ಕರ್ನಾಟಕ ಬ್ಯಾಂಕ್ ಷೇರುಗಳು 7% ಕುಸಿತ – ಠೇವಣಿದಾರಿಗೆ ಆಡಳಿತ ಮಂಡಳಿ ಸ್ಪಷ್ಟನೆ.. “ಬ್ಯುಸಿನೆಸ್ ಲೈನ್” ವರದಿ ಹೇಳಿದ್ದೇನು?

ಬೆಂಗಳೂರು : ಕರ್ನಾಟಕ ಮೂಲದ ಪ್ರತಿಷ್ಠಿತ ಕರ್ನಾಟಕ ಬ್ಯಾಂಕ್​ನಲ್ಲಿ ನಡೆದ ಕೋಟಿ ಕೋಟಿ ಅವ್ಯವಹಾರ ಸಂಬಂಧ ಬ್ಯಾಂಕ್​ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಶ್ರೀಕೃಷ್ಣನ್ ಹರಿಹರ ಶರ್ಮಾ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಶೇಖರ್ ರಾವ್ ಅವರ ರಾಜೀನಾಮೆ ನೀಡಿದ್ದು, ಇದನ್ನು ಕರ್ನಾಟಕ ಬ್ಯಾಂಕ್ ಆಡಳಿತ ಮಂಡಳಿ ಅಂಗೀಕರಿಸಿದೆ.

ಕರ್ನಾಟಕ ಬ್ಯಾಂಕ್​ನ ಅಧಿಕಾರಿಗಳ ರಾಜೀನಾಮೆ ಬಳಿಕ ಬ್ಯಾಂಕಿನ ಷೇರುಗಳ ಮೌಲ್ಯ ಶೇ.7ಕ್ಕಿಂತಲೂ ಕಡಿಮೆಯಾಗಿದೆ. ಈ ಬೆನ್ನಲ್ಲೇ ಕರ್ನಾಟಕ ಬ್ಯಾಂಕ್ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ. ತಮ್ಮ ಖಾತೆದಾರರಿಗೆ, ಠೇವಣಿದಾರರಿಗೆ, ಸಾಲಗಾರರಿಗೆ ಬ್ಯಾಂಕ್​ನ ಕಾರ್ಯನಿರ್ವಹಣೆ ಬಗ್ಗೆ ಭರವಸೆ ನೀಡಿದೆ ಎಂದು “ಬ್ಯುಸಿನೆಸ್ ಲೈನ್” ವರದಿ ಮಾಡಿದೆ. ಗ್ರಾಹಕರು ಯಾವುದೇ ಆತಂಕಕ್ಕೆ ಒಳಗಾಗಬಾರದು ಎಂದು ಬ್ಯಾಂಕ್ ಆಡಳಿತ ಮನವಿ ಮಾಡಿದೆ.

ಕರ್ನಾಟಕ ಬ್ಯಾಂಕ್ ತನ್ನ ಪಾಲುದಾರರಿಗೆ ಪಾರದರ್ಶಕತೆ ಮತ್ತು ನೈತಿಕ ಆಡಳಿತಕ್ಕೆ ತನ್ನ ಬದ್ಧತೆ ಅಚಲವಾಗಿದೆ ಎಂದು ಭರವಸೆ ನೀಡಿದೆ. ಬ್ಯಾಂಕ್ ಷೇರು ವಿನಿಮಯ ಕೇಂದ್ರಗಳಿಗೆ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದು, ಶೇ. 19.85 ಕ್ಕಿಂತ ಹೆಚ್ಚಿನ ಬಂಡವಾಳ ಸಮರ್ಪಕ ಅನುಪಾತ (CAR) ದೊಂದಿಗೆ ಉತ್ತಮ ಬಂಡವಾಳೀಕರಣ ಹೊಂದಿದ್ದು, ಬ್ಯಾಂಕಿನ ಆರ್ಥಿಕ ಸ್ಥಿತಿ ಮತ್ತು ದೃಢವಾದ ಅಪಾಯ ನಿರ್ವಹಣಾ ಅಭ್ಯಾಸಗಳ ಸದೃಢತೆಯನ್ನು ಪ್ರತಿಬಿಂಬಿಸುತ್ತದೆ ಎಂದು “ಬ್ಯುಸಿನೆಸ್ ಲೈನ್” ವರದಿ ಮಾಡಿದೆ.

“ಕರ್ನಾಟಕ ಬ್ಯಾಂಕ್ ತನ್ನ ಎಲ್ಲಾ ಮೌಲ್ಯಯುತ ಗ್ರಾಹಕರು ಮತ್ತು ಪಾಲುದಾರರಿಗೆ ಠೇವಣಿದಾರರ ಹಣದ ಸುರಕ್ಷತೆ ಮತ್ತು ಭದ್ರತೆ ಯಾವಾಗಲೂ ನಮ್ಮ ಅತ್ಯಂತ ಆದ್ಯತೆಯಾಗಿದೆ ಮತ್ತು ಮುಂದೆಯೂ ಇರುತ್ತದೆ ಎಂದು ಭರವಸೆ ನೀಡಲು ಬಯಸುತ್ತದೆ. ಬ್ಯಾಂಕ್ ಬಲಿಷ್ಠವಾಗಿದೆ, ಸ್ಥಿತಿಸ್ಥಾಪಕವಾಗಿದೆ ಮತ್ತು ಹಲವು ದಶಕಗಳಿಂದ ನಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಎತ್ತಿಹಿಡಿಯಲು ಬದ್ಧವಾಗಿದೆ ಎಂದು ನಾವು ಪುನರುಚ್ಚರಿಸಲು ಬಯಸುತ್ತೇವೆ” ಎಂದು ಮಾಧ್ಯಮ ಪ್ರಕಟನೆ ಮೂಲಕ ಕರ್ನಾಟಕ ಬ್ಯಾಂಕ್ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.

ಇದನ್ನೂ ಓದಿ : ರಾಸಾಯನಿಕ ಕಾರ್ಖಾನೆಯಲ್ಲಿ ಸ್ಫೋಟ – 8 ಮಂದಿ ದುರ್ಮರಣ, ಹಲವರಿಗೆ ಗಾಯ!

Btv Kannada
Author: Btv Kannada

Read More