ಬೆಂಗಳೂರು : ಪಕ್ಷದ ಶಿಸ್ತು ಯಾರೂ ಉಲ್ಲಂಘನೆ ಮಾಡಬಾರದು. ಯಾರೇ ಉಲ್ಲಂಘಿಸಿದ್ರು ನೋಟಿಸ್ ಕೊಡ್ತೀನಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
ರಾಮನಗರ ಶಾಸಕ ಇಕ್ಬಾಲ್ ಹುಸೇನ್‌ಗೆ ನೋಟಿಸ್ ಜಾರಿ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇಕ್ಬಾಲ್ ಹುಸೇನ್‌ಗೂ ನೋಟಿಸ್ ಕೊಡ್ತೀನಿ, ಬೇರೆ ಅವರಿಗೂ ನೋಟಿಸ್ ಕೊಡಬೇಕಾಗುತ್ತದೆ. ಪಕ್ಷದ ಶಿಸ್ತು ಯಾರೂ ಉಲ್ಲಂಘನೆ ಮಾಡಬಾರದು. ಪಕ್ಷದಲ್ಲಿ ಶಿಸ್ತು ಮುಖ್ಯ. ನಾನು ಯಾರಿಗೂ ನನ್ನ ಹೆಸರು ಹೇಳಿ, ಸಿಎಂ ಮಾಡಿ ಅಂತ ಹೇಳಿಲ್ಲ. ಸಿದ್ದರಾಮಯ್ಯ ಇರುವಾಗ ಸಿಎಂ ಸ್ಥಾನಕ್ಕೆ ಬೇರೆ ಹೆಸರು ಏಕೆ? ಯಾರೂ ಅಪಸ್ವರ ಎತ್ತಬಾರದು ಎಂದು ಡಿಸಿಎಂ ಎಚ್ಚರಿಸಿದ್ದಾರೆ.
ಪಕ್ಷಕ್ಕೆ ಎಲ್ಲರೂ ಕಷ್ಟಪಟ್ಟಿದ್ದಾರೆ. ನನ್ನಂತ ನೂರಾರು ಕಾರ್ಯಕರ್ತರು ಕಷ್ಟಪಟ್ಟಿದ್ದಾರೆ. ನಾನು ಒಬ್ಬನೇ ಕಷ್ಟಪಟ್ಟಿದ್ದೀನಾ? ಸಾವಿರಾರು ಜನ, ಲಕ್ಷಾಂತರ ಜನ ಕಷ್ಟಪಟ್ಟಿದ್ದಾರೆ. ಮೊದಲು ನಾವು ಅವರ ಬಗ್ಗೆ ಯೋಚನೆ ಮಾಡಬೇಕು ಎಂದು ಶಿಸ್ತು ಉಲ್ಲಂಘನೆ ಮಾಡುತ್ತಿರುವ ಶಾಸಕರಿಗೆ ಎಚ್ಚರಿಕೆ ಕೊಟ್ಟು ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಸಿದ್ದು ಪರ ಬ್ಯಾಟಿಂಗ್ ಮಾಡಿದ್ದಾರೆ.
ಇದೇ ವೇಳೆ ಶಾಸಕರಿಗೆ ಅಸಮಾಧಾನ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮುಂದಿನ ಚುನಾವಣೆಗೆ ಸಿದ್ಧತೆ ಮಾಡುವ ದೃಷ್ಟಿಯಿಂದ ಸುರ್ಜೇವಾಲಾ ಶಾಸಕರ ಸಭೆ ಮಾಡಿದ್ದಾರೆ. ಶಾಸಕರಿಗೆ ಎಲ್ಲೂ ಅಸಮಾಧಾನ ಇರಲಿಲ್ಲ. ಯಾರಿಗೂ ಅಸಮಾಧಾನ ಇಲ್ಲ. ಶಾಸಕರಿಗೆ ಪಕ್ಷ ಮತ್ತು ಸಂಘಟನೆ ವಿಚಾರದಲ್ಲಿ ಜವಾಬ್ದಾರಿ ನಿಗದಿ ಮಾಡುತ್ತಿದ್ದಾರೆ. ಶಾಸಕರು ಏನು ಮಾಡಬೇಕು? ನಾವೇನು ಮಾಡಬೇಕು? ಚುನಾವಣೆಗೆ ಈಗಿನಿಂದಲೇ ಹೇಗೆ ಸಿದ್ಧತೆ ಮಾಡಬೇಕು ಎಂದು ಸೂಚನೆ ಕೊಟ್ಟಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ : ಎತ್ತಿನಭುಜ ಚಾರಣಕ್ಕೆ ಪ್ರವಾಸಿಗರಿಗೆ ನಿಷೇಧ.. 1 ತಿಂಗಳು ಸಂಪೂರ್ಣ ಬಂದ್!
