KRS ಜಲಾಶಯಕ್ಕೆ ಬಾಗಿನ ಅರ್ಪಿಸಿ ದಾಖಲೆ ನಿರ್ಮಿಸಿದ ಸಿಎಂ ಸಿದ್ದರಾಮಯ್ಯ!

ಮಂಡ್ಯ : ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಜೂನ್​ ತಿಂಗಳಲ್ಲಿ ಕೆಆರ್​ಎಸ್​​ (ಕೃಷ್ಣರಾಜಸಾಗರ) ಡ್ಯಾಂ ಸಂಪೂರ್ಣ ಭರ್ತಿ ಆಗಿದ್ದು ಸಿಎಂ ಸಿದ್ದರಾಮಯ್ಯ ಅವರು ಇಂದು ಬಾಗಿನ ಸಮರ್ಪಣೆ ಮಾಡಿದರು. ಇದೇ ವೇಳೆ ಡಿಸಿಎಂ ಡಿ.ಕೆ ಶಿವಕುಮಾರ್, ಸಚಿವರಾದ ಎನ್​ ಚೆಲುವರಾಯಸ್ವಾಮಿ ಹಾಗೂ ಹೆಚ್​​​.ಸಿ ಮಹದೇವಪ್ಪ ಸೇರಿ ಇತರೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಸಿಎಂ ಸಿದ್ದರಾಮಯ್ಯ ಅವರು ಅಭಿಜಿತ್ ಶುಭ ಮುಹೂರ್ತದಲ್ಲಿ ಕಾವೇರಿ ಮಾತೆಗೆ ಬಾಗಿನ ಅರ್ಪಣೆ ಮಾಡಿದರು. ವೈದಿಕ ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ ಬಾಗಿನ ಪೂಜಾ ಕೈಂಕರ್ಯಗಳು ನೆರವೇರಿದವು. ಕೆಆರ್​ಎಸ್​ ಜಲಾಶಯಕ್ಕೆ 4ನೇ ಬಾರಿಗೆ ಸಿಎಂ ಸಿದ್ದರಾಮಯ್ಯ ಅವರು ಬಾಗಿನ ಅರ್ಪಿಸಿ ಖುಷಿ ಪಟ್ಟರು. ನಂತರ ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿದರು. ಇದೇ ವೇಳೆ ನಾಡಿನ ಜನರಿಗೆ ಒಳ್ಳೆಯದಾಗಲಿ ಎಂದು ತಾಯಿ ಕಾವೇರಿ ಬಳಿ ಪ್ರಾರ್ಥನೆ ಮಾಡಿದರು.

ಹೊಸ ದಾಖಲೆ ಬರೆದ ಸಿಎಂ ಸಿದ್ದರಾಮಯ್ಯ : ಕೆಆರ್​ಎಸ್​​ ಜಲಾಶಯ ಇತಿಹಾಸದಲ್ಲೇ ಇದೇ ಮೊಟ್ಟ ಮೊದಲ ಬಾರಿಗೆ ಜೂನ್​​ನಲ್ಲಿ ಸಂಪೂರ್ಣವಾಗಿ ಭರ್ತಿಯಾಗಿದೆ. ಜೂನ್​ ತಿಂಗಳಲ್ಲೇ ಕೆಆರ್​​ಎಸ್​​ಗೆ ಬಾಗಿನ ಅರ್ಪಿಸಿದ ಕರ್ನಾಟಕದ ಮೊಟ್ಟ ಮೊದಲ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಗಿದ್ದಾರೆ. 1979 ರಂದು ಡಿ ದೇವರಾಜ ಅರಸು ಅವರ ಕಾಲದಲ್ಲಿ ಬಾಗಿನ ಕಾರ್ಯಕ್ರಮ ಆರಂಭವಾದರೂ ಈ ಹಿಂದಿನ ಯಾವ ಮುಖ್ಯಮಂತ್ರಿ ಕೂಡ ಜೂನ್​​ನಲ್ಲಿ ಬಾಗಿನ ಅರ್ಪಿಸಿರಲಿಲ್ಲ. ಆದರೆ ಈಗ ಸಿಎಂ ಸಿದ್ದರಾಮಯ್ಯ ಅವರು ಜೂನ್​ನಲ್ಲೇ ಕೆಆರ್​ಎಸ್​ಗೆ ಬಾಗಿನ ಸಮರ್ಪಣೆ ಮಾಡಿ ನೂತನ ದಾಖಲೆ ಬರೆದಿದ್ದಾರೆ.

ಕೆಆರ್​ಎಸ್​ ಬಾಗಿನ ಸಮರ್ಪಣೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಕೆಆರ್‌ಎಸ್ ಜಲಾಶಯವನ್ನು ಬಣ್ಣ ಬಣ್ಣದ ಹೂವುಗಳಿಂದ ಶೃಂಗಾರ ಮಾಡಲಾಗಿತ್ತು. ಅಣೆಕಟ್ಟೆ ಗೋಡೆಗೆ ಸುಣ್ಣ, ಬಣ್ಣ ಬಳೆದಿದ್ದು ಎಲ್ಲೆಡೆ ಕನ್ನಡ ಬಾವುಟಗಳು ರಾರಾಜಿಸುತ್ತಿದ್ದವು. ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್, ಸಚಿವರಾದ ಎನ್ ಚಲುವರಾಯಸ್ವಾಮಿ, ಹೆಚ್. ಸಿ ಮಹದೇವಪ್ಪ, ಕೆ ವೆಂಕಟೇಶ್, ಎನ್.ಎಸ್ ಬೋಸರಾಜು ಹಾಗೂ ಸ್ಥಳೀಯ ಶಾಸಕರು ಇದ್ದರು.

ಇದನ್ನೂ ಓದಿ : ಗೌರಿಬಿದನೂರಿನಲ್ಲಿ ಪುಟ್ಟಸ್ವಾಮಿ ಗೌಡ ಬೆಂಬಲಿಸಿ ತಪ್ಪು ಮಾಡಿದ್ದೇವೆ – ಹಲವು ಮುಖಂಡರ ಆಕ್ರೋಶ!

 

Btv Kannada
Author: Btv Kannada

Read More