ಸಿಎಂ ಸಿದ್ದು ಅವಮಾನಕ್ಕೆ ಬೇಸತ್ತು ASP ಬರಮನಿ ಸ್ವಯಂ ನಿವೃತ್ತಿ.. ಗೃಹ ಇಲಾಖೆಗೆ ಬರೆದ ಪತ್ರದಲ್ಲಿ ಹೇಳಿದ್ದೇನು?

ಬೆಂಗಳೂರು : ಬೆಳಗಾವಿಯಲ್ಲಿ ಇತ್ತೀಚೆಗೆ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿರುವ ವಿಚಾರಕ್ಕೆ ಸಿಟ್ಟಿಗೆದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ವೇದಿಕೆಯಲ್ಲೇ ಅಪಮಾನಕ್ಕೀಡಾದ ಧಾರವಾಡದ ಹೆಚ್ಚುವರಿ ಪೊಲೀಸ್ ಅಧೀಕ್ಷಕ (ಎಎಸ್‌ಪಿ) ನಾರಾಯಣ ಬರಮನಿ ಅವರು ಸ್ವಯಂ ನಿವೃತ್ತಿಗೆ ಮುಂದಾಗಿದ್ದು, ಈಗಾಗಲೇ ಈ ಕುರಿತು ಇಲಾಖೆಗೆ 3 ಪುಟಗಳ ರಾಜೀನಾಮೆ ಪತ್ರ ಕೂಡ ಬರೆದಿದ್ದಾರೆ. ಈ ಪತ್ರ ಇದೀಗ ಬಿಟಿವಿಗೆ ಲಭ್ಯವಾಗಿದೆ.

ನಾರಾಯಣ ಬರಮನಿ ಅವರು ವಿಆರ್‌ಎಸ್ ಕೋರಿ ಬರೆದಿರುವ ಪತ್ರದಿಂದ ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ಬರುವ ಸಾಧ್ಯತೆ ಇರುವುದರಿಂದ ಅದನ್ನು ತಡೆ ಹಿಡಿಯುವ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳು ಅವರ ಮನವೊಲಿಕೆಗೆ ಯತ್ನಿಸುತ್ತಿದ್ದಾರೆ. ಎನ್.ವಿ.ಬರಮನಿ ಅವರು ತಮ್ಮ ವಿಆರ್‌ಎಸ್ ಪತ್ರದಲ್ಲಿ ತಮಗಾದ ಅವಮಾನ ಬಗ್ಗೆ ಹೇಳಿಕೊಂಡಿದ್ದಾರೆ. ಆದರೆ ಹಿರಿಯ ಪೊಲೀಸ್ ಅಧಿಕಾರಿಗಳು ಮಾತ್ರ ಮುಖ್ಯಮಂತ್ರಿ ಮತ್ತು ಗೃಹ ಸಚಿವರ ಸಮ್ಮುಖದಲ್ಲೇ ಅವರಿಗೆ ಸ್ವಯಂ ನಿವೃತ್ತಿ ಪತ್ರ ಹಿಂಪಡೆಯುವಂತೆ ಮನವೊಲಿಕೆಗೆ ಕಸರತ್ತು ನಡೆಸಿದ್ದಾರೆ. ಸಿಎಂ, ಗೃಹ ಸಚಿವರು ಈ ವಿಷಯವಾಗಿ ಬರಮನಿ ಅವರ ಜತೆ ಮಾತುಕತೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ASP ನಾರಾಯಣ ಬರಮನಿ ಅವರು ಬರೆದಿರುವ ಪತ್ರದಲ್ಲೇನಿದೆ? ಮಾನ್ಯ ಮುಖ್ಯಮಂತ್ರಿಗಳಿಂದಾದ ಅವಮಾನದಿಂದ ಮನನೊಂದು ನಾನು ಸ್ವಯಂ ನಿವೃತ್ತಿ ಸಲ್ಲಿಸುತ್ತಿದ್ದೇನೆ. ಸಮವಸ್ತ್ರದಲ್ಲಿದ್ದ ನನಗೆ ಸಾರ್ವಜನಿಕವಾಗಿ ಅವಮಾನಿಸಿ ನನ್ನ ಮತ್ತು ನನ್ನ ಇಲಾಖೆಯ ಅಧಿಕಾರಿಗಳ ಆತ್ಮಸ್ಥೆರ್ಯ ಕುಗ್ಗಿಸಿದ ಮಾನ್ಯ ಮುಖ್ಯಮಂತ್ರಿಗಳ ವರ್ತನೆಯನ್ನು ಇಡೀ ರಾಜ್ಯದಲ್ಲಿ ದೃಶ್ಯಮಾದ್ಯಮಗಳ ಮೂಲಕ ಭಿತ್ತರಿಸಲಾಗಿತ್ತು. ಈ ಘಟನೆಯಿಂದ ಮನಸ್ಸಿಗೆ ಆಘಾತವಾಗಿದೆ.

ಇಷ್ಟಾದರೂ, ಮಾನ್ಯ ಮುಖ್ಯಮಂತ್ರಿಗಳಾಗಲಿ ಅಥವಾ ಅವರ ಪರವಾಗಿ ಸರ್ಕಾರ ಮಟ್ಟದ ಅಧಿಕಾರಿಗಳಾಗಲಿ ಅಥವಾ ನಮ್ಮ ಇಲಾಖೆಯ ನೆಚ್ಚಿನ ಹಿರಿಯ ಅಧಿಕಾರಿಗಳಾಗಲಿ ನನ್ನನ್ನು ಸಾಂತ್ವಾನಿಸುವ ಪ್ರಯತ್ನ ಮಾಡಲಿಲ್ಲ. ಅಲ್ಲದೇ ನನ್ನ ಸಹೋದ್ಯೋಗಿಗಳು ಕೂಡ ನನಗಾದ ಅವಮಾನವನ್ನು ಪ್ರತಿಭಟಿಸಿ ನೈತಿಕ ಬೆಂಬಲ ವ್ಯಕ್ತಪಡಿಸಲೂ ಇಲ್ಲಾ. ಇದರಿಂದಾಗಿ ಮತ್ತಷ್ಟು ಮಾನಸಿಕ ವೇದನೆ ಹೆಚ್ಚಾಗಿದೆ.

ನನ್ನಷ್ಟಕ್ಕೆ ನಾನು ಧೈರ್ಯ ತುಂಬಿಕೊಂಡು ಇದರಿಂದ ಹೊರಬರಲು ಕರ್ತವ್ಯಕ್ಕೆ ಹಾಜರಾಗಿದ್ದೆ. ಇಲ್ಲಿ ಸಮಸ್ಯೆಗಳನ್ನು ಹೇಳಿಕೊಂಡು ಬರುವ ನೊಂದ ಜನರೂ ಕೂಡ “ಸಾರ್ ತಮ್ಮಂತೋರಿಗೆ ಹೀಗಾದ್ರೆ ನಮ್ಮಂತ ಜನ ಸಾಮಾನ್ಯರ ಸ್ಥಿತಿ ಏನು” ಸಾರ್ ಅಂತಾ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದರು. ಇದು ಇಷ್ಟಕ್ಕೆ ನಿಲ್ಲದೇ ಇಲಾಖೆಯ ಸಭೆಗಳಲ್ಲಿ, ಬೇರೆ ಇಲಾಖೆಯೊಂದಿಗಿನ ಸಭೆಗಳಲ್ಲಿಯೂ ಇದು ಮಾರ್ಧನಿಸುತ್ತಿತ್ತು.

ಪ್ರತಿ ನಿತ್ಯ ಸಮವಸ್ತ್ರ ಧರಿಸುವಾಗ ಯಾರದೋ ತಪ್ಪಿಗೆ ನನ್ನನ್ನು ದಂಡಿಸಿದರಲ್ಲಾ ಎಂದು ಆ ಘಟನೆ ನನ್ನನ್ನು ಸದಾ ಕಾಡುತ್ತಿದೆ. ಒಂದು ರಾಜ್ಯದ ಮುಖ್ಯಮಂತ್ರಿ ನನ್ನನ್ನು ಸಾರ್ವಜನಿಕವಾಗಿ ನಿಂದಿಸಿ. ಅವಮಾನಿಸಿ ಸಾಂತ್ವಾನಿಸದೆ ಇದ್ದುದ್ದು ನನ್ನನ್ನು ವಿಚಲಿತಗೊಳಿಸಿದೆ. ನನ್ನಷ್ಟಕ್ಕೆ ನಾನು ನ್ಯಾಯ ಪಡೆದುಕೊಳ್ಳಲು ಆಗದವನು ಪರರಿಗೆ ನ್ಯಾಯ ಕೊಡಿಸಲಾದೀತೇ? ಎಂಬ ಕೊರಗು ನನ್ನಲ್ಲಿ ಕಾಡತೊಡಗಿದೆ.

ಕಳೆದ 31 ವರ್ಷಗಳಿಂದ ರಾಜ್ಯ ಪೊಲೀಸ್ ಇಲಾಖೆಯಲ್ಲಿ ವಿವಿಧ ಸ್ಥರಗಳಲ್ಲಿ ಶಿಸ್ತಿನ ಸಿಪಾಯಿಯಾಗಿ, ನೊಂದು ಬರುವ ಸಾರ್ವಜನಿಕರ ಅಹವಾಲುಗಳಿಗೆ ಅಂತಕರಣದಿಂದ ಸ್ಪಂದಿಸಿ ಅವರ ಗೌರವಕ್ಕೆ ಪಾತ್ರನಾಗಿ ಇಲಾಖೆಯಲ್ಲಿ ಹೆಮ್ಮೆಯಿಂದ ಕರ್ತವ್ಯ ನಿರ್ವಹಿಸಿರುತ್ತೇನೆ. ಇಲಾಖೆ ಹಾಗೂ ಸಮಾಜದಲ್ಲಿ ಗೌರವ ಮಾನ ಸನ್ಮಾನ ನೀಡಿದ ಸಮವಸ್ತ್ರದೊಂದಿಗಿನ ಸಂಬಂಧ ನನ್ನ ಹೆತ್ತ ತಾಯಿಯೊಂದಿಗಿರುವಷ್ಟೇ ಭಾವನಾತ್ಮಕ ಸಂಬಂಧ ಹೊಂದಿದ್ದೇನೆ.

ಸರ್ಕಾರವನ್ನು ಪ್ರತಿನಿಧಿಸುವ ಸರ್ಕಾರಿ ನೌಕರರಿಗೆ ಪ್ರತಿ ಹಂತದಲ್ಲೂ ಸವಾಲುಗಳ ಸಾಲೇ ಇರುತ್ತವೆ. ತನ್ನೆಲ್ಲಾ ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗಿಟ್ಟು, ಅವಮಾನಗಳನ್ನು ಸಹಿಸುತ್ತಾ, ಸರ್ಕಾರದ ಹಿತಾಸಕ್ತಿಗೆ ಟೊಂಕಕಟ್ಟಿ ನಿಂತು ಸೇವೆ ಸಲ್ಲಿಸುತ್ತಿರುವ ಎಲ್ಲಾ ಸರ್ಕಾರಿ ನೌಕರರಿಗೆ ಆತ್ಮಸ್ಥೆರ್ಯವನ್ನು ತುಂಬಬೇಕಾದ ಮಾನ್ಯ ಮುಖ್ಯ ಮಂತ್ರಿಗಳು ತಮ್ಮ ವರ್ತನೆಯಿಂದ ನನ್ನ ಮತ್ತು ರಾಜ್ಯದ ಇತರ ಸರ್ಕಾರಿ ನೌಕರರ ಆತ್ಮಸ್ಥೆರ್ಯ ಕುಂದಿಸಿರುತ್ತಾರೆ. ಈ ಘಟನೆಯಿಂದಾಗಿ ನಾನು ಮತ್ತು ನನ್ನ ಪರಿವಾರ ಇನ್ನಿಲ್ಲದಂತೆ ಮಾನಸಿಕವಾಗಿ ಕುಗ್ಗಿ. ಮನೋವೇದನೆಯಿಂದ. ಮನೋವ್ಯಾಕುಲತೆಗೆ ಒಳಗಾಗಿದ್ದೇವೆ. ಇದು ನನ್ನೊಬ್ಬನ ಅಳಲಲ್ಲಾ. ರಾಜ್ಯದ ಸಮವಸ್ತ್ರ ಧರಿಸುವ ಕೆಳಸ್ಥರದ ಅಧಿಕಾರಿ ಸಿಬ್ಬಂದಿಗಳಷ್ಟೇ ಅಲ್ಲ, ಸಮಸ್ತ ಸರ್ಕಾರಿ ನೌಕರರ ಅಳಲು.

ಸಾರ್ವಜನಿಕ ವೇದಿಕೆಯ ಮೇಲೆ ಮಾನ್ಯ ಮುಖ್ಯ ಮಂತ್ರಿಗಳ ವರ್ತನೆಯಿಂದ ನಾನು ಮಾಡದೇ ಇರುವ ತಪ್ಪಿಗೆ ಸಾರ್ವಜನಿಕವಾಗಿ ನಿಂದನೆಗೆ ಒಳಗಾಗಿ, ಅವಮಾನಗೊಂಡ ನನಗೆ ಅನ್ಯ ಮಾರ್ಗವಿಲ್ಲದೇ ಸ್ವಯಂ ನಿವೃತ್ತಿ ಸಲ್ಲಿಸುತ್ತಿದ್ದು ಮಾನ್ಯರು ಇದನ್ನು ಅಂಗೀಕರಿಸಬೇಕೆಂದು ASP ನಾರಾಯಣ ಬರಮನಿ ವಿನಂತಿಸಿದ್ದಾರೆ.

ಇದನ್ನೂ ಓದಿ : ಬೆಂಗಳೂರಲ್ಲಿ ‘ಕಾಫಿ’ ವಿಚಾರಕ್ಕೂ ಮಾರಾಮಾರಿ.. ಎಕ್ಸ್​​​ಟ್ರಾ ಕಾಫಿ ಕಪ್‌ ಕೊಡದಿದ್ದಕ್ಕೆ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಥಳಿಸಿದ ಕಿಡಿಗೇಡಿಗಳು!

Btv Kannada
Author: Btv Kannada

Read More