5 ಹುಲಿಗಳ ಸಾವು ಪ್ರಕರಣ – ಅರಣ್ಯ ಸಚಿವ ಈಶ್ವರ್​​ ಖಂಡ್ರೆ ವಿರುದ್ದ ರಾಜ್ಯಪಾಲರಿಗೆ ದಿನೇಶ್​​​ ಕಲ್ಲಹಳ್ಳಿ ದೂರು!

ಬೆಂಗಳೂರು : ಮಲೆ ಮಹದೇಶ್ವರ​ ಬೆಟ್ಟದಲ್ಲಿ5 ಹುಲಿಗಳ ಸಾವು ಪ್ರಕರಣಕ್ಕೆ ಸಂಬಂಧಿದಂತೆ ಅರಣ್ಯ ಸಚಿವ ಈಶ್ವರ್​​ ಖಂಡ್ರೆ ವಿರುದ್ದ ಶಿಸ್ತು ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಕಾಯಕರ್ತ ದಿನೇಶ್​​​ ಕಲ್ಲಹಳ್ಳಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ದೂರು ನೀಡಿದ್ದಾರೆ.

ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯಧಾಮದ ಹೂಗ್ಯಂ ಅರಣ್ಯ ವಲಯದ ಮೀಣ್ಯಂ ಪ್ರದೇಶದಲ್ಲಿ ಸಂಭವಿಸಿದ ತಾಯಿ ಹುಲಿ ಹಾಗೂ ನಾಲ್ಕು ಹುಲಿ ಮರಿಗಳ ವಿಷಪೂರಿತ ಆಹಾರದ ಸೇವನೆಯಿಂದ ಸಂಭವಿಸಿದ ದುರಂತಪೂರ್ಣ ಸಾವಿನ ಹಿನ್ನೆಲೆಯಲ್ಲಿ, Project Tiger ಹಾಗೂ NTCA ಮಾರ್ಗಸೂಚಿಗಳ ಉಲ್ಲಂಘನೆ, ಗಸ್ತು ಶಿಬಿರದ ನಿರ್ವಹಣೆಯಲ್ಲಿನ ವೈಫಲ್ಯ, ಸಿಬ್ಬಂದಿಗೆ ನಿರಂತರ ವೇತನ ಪಾವತಿಯಲ್ಲಿ ತೀವ್ರ ತೊಂದರೆ ಮತ್ತು ಮೇಲ್ವಿಚಾರಣಾ ದೌರ್ಬಲ್ಯಗಳಿಂದ ಉಂಟಾದ ಈ ಅನಾಹುತವನ್ನು ಗಂಭೀರವಾಗಿ ಪರಿಗಣಿಸಿ, ನೇರ ಕಾರಣರಾದ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ವಿರುದ್ಧ ಕಾನೂನಾತ್ಮಕ ಹಾಗೂ ಆಡಳಿತಾತ್ಮಕ ಹೊಣೆಗಾರಿಕೆ ನಿಗದಿಪಡಿಸಬೇಕು ಎಂದು ದಿನೇಶ್​ ಕಲ್ಲಹಳ್ಳಿ ದೂರಿನಲ್ಲಿ ತಿಳಿಸಿದ್ದಾರೆ.

ಹಾಗೆಯೇ, ತಮ್ಮ ಸಂವಿಧಾನಾತ್ಮಕ ಮತ್ತು ನೈತಿಕ ಜವಾಬ್ದಾರಿಗಳನ್ನು ನಿರ್ಲಕ್ಷಿಸಿ, ಇಲಾಖೆಯೊಳಗಿನ ಸ್ವಜನಪಕ್ಷಪಾತ ಹಾಗೂ ಅಧಿಕಾರಶಾಹಿ ಆಶಿಸ್ತಿನ ಪ್ರವೃತ್ತಿಗಳಿಗೆ ಕಡಿವಾಣ ಹಾಕಲು ವಿಫಲರಾದ ಅರಣ್ಯ ಸಚಿವ ಈಶ್ವರ ಖಂಡ್ರೆ ವಿರುದ್ಧ ತಕ್ಷಣದ ಶಿಸ್ತು ಕ್ರಮ ಕೈಗೊಳ್ಳಬೇಕು. ಭಾರತೀಯ ಸಂವಿಧಾನದ ವಿಧಿ 164(1) ಅಡಿಯಲ್ಲಿ ಮಾನ್ಯ ರಾಜ್ಯಪಾಲರು ತಮ್ಮ ವೈಯಕ್ತಿಕ ವಿವೇಚನಾಧಿಕಾರವನ್ನು ಬಳಸಿಕೊಂಡು ಮಧ್ಯಪ್ರವೇಶ ಮಾಡಿ ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಅವರ ವಿರುದ್ಧ ತಕ್ಷಣದ ಸಂವಿಧಾನಬದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಕಾಯಕರ್ತ ದಿನೇಶ್​​​ ಕಲ್ಲಹಳ್ಳಿ ದೂರು ನೀಡಿದ್ದಾರೆ.

ಇದನ್ನೂ ಓದಿ : ಬೆಂಗಳೂರಲ್ಲಿ ಒಂದೇ ನಂಬರ್​ನಲ್ಲಿ 8 ಆಟೋಗಳ ಸಂಚಾರ – ಫೋಟೋ ಸಮೇತ RTOಗೆ ಲಾಯರ್ ಜಗದೀಶ್ ದೂರು!

Btv Kannada
Author: Btv Kannada

Read More