Author: Btv Kannada

Read More