ಅಮಾಯಕನನ್ನು ಸುಳ್ಳು ಕೊಲೆ ಕೇಸ್​ನಲ್ಲಿ ಫಿಟ್​ ಮಾಡಿ ಜೈಲಿಗೆ ಕಳುಹಿಸಿದ ಮೂವರು ಪೊಲೀಸರು ಸಸ್ಪೆಂಡ್!

ಮೈಸೂರು : ಅಮಾಯಕನನ್ನು ಸುಳ್ಳು ಕೊಲೆ ಕೇಸ್​​ನಲ್ಲಿ ಫಿಟ್​ ಮಾಡಿ​ ಜೈಲಿಗೆ ಕಳುಹಿಸಿದ ಆರೋಪದ ಮೇಲೆ ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಪೊಲೀಸ್​ ಠಾಣೆ ಇನ್ಸ್‌ಪೆಕ್ಟರ್ ಬಿ.ಜಿ ಪ್ರಕಾಶ್, ಇಲವಾಲ ಸಬ್​​ ಇನ್ಸ್​​ಪೆಕ್ಟರ್​​ ಮಹೇಶ್‌ ಕುಮಾರ್ ಹಾಗೂ ಜಯಪುರ ಪೊಲೀಸ್​ ಠಾಣೆಯ ಸಬ್ ಇನ್ಸ್​ಪೆಕ್ಟರ್​ ಪ್ರಕಾಶ್ ಎತ್ತಿನಮನೆಯವರನ್ನು ಸಸ್ಪೆಂಡ್​ ಮಾಡಲಾಗಿದೆ. 

ಕುಶಾಲನಗರದ ಬಸವನಹಳ್ಳಿ ಹೊಸ ಬಡಾವಣೆಯ ಗಾಂಧಿ ಎಂಬುವರ ಪುತ್ರ ಸುರೇಶ್​ ಅಲಿಯಾಸ್ ಕುರುಬರ ಸುರೇಶ್ ಎಂಬುವನ ವಿರುದ್ಧ ಬೆಟ್ಟದಪುರ ಪೊಲೀಸ್​ ಠಾಣೆ ಇನ್ಸ್‌ಪೆಕ್ಟರ್ ಬಿ.ಜಿ ಪ್ರಕಾಶ್ ಸುಳ್ಳು ಚಾರ್ಜ್​ಶೀಟ್​​ ಸಲ್ಲಿಸಿ ಜೈಲಿಗೆ ಕಳುಹಿಸಿದ್ದರು. ಮೈಸೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸಿದಾಗ ಸುಳ್ಳು ಚಾರ್ಜ್​​ಶೀಟ್​ ಹಾಕಿರುವುದು ಬೆಳಕಿಗೆ ಬಂದಿದೆ.

ಹೌದು.. 2020ರ ನವೆಂಬರ್​ 12ರಂದು ಬೆಟ್ಟದಪುರದಲ್ಲಿ ಓರ್ವ ಮಹಿಳೆಯ ಮೃತದೇಹ ಸಿಕ್ಕಿತ್ತು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದಾಗ ಬಲವಾದ ಏಟಿನಿಂದ ಮಹಿಳೆ ಮೃತಪಟ್ಟಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖವಾಗಿತ್ತು. ಹೀಗಾಗಿ ಅದು ಕೊಲೆ ಎಂದು ಸ್ಪಷ್ಟಪವಾಗಿತ್ತು. ಈ ಮೃತ ಮಹಿಳೆ ಯಾರು? ಕೊಲೆ ಮಾಡಿದವರು ಯಾರು? ಎಂಬ ಪ್ರಶ್ನೆಗಳು ಮೂಡಿದ್ದವು.

ಕುಶಾಲನಗರದ ಬಸವನಹಳ್ಳಿ ಹೊಸ ಬಡಾವಣೆಯ ಜೇನುಕುರುಬ ಆದಿವಾಸಿ ಸಮುದಾಯಕ್ಕೆ ಸೇರಿದವರಾದ ಸುರೇಶ್​ ಅಲಿಯಾಸ್ ಕುರುಬರ ಸುರೇಶ್ ಅವರು 2020ರ ನವೆಂಬರ್​​ನಲ್ಲಿ ಪತ್ನಿ ಕಾಣೆಯಾಗಿರುವ ಕುರಿತು ಕುಶಾಲನಗರ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದರು. ಪತ್ನಿ ಕಾಣೆಯಾಗಲು ಗಣೇಶ್​ ಎಂಬಾತನೇ ಕಾರಣ ಎಂದು ತಿಳಿಸಿದ್ದರು. ಬಳಿಕ, ಮಲ್ಲಿಗೆಯ ತಾಯಿ ಗೌರಿ ಅವರು ಮಗಳು ಕೊಲೆಯಾಗಿದ್ದಾಳೆ ಎಂದು ದೂರು ನೀಡಿದ್ದರು. ಈ ಪ್ರಕರಣದಲ್ಲಿ ಪೊಲೀಸರು ಸುರೇಶ್​ ಅವರನ್ನೇ ಆರೋಪಿಯಾಗಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ವಿಚಾರಣಾಧಿಕಾರಿಗಳು ಕಟ್ಟು ಕಥೆ ಕಟ್ಟಿದ್ದರು. ಬೆಟ್ಟದಪುರ ಪೊಲೀಸ್​ ಠಾಣೆ ಇನ್ಸ್‌ಪೆಕ್ಟರ್ ಬಿ.ಜಿ ಪ್ರಕಾಶ್ ನ್ಯಾಯಾಲಯಕ್ಕೆ ಸುಳ್ಳು ಚಾರ್ಜ್​ಶೀಟ್​​ ಸಲ್ಲಿಸಿದ್ದರು.

ಕೋರ್ಟ್​ನಲ್ಲಿ ಸತ್ಯ ಬಯಲು : ಮೈಸೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಈಗಾಗಲೇ 9 ಜನ ಸಾಕ್ಷಿದಾರರ ವಿಚಾರಣೆಯೂ ನಡೆದಿತ್ತು. ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುವ ಸಂದರ್ಭದಲ್ಲಿ, ನಾನು (ಸುರೇಶ್) ನನ್ನ ಪತ್ನಿಯನ್ನು ಕೊಂದಿಲ್ಲ, ಆಕೆ ಬದುಕಿದ್ದಾಳೆ ಎಂದು ಸುರೇಶ್​ ಅವರು ಪದೇ ಪದೆ ಮನವಿ ಮಾಡುತ್ತಿದ್ದರು.

ಅಷ್ಟೇ ಅಲ್ಲದೆ ನಮ್ಮ ತಾಯಿ ಬದುಕಿದ್ದಾಳೆ, ನಮ್ಮ ತಾಯಿ ಸತ್ತಿಲ್ಲ ಎಂದು ಸುರೇಶ್​ ಮತ್ತು ಮಲ್ಲಿಗೆ ದಂಪತಿಯ ಮಕ್ಕಳಾದ ಕೃಷ್ಣ, ಕೀರ್ತಿ ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದಿದ್ದರು. ಅಕ್ಕಪಕ್ಕದ ಮನೆಯವರೂ ಸಹಿತ ಮಲ್ಲಿಗೆ ಸತ್ತಿಲ್ಲ ಎಂದು ಸಾಕ್ಷ್ಯ ಹೇಳಿದ್ದರು. ಕೊನೆಗೆ 2025ರ ಏಪ್ರಿಲ್ 2ರಂದು ಮಲ್ಲಿಗೆ ಜಡ್ಜ್ ಮುಂದೆ ಹಾಜರಾಗಿದ್ದರು. ಕೋರ್ಟ್​ನಲ್ಲಿ ಪೊಲೀಸರು ಹೇಳಿದ್ದು ಕಟ್ಟುಕತೆ ಎಂದು ಸಾಬೀತಾಗಿತ್ತು. ಆದರೆ, ಪತ್ನಿಯನ್ನು ಕೊಲೆ ಮಾಡಿದ ಆರೋಪ ಹೊತ್ತಿದ್ದ ಸುರೇಶ್​ ಎರಡು ವರ್ಷಗಳ ಕಾಲ ಜೈಲುಶಿಕ್ಷೆ ಅನುಭವಿಸಿದ್ದಾರೆ. ಇದೀಗ, ಸತ್ಯ ಹೊರ ಬಂದಿರುವುದರಿಂದ ಸುರೇಶ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಸುರೇಶ್ ವಿರುದ್ಧ ಸುಳ್ಳು ಕೇಸ್ ಹಾಕಿದ್ದ ಮೂವರು ಪೊಲೀಸ್​ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

ಇದನ್ನೂ ಓದಿ : ವಾಹನ ಸವಾರರಿಗೆ ಶಾಕ್.. ಇಂದಿನಿಂದ ಬೆಂಗಳೂರಿನ ಈ ಹೆದ್ದಾರಿ ಟೋಲ್‌ಗಳ ದರ ಭಾರೀ ಏರಿಕೆ!

Btv Kannada
Author: Btv Kannada

Read More