‘ಸಂಜು ವೆಡ್ಸ್ ಗೀತಾ -2’ 25ರ ಸಂಭ್ರಮದಲ್ಲಿ ರಿಯಲ್ ಸ್ಟಾರ್ ಉಪೇಂದ್ರ!

ತಮ್ಮ ಚಿತ್ರವನ್ನು ತನ್ನ ಮಗುವಿನಂತೆ ಪೋಷಿಸಿ ಅದರ ಗೆಲುವಿಗೆ ಕಾರಣರಾದವರು ಸಂಜು ವೆಡ್ಸ್ ಗೀತಾ -2 ಚಿತ್ರದ ನಿರ್ಮಾಪಕ ಛಲವಾದಿ‌ ಕುಮಾರ್ ಹಾಗೂ ನಿರ್ದೇಶಕ ನಾಗಶೇಖರ್. ಬಿಡುಗಡೆ ಸಮಯದಲ್ಲೇ ಹಲವಾರು ಅಡೆ ತಡೆಗಳನ್ನು ಎದುರಿಸಿದ ಸಂಜು ವೆಡ್ಸ್ ಗೀತಾ -2 ಚಿತ್ರ ನಂತರ  ತರಾತುರಿಯಲ್ಲಿ ರಿಲೀಸಾಯಿತು.

ಹಾಡು, ಕ್ಯಾಮೆರಾ ವರ್ಕ್ ಎಲ್ಲಾ  ಅದ್ಭುತವಾಗಿ ಮೂಡಿಬಂದಿದ್ದರೂ, ಚಿತ್ರದಲ್ಲಿ ಏನೋ ಕೊರತೆಯಿದೆ ಅಂತ ನಿರ್ದೇಶಕರಿಗೆ ಅನಿಸಿದ ತಕ್ಷಣ, ಎರಡೇ ದಿನಕ್ಕೆ ಥಿಯೇಟರ್​ಗಳಿಂದ ಸಿನಿಮಾನ ಹಿಂಪಡೆದು, ಹೊಸದಾಗಿ 21 ನಿಮಿಷಗಳ ಮನಮಿಡಿಯುವ ಸನ್ನಿವೇಶಗಳನ್ನು ಸೇರಿಸಿ, ಜೂನ್ 6ರಂದು  ಚಿತ್ರವನ್ನು ರೀರಿಲೀಸ್ ಮಾಡಲಾಗಿತ್ತು. ಚಿತ್ರ‌ ನೋಡಿದ ಪ್ರೇಕ್ಷಕರು, ಅಲ್ಲದೆ ಡಾ.ಶಿವರಾಜ್ ಕುಮಾರ್, ನಿರ್ದೇಶಕರಾದ ಆರ್.ಚಂದ್ರು, ನಾಗತಿಹಳ್ಳಿ ಚಂದ್ರಶೇಖರ್, ಕೆಎಂ.ಚೈತನ್ಯ, ಸುನಿ, ದಯಾಳ್, ಎಸ್.ಮಹೇಂದರ್ ಸೇರಿದಂತೆ ಹಲವಾರು ಸೆಲಬ್ರಟಿಗಳು ಚಿತ್ರನೋಡಿ ಮೆಚ್ಚಿಕೊಂಡಿದ್ದರು.

ಬಹುಶಃ ಯಾವ ನಿರ್ಮಾಪಕರೂ ಇಂಥ ಧೈರ್ಯ ಮಾಡಲಾರರು. ಇದೀಗ ಸಂಜು ವೆಡ್ಸ್ ಗೀತಾ -2 ಚಿತ್ರ 25 ದಿನಗಳ ಯಶಸ್ವೀ ಪ್ರದರ್ಶನವನ್ನು ಪೂರೈಸಿದೆ. ಅದರ ಸೆಲಬ್ರೇಶನ್ ಕಾರ್ಯಕ್ರಮವನ್ನು ಬುಧವಾರ ಸಂಜೆ ಹೈಡ್ ಪಾರ್ಕ್ ಹೋಟೆಲ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಆ ಸಂಭ್ರಮದ ವೇದಿಕೆಯಲ್ಲಿ ನಟ, ನಿರ್ದೇಶಕ ಉಪೇಂದ್ರ ಅವರು ಪಾಲ್ಗೊಂಡು ಯಶಸ್ಸಿಗೆ ಕಾರಣರಾದ ಇಡೀ ಸಂಜು ವೆಡ್ಸ್ ಗೀತಾ -2 ಚಿತ್ರತಂಡಕ್ಕೆ ಸ್ಮರಣ ಫಲಕಗಳನ್ನು ವಿತರಿಸಿದರು.

ನಂತರ ಉಪೇಂದ್ರ ಅವರು, ನಾನು ಇಲ್ಲಿಗೆ ಬಂದಿರೋದೇ ಇಂಥ ನಿರ್ಮಾಪಕರಿಗೆ ಪ್ರೋತ್ಸಾಹ ಕೊಡೋಕೆ. ನಾವೆಲ್ಲ ಇವರ ಧೈರ್ಯವನ್ನು ಮೆಚ್ಚಲೇಬೇಕು ಎಂದು ಕೊಂಡಾಡಿದರು. ಇನ್ನೊಂದು ಬಾರಿ ಸಿನಿಮಾ ತೋರಿಸಿ ಹಿಟ್ ಮಾಡಲು ಗಟ್ಟಿ ಗುಂಡಿಗೆ ಇರಬೇಕು. ಹಿಂದೆಲ್ಲಾ ಒಂದು ಸಿನಿಮಾ 3 ಥೇಟರುಗಳಲ್ಲಿ 100 ದಿನ ಓಡಿ ದಾಖಲೆ ಮಾಡುತ್ತಿತ್ತು. ಆದರೆ ಈಗ  100 ಸಿನಿಮಾ ಮಂದಿರಗಳಲ್ಲಿ ಮೂರು ದಿನ ಓಡಿದರೆ ಆ ನಿರ್ಮಾಪಕ ಗೆದ್ದಂತೆ. ಹಾಗಾಗಿ 25 ದಿನ ದೊಡ್ಡ ದಾಖಲೆಯೇ ಎಂದು ನಿರ್ಮಾಪಕ‌ ಕುಮಾರ್ ಅವರನ್ನು ಮೆಚ್ಚಿಕೊಂಡರು.

ಚಲನಚಿತ್ರ ಅಕಾಡೆಮಿ ಅಧ್ಯಕ್ಷ ನಟ ಸಾಧು ಕೋಕಿಲ ಅವರು, ನಾಗಶೇಖರ್ ಉಪೇಂದ್ರ ಇಬ್ಬರೂ ಸಿನಿಮಾ ಲವರ್ಸ್, ಸಿನಿಮಾ ಎಂದ ಮೇಲೆ ಏಳು ಬೀಳುಗಳು, ಹೊಗಳಿಕೆ, ತೆಗಳಿಕೆ ಇದ್ದದ್ದೇ. ಚಿತ್ರರಂಗ ಕುಗ್ಗುತ್ತಾ ಇರುವ ಸಂದರ್ಭದಲ್ಲಿ ಇಂಥ ಸಿನಿಮಾಗಳು ಬರಬೇಕು ಎಂದು ಹೇಳಿದರು.

ನಂತರ ನಿರ್ಮಾಪಕ ಛಲವಾದಿ ಕುಮಾರ್ ಅವರು, ಮುಂದಿನ ದಿನಗಳಲ್ಲಿ ಇನ್ನೂ ಒಳ್ಳೊಳ್ಳೆ ಸಿನಿಮಾಗಳನ್ನು ಮಾಡಬೇಕು ಎಂಬ ಯೋಜನೆ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು. ಛಾಯಾಗ್ರಾಹಕ ಸತ್ಯ ಹೆಗಡೆ‌ ಮಾತನಾಡಿ ಈ ಸಕ್ಸಸ್ ನಿಜವಾಗಿಯೂ ನಮ್ಮ ನಿರ್ಮಾಪಕ ಛಲವಾದಿ ಕುಮಾರ್ ಹಾಗೂ ನಿರ್ದೇಶಕ  ಹಠವಾದಿ ನಾಗಶೇಖರ್ ಅವರಿಗೆ ಸಲ್ಲಬೇಕು ಎಂದರು.

ಸಂಗೀತ ನಿರ್ದೇಶಕ ಶ್ರೀಧರ್ ವಿ.ಸಂಭ್ರಮ್, ಪ್ರಚಾರಕರ್ತ ನಾಗೇಂದ್ರ, ನಾಯಕನಟ ಶ್ರೀನಗರ ಕಿಟ್ಟಿ, ಸಾಹಿತಿ ಕವಿರಾಜ್, ಸಂಭಾಷಣೆಗಾರ ಡಿಕೆ ಚಕ್ರವರ್ತಿ ಇವರೆಲ್ಲ ಸ್ಮರಣಫಲಕ ಸ್ವೀಕರಿಸಿ ನಿರ್ಮಾಪಕ, ನಿರ್ದೇಶಕರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.

ಪೊಲೀಸ್ ಅಧಿಕಾರಿಗಳಾದ ಎಜಿಡಿಪಿ ಅರುಣ್ ಚಕ್ರವರ್ತಿ, ಎಸಿಪಿ ಪೂರ್ಣಚಂದ್ರ ತೇಜಸ್ವಿ ಹಾಗೂ  ಜಯರಾಜ್, ಪೊಲೀಸ್ ಇನ್ ಸ್ಪೆಕ್ಟರ್ ಅರುಣ್ ಅಲ್ಲದೆ  ಫಾರೆಸ್ಟ್ ಆಫೀಸರ್ ಡಾ.ರಾಜು, ಚಂದ್ರಶೇಖರ್,ಎಕ್ಸಿಕ್ಯೂಟಿವ್ ಡೈರೆಕ್ಟರ್ (ಎಜುಕೇಶನ್)  ಸೇರಿದಂತೆ ವಿವಿಧ ಕ್ಷೇತ್ರಗಳ ಹಲವಾರು ಗಣ್ಯರು ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸಿನಿಮಾ ಬಗ್ಗೆ ಮಾತನಾಡಿದರು. ಆನಂದ್ ಆಡಿಯೋ ಶ್ಯಾಮ್, ಸಾಹಸ ನಿರ್ದೇಶಕ ಡಿಫರೆಂಟ್ ಡ್ಯಾನಿ, ಡಿಜಿಟಲ್ ಶ್ರೀನಾಥ್ ಹಾಗೂ ಇಡೀ ಚಿತ್ರತಂಡಕ್ಕೆ ಸ್ಮರಣ ಫಲಕ ವಿತರಿಸಲಾಯಿತು.

ಇದನ್ನೂ ಓದಿ : ಸಿಎಂ ಸಿದ್ದು, ಗೃಹ ಸಚಿವ ಪರಂ ಸಂಧಾನ ಸಕ್ಸಸ್ – ಕರ್ತವ್ಯಕ್ಕೆ ಮರಳಿದ ASP ನಾರಾಯಣ ಭರಮಣಿ!

Btv Kannada
Author: Btv Kannada

Read More