ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಹೇಶ್ ಜೋಷಿ ಕನ್ನಡ ನಾಡು, ನುಡಿ ಹೆಸರಲ್ಲಿ ಕೋಟಿ ಕೋಟಿ ದೋಚಿರುವ ಆರೋಪ ಕೇಳಿಬಂದಿದೆ. ಮಂಡ್ಯದಲ್ಲಿ ನಡೆದಿದ್ದ 87 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೋಟಿ ಕೋಟಿ ಅವ್ಯವಹಾರ ನಡೆದಿದ್ದು, ಕಸಾಪ ಅಧ್ಯಕ್ಷ ಮಹೇಶ್ ಜೋಷಿಯ ಅಕ್ರಮಗಳ ಕಡತವನ್ನು ಬಿಟಿವಿ ಬಯಲು ಮಾಡಿದೆ.

ಸಾಹಿತ್ಯ ಸಮ್ಮೇಳನದ ಹಣ ದುರುಪಯೋಗ ವಿಚಾರಣೆಗೆ ಅಧಿಕಾರಿಯನ್ನು ನೇಮಕ ಮಾಡಿದ್ದು, ಸಹಕಾರ ಇಲಾಖೆ ಡಾ ಮಹೇಶ್ ಜೋಷಿ ವಿರುದ್ಧದ ವಿಚಾರಣೆಗೆ ಆದೇಶ ನೀಡಿದೆ. ಡಾ ಮಹೇಶ್ ಜೋಷಿ ಸಮ್ಮೇಳನದ ಹೆಸರಲ್ಲಿ 30 ಕೋಟಿ ರೂ. ನುಂಗಿ ನೀರು ಕುಡಿದಿದ್ದು, ಸಾಹಿತ್ಯ ಸಮ್ಮೇಳನದ ಗುತ್ತಿಗೆ ಕಂಪನಿ ಮುಖ್ಯಸ್ಥರಿಗೂ ಇದೀಗ ಜೈಲೂಟ ಕಾದಿದೆ.
ಮಂಡ್ಯ 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕಸಾಪ 30 ಕೋಟಿ ಅನುದಾನ ಪಡೆದಿದ್ದರು. ಈ 30 ಕೋಟಿ ಅನುದಾನದಲ್ಲಿ ಮಹೇಶ್ ಜೋಷಿ ಕೋಟಿ ಕೋಟಿ ಕಮಿಷನ್ ಹೊಡೆದಿದ್ದಾರೆ. ಇವೆಂಟ್ ಮ್ಯಾನೇಜ್ಮೆಂಟ್ ಮೂಲಕವೇ ಸಾಹಿತಿ, ಕಲಾ ತಂಡಗಳ ಗೌರವಧನ ವಿತರಣೆಯಾಗಿದ್ದು, ಇವೆಂಟ್ ಮ್ಯಾನೇಜ್ಮೆಂಟ್ ಕಲಾ ತಂಡಗಳ ಒಂದು ದಿನದ ಗೌರವ ಧನವೇ 1.50 ಕೋಟಿ ರೂಗಳ ಬಿಲ್ ಮಾಡಿದೆ.

ಸ್ಕೈ ಬ್ಲೂ ಇವೆಂಟ್ ಸಂಸ್ಥೆ ಪ್ಲಾಸ್ಟಿಕ್ ಆನೆಗೆ 1.50 ಲಕ್ಷ ರೂ, ಪೊರಕೆಗೆ 25 ಸಾವಿರ, ತೆಂಗಿನ ಗರಿಗೆ 20 ಸಾವಿರ, ಅತಿಥಿಗಳಿಗೆ ಪೆನ್ನು, ಪ್ಯಾಡ್ಗಳಿಗೆಂದೇ ಕೋಟಿ ಕೋಟಿ ಬಿಲ್ ಹಾಕಿದೆ. ಡಾ ಮಹೇಶ್ ಜೋಷಿ ಸ್ಕೈ ಬ್ಲೂ ಇವೆಂಟ್ ಮ್ಯಾನೇಜ್ಮೆಂಟ್ ಮೂಲಕ ಕಮಿಷನ್ ಗಿಟ್ಟಿಸಿಕೊಂಡಿದ್ದಾರೆ. ಮಹೇಶ್ ಜೋಷಿ ಸಾಹಿತ್ಯ ಸಮ್ಮೇಳನದ ಹೆಸರಲ್ಲಿ ಜನರ ತೆರಿಗೆ ದುಡ್ಡನ್ನು ಲೂಟಿ ಹೊಡೆದಿದ್ದು, ಸಾಹಿತ್ಯ ಪರಿಷತ್ ಹಣದಲ್ಲಿ ಕುಟುಂಬದ ಕಾರ್ಯಕ್ರಮ ಮಾಡಿದ್ದಾರೆ.
ಕಸಾಪ ಅಧ್ಯಕ್ಷ ಮಂಡ್ಯ 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 25 ಕೋಟಿ ಅನುದಾನ ಸಾಲಲ್ಲ, ಇನ್ನೂ ಐದು ಕೋಟಿ ಕೊಡಿ ಎಂದು ಕೇಳಿದ್ದರು. ಈ ಬಾರಿಯ ಬಳ್ಳಾರಿ 88 ನೇ ಸಾಹಿತ್ಯ ಸಮ್ಮೇಳನಕ್ಕೆ ಮಹೇಶ್ ಜೋಷಿ 40 ಕೋಟಿ ಬೇಡಿಕೆ ಇಟ್ಟಿದ್ದಾರೆ. ಸಾಹಿತಿಗಳು, ಹೋರಾಟಗಾರರ ದೂರಿನ ಹಿನ್ನಲೆಯಲ್ಲಿ ಸರ್ಕಾರ ಜೋಷಿ ವಿರುದ್ಧ ತನಿಖೆಗೆ ಆದೇಶಿಸಿದೆ.
45 ದಿನದೊಳಗೆ ಕಸಾಪ ಅಧ್ಯಕ್ಷ ಮಹೇಶ್ ಜೋಷಿ ಅಕ್ರಮಗಳ ಬಗ್ಗೆ ವರದಿ ನೀಡುವಂತೆ ಸರ್ಕಾರ ಆದೇಶ ನೀಡಿದ್ದು, ಕಸಾಪ ಅಕ್ರಮಗಳ ತನಿಖೆಗೆ ವಿಚಾರಣಾಧಿಕಾರಿಯಾಗಿ ಸಹಕಾರ ಇಲಾಖೆಯ ಅಧಿಕಾರಿ ಪಿ ಶಶಿಧರ್ ಅವರನ್ನು ನೇಮಕ ಮಾಡಲಾಗಿದೆ.
ಇದನ್ನೂ ಓದಿ : ಆಸ್ತಿ ತೆರಿಗೆ ನಕಲಿ ಸರ್ಟಿಫಿಕೇಟ್ ಹೆಸರಲ್ಲಿ ಕೋಟಿ ಕೋಟಿ ಲೂಟಿ – ಬೆಚ್ಚಿ ಬಿದ್ದ ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು!







