CAT ಆದೇಶಕ್ಕೆ ಹೈಕೋರ್ಟ್ ತಡೆ.. IPS ವಿಕಾಸ್ ಕುಮಾರ್ ನೇಮಕಾತಿಗೆ ಒತ್ತಾಯಿಸುವಂತಿಲ್ಲ!

ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ್ದ ಕಾಲ್ತುಳಿತ ಪ್ರಕರಣದ ಸಂಬಂಧ ಕರ್ತವ್ಯ ಲೋಪದ ಆರೋಪದ ಮೇಲೆ ಅಮಾನತುಗೊಂಡಿದ್ದ ಐಪಿಎಸ್‌ ಅಧಿಕಾರಿ ವಿಕಾಸ್‌ ಕುಮಾರ್‌ ವಿಕಾಸ್‌ ಅವರು ಹಾಲಿ ಪ್ರಕರಣವನ್ನು ಅಂತಿಮವಾಗಿ ವಿಲೇವಾರಿ ಮಾಡುವವರೆಗೆ ಕೇಂದ್ರೀಯ ಆಡಳಿತಾತ್ಮಕ ನ್ಯಾಯ ಮಂಡಳಿಯ ಆದೇಶ ಜಾರಿಗೆ ಒತ್ತಾಯ ಮಾಡಬಾರದು ಎಂದು ಮೌಖಿಕವಾಗಿ ಕರ್ನಾಟಕ ಹೈಕೋರ್ಟ್‌ ನಿರ್ದೇಶಿಸಿದೆ.

ವಿಕಾಸ್‌ ಕುಮಾರ್‌ ಪರವಾಗಿ ಸಿಎಟಿ ಮಾಡಿರುವ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎಸ್‌ ಜಿ ಪಂಡಿತ್‌ ಮತ್ತು ಟಿ ಎಂ. ನದಾಫ್‌ ಅವರ ವಿಭಾಗೀಯ ಪೀಠ ಇಂದು ವಿಚಾರಣೆ ನಡೆಸಿತು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್‌ ಜನರಲ್‌ ಕೆ. ಶಶಿಕಿರಣ್‌ ಶೆಟ್ಟಿ ಅವರು ‘ರಾಜ್ಯ ಸರ್ಕಾರವು ವಿಕಾಸ್‌ ಸೇರಿ ಐವರು ಪೊಲೀಸರನ್ನು ಜೂನ್‌ 5ರಂದು ಅಮಾನತುಗೊಳಿಸಿತ್ತು. ಆಗ ಪೀಠವು “ಅಧಿಕಾರಿಗಳನ್ನು ಬೇರೆ ಹುದ್ದೆಗೆ ವರ್ಗಾಯಿಸಿದರೆ ಸಾಕೆ ಅಥವಾ ಅಮಾನತಿನಲ್ಲಿಡುವುದು ಸರಿಯೇ ಎಂಬುದನ್ನು ಸರ್ಕಾರ ಸಮರ್ಥಿಸಬೇಕು” ಎಂದಿತು.

ಇದಕ್ಕೆ ಎಜಿ ಅವರು “ಅಧಿಕಾರಿಗಳ ಅಮಾನತನ್ನು ಸಮರ್ಥಿಸಿ ದಾಖಲೆಗಳನ್ನು ಸಲ್ಲಿಸುತ್ತೇನೆ. ಹೀಗಾಗಿ, ಸಿಎಟಿ ಆದೇಶಕ್ಕೆ ತಡೆ ನೀಡಬೇಕು” ಎಂದರು. ಈ ಮಧ್ಯೆ, ವಿಕಾಸ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಧ್ಯಾನ್‌ ಚಿನ್ನಪ್ಪ ಅವರು “ನಾವು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸುವುದಿಲ್ಲ” ಎಂದರು. ಇದಕ್ಕೆ ಪೀಠವು “ಅಮಾನತು ಆದೇಶ ವಜಾ ಆಗಿದೆ. ನಿಮ್ಮನ್ನು ಪುನಾ ಸೇವೆ ನಿಯೋಜಿಸಿ ಸರ್ಕಾರ ಆದೇಶ ಮಾಡಬೇಕು. ಅರ್ಜಿಯನ್ನು ಅಂತಿಮ ವಿಲೇವಾರಿಗೆ ತೆಗೆದುಕೊಳ್ಳುವವರೆಗೆ ಒತ್ತಾಯ ಮಾಡಬಾರದು” ಎಂದರು.

ಆಗ ಎಜಿ ಅವರು “ವಿಕಾಸ್‌ ಅವರು ಒತ್ತಾಯ ಮಾಡುವುದಿಲ್ಲ ಎಂಬುದನ್ನು ಪರಿಗಣಿಸಿ ಅರ್ಜಿಯ ವಿಚಾರಣೆಯನ್ನು ಶುಕ್ರವಾರ ನಡೆಸಬೇಕು” ಎಂದರು. ಇದಕ್ಕೆ ಪೀಠವು “ಧ್ಯಾನ್‌ ಚಿನ್ನಪ್ಪ ಹೇಳಿಕೆ ನೀಡಿದ್ದಾರೆ” ಎಂದಿತು. ಇದಕ್ಕೆ ಧ್ವನಿಗೂಡಿಸಿದ ಧ್ಯಾನ್‌ ಅವರು “ನಾವು ಏನನ್ನೂ ಮಾಡುವುದಿಲ್ಲ” ಎಂದರು. ಅಂತಿಮವಾಗಿ ಪೀಠವು ಅರ್ಜಿಯ ವಿಚಾರಣೆಯನ್ನು ಜುಲೈ 9ಕ್ಕೆ ಮುಂದೂಡಿತು.

ಇದನ್ನೂ ಓದಿ : ಪ್ರಯಾಣಿಕರಿಂದ ದುಪ್ಪಟ್ಟು ದರ ವಸೂಲಿ – ನಗರದಲ್ಲಿ ಮತ್ತೆ 36 ಆಟೋಗಳು ಸೀಜ್​​.. 163 ಪ್ರಕರಣ ದಾಖಲು!

 

Btv Kannada
Author: Btv Kannada

Read More