ಹೈದರಾಬಾದ್ : ರಾಸಾಯನಿಕ ಕಾರ್ಖಾನೆಯಲ್ಲಿ ರಿಯಾಕ್ಟರ್ ಸ್ಫೋಟದಿಂದ ಕನಿಷ್ಠ 8 ಜನ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ತೆಲಂಗಾಣದ ಸಂಗರೆಡ್ಡಿ ಜಿಲ್ಲೆಯ ಪಾಶಮಿಲಾರಂನ ಸಿಗಾಚಿಯಲ್ಲಿ ನಡೆದಿದೆ.
ರಿಯಾಕ್ಟರ್ ಸ್ಫೋಟಗೊಳ್ಳುತ್ತಿದ್ದಂತೆ, ಬೆಂಕಿ ಹೊತ್ತಿಕೊಂಡಿದೆ. ಇನ್ನೂ, ಸ್ಫೋಟದ ತೀವ್ರತೆಯಿಂದಾಗಿ ಕಾರ್ಮಿಕರ ಮೃತದೇಹಗಳು 100 ಮೀಟರ್ ದೂರಕ್ಕೆ ಹಾರಿಬಿದ್ದಿವೆ. ಈ ವೇಳೆ, ಕೆಲವರು ಕಾರ್ಖಾನೆಯ ಒಳಗೆ ಸಿಲುಕಿಕೊಂಡಿದ್ದರು. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿ, ಸಿಲುಕಿದ್ದವರ ರಕ್ಷಣೆ ಮಾಡಿದ್ದಾರೆ.
ಘಟನಾ ಸ್ಥಳದಿಂದ ಆರು ಶವಗಳನ್ನು ಹೊರತೆಗೆಯಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆಯ ಸಮಯದಲ್ಲಿ ಕೆಲವು ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನೂ ಅವಘಡದಲ್ಲಿ ಸಿಲುಕಿದ್ದವರನ್ನು ಹೊರಗೆ ತರುವಾಗ ಸೆರೆಯಾದ ವಿಡಿಯೋದಲ್ಲಿ ಕಾರ್ಮಿಕರಿಗೆ ಸುಟ್ಟ ಗಾಯಗಳಾಗಿರುವುದನ್ನು ನೋಡಬಹುದಾಗಿದೆ.
ದುರಂತದಲ್ಲಿ ಮೃತಪಟ್ಟವರಿಗೆ ಪ್ರಧಾನಿ ನರೇಂದ್ರ ಮೋದಿಯವರು ತೀವ್ರ ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ.ಗಳ ಪರಿಹಾರವನ್ನು ಅವರು ಘೋಷಿಸಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ತೆಲಂಗಾಣದ ಸಂಗರೆಡ್ಡಿಯಲ್ಲಿ ಕಾರ್ಖಾನೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಜೀವಹಾನಿಯಾಗಿರುವುದಕ್ಕೆ ದುಃಖವಾಗಿದೆ. ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪ ಸೂಚಿಸುತ್ತೇನೆ. ಗಾಯಾಳುಗಳು ಬೇಗ ಗುಣಮುಖರಾಗಲಿ. ಮೃತರ ಸಂಬಂಧಿಕರಿಗೆ ಪಿಎಂಎನ್‌ಆರ್‌ಎಫ್‌ನಿಂದ 2 ಲಕ್ಷ ರೂ. ಪರಿಹಾರ ನೀಡಲಾಗುವುದು. ಗಾಯಾಳುಗಳಿಗೆ 50,000 ರೂ. ನೀಡಲಾಗುವುದು ಎಂದು ಬರೆದುಕೊಂಡಿದ್ದಾರೆ.
