ರಕ್ಷಿತ್‌ ಕುಮಾರ್‌ ನಿರ್ದೇಶನದ “ಜಂಗಲ್‌ ಮಂಗಲ್‌” ಚಿತ್ರ ಜು.4ಕ್ಕೆ ರಾಜ್ಯಾದ್ಯಂತ ರಿಲೀಸ್!

ಸ್ಯಾಂಡಲ್‌ವುಡ್‌ನಲ್ಲಿ ಭಿನ್ನ ವಿಭಿನ್ನ ಕಂಟೆಂಟ್​ಗೆ ಬೆಂಬಲ ಸಿಕ್ಕೇ ಸಿಗುತ್ತೆ. ಹಾಗೆ ಖ್ಯಾತನಾಮ ನಿರ್ದೇಶಕರಿಂದ ಮೆಚ್ಚುಗೆ ಪಡೆದ ಚಿತ್ರವೇ “ಜಂಗಲ್‌ ಮಂಗಲ್‌”. ಇನ್ನೇನು ಇದೇ ಜುಲೈ.4ರಂದು ರಾಜ್ಯಾದ್ಯಂತ ಈ ಸಿನಿಮಾ ತೆರೆಗೆ ಬರಲಿದೆ. ಲೈಟ್‌ ಹಾರ್ಟೆಡ್‌ ಥ್ರಿಲ್ಲರ್‌ ಶೈಲಿಯಲ್ಲಿ ಈ “ಜಂಗಲ್‌ ಮಂಗಲ್‌” ಸಿನಿಮಾವನ್ನು ನಿರ್ದೇಶಕ ರಕ್ಷಿತ್‌ ಕುಮಾರ್‌ ಕಟ್ಟಿಕೊಟ್ಟಿದ್ದಾರೆ. ಕಳೆದ ಎಂಟತ್ತು ವರ್ಷಗಳಿಂದ ಸಿನಿಮಾ, ಸೀರಿಯಲ್‌ ಹೀಗೆ ಬಣ್ಣದ ಲೋಕದಲ್ಲಿ ಸಕ್ರಿಯರಾಗಿ ಇದೀಗ ಸ್ವತಂತ್ರ ನಿರ್ದೇಶಕರಾಗಿ ಆಗಮಿಸುತ್ತಿದ್ದಾರೆ.

ನಿರ್ದೇಶಕ ರಕ್ಷಿತ್‌ ಕುಮಾರ್‌ ಅವರು, ಯುವ ಜೋಡಿಯ ಸುತ್ತ ಒಂದು ದಿನದ ಅವಧಿಯಲ್ಲಿ ನಡೆಯುವ ಲೈಟ್‌ ಹಾರ್ಟೆಡ್‌ ಥ್ರಿಲ್ಲರ್‌ ಚಿತ್ರವಿದು. ಯಾವುದೋ ಒಂದು ಕಾರಣಕ್ಕೆ ಕಾಡಿಗೆ ಹೋಗುವ ಜೋಡಿಗೆ, ಎದುರಾಗುವ ಸಮಸ್ಯೆಗಳೇ ಈ ಚಿತ್ರದ ಹೈಲೈಟ್‌. ಇನ್ನೊಂದು ಮಜವೆಂದರೆ ಇದು ನೈಜ ಪಾತ್ರಗಳನ್ನು ಆಧರಿಸಿ ಜೋಡಿಸಿದ ಕಾಲ್ಪನಿಕ ಕಥೆ ಎಂದಿದ್ದಾರೆ.

ದುಷ್ಟಶಕ್ತಿಯೊಂದನ್ನು ನಾಶ ಮಾಡುವ ತಾಕತ್ತು ಪ್ರಕೃತಿಗಿದೆ ಅನ್ನೋದನ್ನ ಈ ಸಿನಿಮಾ ಮೂಲಕ ಹೇಳುವ ಪ್ರಯತ್ನ ಈ ಚಿತ್ರದಲ್ಲಾಗಿದೆ. “ಇದರಲ್ಲಿ ಬರುವ ಪಾತ್ರಗಳು ಮತ್ತು ಘಟನೆಗಳು ನೈಜ. ಅದನ್ನೆಲ್ಲ ಒಂದೆಡೆ ಸೇರಿ ಮಾಡಿದ ಕಥೆ ಕಾಲ್ಪನಿಕ. ತೆರೆ ಮೇಲೆ ಕಾಣುವ ಪಾತ್ರಗಳು ಕರಾವಳಿ ಭಾಗಕ್ಕೆ ಹತ್ತಿರವಾದವು. ಎಷ್ಟೋ ಯುವ ಜೋಡಿಗಳು ಕಾಡಿನಲ್ಲಿ ಹಳ್ಳಿಗರ ಕೈಗೆ ಸಿಕ್ಕಿಬಿದ್ದ ಉದಾಹರಣೆಗಳಿವೆ. ಉತ್ತರ ಭಾರತದ ಕಡೆಗೆ ಹೀಗೆ ಸಿಕ್ಕವರನ್ನು “ಜಂಗಲ್‌ ಮೇ ಮಂಗಲ್‌” ಅಂತ ಕರೀತಾರೆ” ಎಂದು ನಿರ್ದೇಶಕರು ಹೇಳಿದ್ದಾರೆ.

ಇನ್ನು ಸಿನಿಮಾದಲ್ಲಿ ನಿರ್ದೇಶಕನಾಗಬೇಕು ಅನ್ನೋ ಕಾರಣಕ್ಕೆ ನಾನು ಸುಚಿತ್ರ ಇನ್‌ಸ್ಟಿಟ್ಯೂಟ್‌ನಲ್ಲಿ ನಟನೆ ಕಲಿತೆ. ಅದಾದ ಮೇಲೆ ರಂಗಭೂಮಿಯಲ್ಲಿ ನಟನಾಗಿ ಸೆಟ್‌ ಪ್ರಾಪರ್ಟಿಯಲ್ಲಿಯೂ ಕೆಲಸ ಮಾಡಿದ್ದೇನೆ. ಅಲ್ಲಿಂದ ಸೀರಿಯಲ್‌ಗೆ ಬಂದೆ. ಸೀರಿಯಲ್‌ನಿಂದ ಸಿನಿಮಾಕ್ಕೆ ಬಂದು ಎಂಟು ವರ್ಷಗಳಾಗಿವೆ. ಒಂದಷ್ಟು ತುಳು, ಕನ್ನಡ ಸಿನಿಮಾಗಳಿಗೆ ಅಸಿಸ್ಟಂಟ್‌ ನಿರ್ದೇಶಕನಾಗಿ, ಕೋ ಡೈರೆಕ್ಟರ್‌ ಆಗಿ ಕೆಲಸ ಮಾಡಿದ್ದೇನೆ. ಇದೀಗ “ಜಂಗಲ್‌ ಮಂಗಲ್‌” ಎಂಬುದು ನನ್ನ ಮೊದಲ ಸಿನಿಮಾ” ಎಂದು ರಕ್ಷಿತ್‌ ಕುಮಾರ್‌ ಹೇಳಿದರು.

ಕರಾವಳಿ ಸುತ್ತಮುತ್ತಲಿನ ಕಲಾವಿದರನ್ನೇ ನಾವಿಲ್ಲಿ ಬಳಸಿಕೊಂಡಿದ್ದೇವೆ. ಮೊದಲಿಗೆ ಕಥೆ ಬರೆದೇ, ಕಲಾವಿದರನ್ನು ನಾನು ಸೆಲೆಕ್ಟ್‌ ಮಾಡುತ್ತೇನೆ. ನನ್ನ ತಲೆಯಲ್ಲಿ ನಾನೇ ನೋಡಿದ ಒಂದಷ್ಟು ವ್ಯಕ್ತಿಗಳು, ವ್ಯಕ್ತಿತ್ವಗಳಿವೆ. ಅಂಥ ಪಾತ್ರಗಳನ್ನೇ ಈ ಸಿನಿಮಾದಲ್ಲಿ ಬಳಿಸಿಕೊಂಡಿದ್ದೇನೆ. ಯಶ್‌ ಶೆಟ್ಟಿ ನನಗೆ 10 ವರ್ಷಗಳಿಂದ ಗೊತ್ತು. ನಾಯಕನ ಪಾತ್ರಕ್ಕೆ ಅವರೇ ನನ್ನ ಮೊದಲ ಆಯ್ಕೆ ಆಗಿದ್ದರು. ಬಾಬು ಪಾತ್ರಕ್ಕೆ ಉಗ್ರಂ ಮಂಜು ಅವರೇ ಸೂಕ್ತ ಅನಿಸಿತು. ನಾಯಕಿ ಪಾತ್ರಕ್ಕೆ ಬೆಂಗಳೂರು ಮೂಲದ ನಟಿಯನ್ನು ಆಯ್ಕೆ ಮಾಡಿ ಅವರಿಂದ ನಟನೆ ತೆಗೆಸಿದ್ದೇವೆ.

“ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದಲ್ಲಿ ನಮ್ಮ ಚಿತ್ರದ ಇಡೀ ಕಥೆ ನಡೆಯುತ್ತದೆ. ಅದೊಂದು ತುಂಬ ರಿಮೋಟ್‌ ಏರಿಯಾ. ಆ ಸ್ಥಳಕ್ಕೆ ಬೈಕ್‌ ಬಿಟ್ಟರೆ ಜೀಪ್‌ ಮಾತ್ರವೇ ಹೋಗುತ್ತೆ. 40 ಮನೆಗಳಷ್ಟೇ ಇವೆ. ಖುಷಿಯ ವಿಚಾರ ಏನೆಂದರೆ, ಹಳ್ಳಿಯಲ್ಲಿ ಸಿನಿಮಾದ ಶೂಟಿಂಗ್‌ ಆಗ್ತಿದೆ ಅನ್ನೋ ಕಾರಣಕ್ಕೆ ಆ ಹಳ್ಳಿಯ ಜೀಪ್‌ ಡೈವರ್‌ಗಳು ಫ್ರೀ ಇದ್ದಾಗ, ನಮಗೂ ಸಾಕಷ್ಟು ಸಹಾಯ ಮಾಡಿದ್ದಾರೆ” ಎಂದರು ನಿರ್ದೇಶಕರು.

ನಮ್ಮ ಸಿನಿಮಾಕ್ಕೆ ಸಿಂಪಲ್‌ ಸುನಿ ಅವರ ಸಹಕಾರ ದೊಡ್ಡದು. ನಮ್ಮ ಚಿತ್ರ ನೋಡಿ ಮೆಚ್ಚಿಕೊಂಡಿದ್ದಷ್ಟೇ ಅಲ್ಲದೆ, “ನಮ್ಮ ಕಡೆಯಿಂದ ಏನಾಗಬೇಕು” ಅಂದ್ರು. ಆಗ ನಮ್ಮ ತಲೆಯಲ್ಲಿ ಬಂದಿದ್ದು ಏನೆಂದರೆ, ಅವರು ಪರಿಚಯಿಸಿದವರೆಲ್ಲ, ಇಂಡಸ್ಟ್ರಿಯಲ್ಲಿ ಒಳ್ಳೆಯ ಹೆಸರು ಮಾಡಿದ್ದಾರೆ. ನಮ್ಮ ತಂಡವನ್ನೂ ಅವರೇ ಪ್ರಸೆಂಟ್‌ ಮಾಡಲಿ ಎನ್ನುತ್ತ, ನಿಮ್ಮ ಬ್ಯಾನರ್‌ನಲ್ಲಿಯೇ ನಮ್ಮ ಸಿನಿಮಾ ಬರಬೇಕೆಂದು ಕೇಳಿಕೊಂಡೆವು. ಅದಕ್ಕೆ ಅಷ್ಟೇ ಖುಷಿಯಿಂದ ಒಪ್ಪಿದ್ದಾರೆ” ಎಂದು ರಕ್ಷಿತ್‌ ಕುಮಾರ್‌ ಹೇಳಿದರು.

ಇದನ್ನೂ ಓದಿ : ಮಾಜಿ ಸಚಿವ ನಾಗೇಂದ್ರಗೆ ಮತ್ತೊಂದು ಬಿಗ್ ಶಾಕ್ – ವಾಲ್ಮೀಕಿ ಹಗರಣ ತನಿಖೆ CBIಗೆ ಹಸ್ತಾಂತರಿಸಿ ಹೈಕೋರ್ಟ್​ ಆದೇಶ!

Btv Kannada
Author: Btv Kannada

Read More