ವಿನಯ್ ರಾಜ್‍ಕುಮಾರ್, ನಿಶಾ ರವಿಕೃಷ್ಣನ್ ನಟನೆಯ ಅಂದೊಂದಿತ್ತು ಕಾಲ ಚಿತ್ರದ ‘ಮುಂಗಾರು ಮಳೆಯಲ್ಲಿ …’ ಎಂಬ ಹಾಡು ಸೂಪರ್ ಹಿಟ್ ಆಗಿದ್ದು, ಯೂಟ್ಯೂಬ್ನಲ್ಲಿ 36.4 ಮಿಲಿಯನ್ ವೀವ್ಸ್ ಆಗಿದೆ. ಹಾಗೆಯೇ ಬಹಳಷ್ಟು ಅಭಿಮಾನಿಗಳು ಈ ಸಾಂಗ್ನ ರೀಲ್ಸ್ ಮಾಡಿ ಅಪ್ಲೋಡ್ ಕೂಡ ಮಾಡಿದ್ದಾರೆ. ಇದು ಇಡೀ ಚಿತ್ರತಂಡದ ಸಂಭ್ರಮವನ್ನು ಹೆಚ್ಚು ಮಾಡಿದ್ದು, ಚಿತ್ರ ಯಶಸ್ವಿ ಆಗುವ ನಿರೀಕ್ಷೆಯಲ್ಲಿದ್ದಾರೆ. ಈಗ ತಮ್ಮ ಚಿತ್ರದ ಎರಡನೇ ಹಾಡನ್ನು ರಿಲೀಸ್ ಮಾಡುವುದರ ಜೊತೆಗೆ ಚಿತ್ರತಂಡ ಸುದ್ದಿಗೋಷ್ಠಿಯನ್ನು ಆಯೋಜನೆ ಮಾಡಿತ್ತು. ವೇದಿಕೆಯ ಮೇಲೆ ಈ ಚಿತ್ರದ ಮೊದಲ ಹಾಡಿನ ಫೀಮೇಲ್ ವರ್ಷನ್ ರುಚಿತ ರಾಜೇಶ್ ಎಂಬ ಯುವ ಗಾಯಕಿ ಹಾಡಿ ಗಮನ ಸೆಳೆದರು. ತದನಂತರ ಎರಡನೇ ಗೀತೆಯನ್ನು ಇಡೀ ರಾಜ್ಯಕ್ಕೆ 10ನೇ ತರಗತಿಯಲ್ಲಿ ಫಸ್ಟ್ ಬಂದ ಮಲ್ಲಸಂದ್ರದಲ್ಲಿರುವ ಬಿ.ಎನ್.ಆರ್ ಪಬ್ಲಿಕ್ ಸ್ಕೂಲ್ ಶಾಲೆಯ ವಿದ್ಯಾರ್ಥಿಗಳಿಂದ ರಿಲೀಸ್ ಮಾಡಿಸಿದ್ದು ಮತ್ತೊಂದು ವಿಶೇಷವಾಗಿದ್ದು, ಇದಕ್ಕೆ ಕಾರಣ ಏನು ಎಂಬುವುದು ಹಾಡಿನಲ್ಲಿ ತಿಳಿಯುತ್ತದೆ.
ನಟ ವಿನಯ್ ರಾಜ್‍ಕುಮಾರ್ ಅವರು, ಈ ಚಿತ್ರದ ಮೊದಲ ಸಾಂಗ್ ದೊಡ್ಡ ಹಿಟ್ ಆಗಿದೆ. ನಾನು ಕೂಡ ಸಾಂಗ್ ಅನ್ನು ಫ್ಯಾನ್ಸ್ಗಳು ರೀಲ್ಸ್ ಮಾಡಿದ್ದು ನೋಡಿದೆ. ಮಿಲಿಯನ್ಸ್ ವಿವ್ಯೂ ರೀಚ್ ಆಗಿರೋದು ನಮ್ಮ ತಂಡಕ್ಕೂ ನನಗೂ ಖುಷಿ ಇದೆ. ಈಗ ನಮ್ಮ ಚಿತ್ರದ ಎರಡನೇ ಹಾಡು ಬಿಡುಗಡೆಯಾಗುತ್ತಿದೆ, ಇದು ನನ್ನ ಪೆವರೇಟ್ ಗೀತೆ. ನಾನು ನಿರ್ದೇಶಕ ಕೀರ್ತಿಗೆ ಇದನ್ನೇ ಮೊದಲು ಬಿಡಿ ಎಂದಿದ್ದೆ. ಈ ಚಿತ್ರದಲ್ಲಿ ನಾನು 16ವರ್ಷದ ಹುಡುಗನ ಗೆಟಪ್ನಲ್ಲಿ ಮಾಡುವುದು ಚಾಲೆಂಜ್ ಆಗಿತ್ತು. ವೈಟ್ ಲಾಸ್ ಮಾಡುವುದು ಕಷ್ಟ ಆಗಿತ್ತು. ಹಾಡು ತುಂಬಾ ಚೆನ್ನಾಗಿ ಬಂದಿದೆ. ಲೊಕೇಶನ್, ಸಾಂಗ್ ಎಲ್ಲವೂ ಸೊಗಸಾಗಿದೆ. ಶಾಲಾ ದಿನಗಳಲ್ಲಿ ಇಷ್ಟಪಟ್ಟ ಹುಡುಗಿಯ ಹಿಂದೆ ಓಡಾಡಿದ್ದೇನೆ. ಆದರೆ ನಿಜ ಜೀವನದಲ್ಲಿ ಹತ್ತನೇ ತರಗತಿ ಓದುವಾಗ ನಾನು ಬಹಳ ಮುಗ್ಧ ಹುಡುಗ. ಮೂರು ಶೇಡ್ಗಳಲ್ಲಿ ನನ್ನ ಪಾತ್ರ ಸಾಗುತ್ತದೆ. ಸಿನಿಮಾ ಎಲ್ಲರಿಗೂ ಇಷ್ಟವಾಗುತ್ತದೆ. ನಿಮ್ಮ ಬೆಂಬಲ ಇರಲಿ ಎಂದರು.
ಇನ್ನು ಈ ಚಿತ್ರದ ಶಾಲಾ ವಿದ್ಯಾರ್ಥಿಯ ಹಾಡಿನಲ್ಲಿ ಕಾಣಿಸಿಕೊಂಡಿರುವ ಯುವ ನಟಿ ನಿಶಾ ರವಿಕೃಷ್ಣನ್ ಅವರು, ಇದರಲ್ಲಿ ನನ್ನದೊಂದು ಸಣ್ಣ ಪಾತ್ರವಾದರೂ ಬಹಳ ಇಂಪಾರ್ಟೆಂಟ್ ಆಗಿದೆ. ನಿರ್ದೇಶಕರು, ನಿರ್ಮಾಪಕರು ತುಂಬಾ ಸಹಕಾರ ನೀಡಿದ್ದಾರೆ. ಅದೇ ರೀತಿ ನಟ ವಿನಯ್ ರಾಜ್‍ಕುಮಾರ್ ಜೊತೆ ಅಭಿನಯಿಸಿದ್ದು ಖುಷಿ ತಂದಿದೆ. ಸುಂದರ ಪ್ರಮುಖ ಪಾತ್ರವಾಗಿದ್ದು, ಖಂಡಿತ ಈ ಚಿತ್ರ ಎಲ್ಲರಿಗೂ ಇಷ್ಟವಾಗುತ್ತದೆ ಎಂದು ಹೇಳಿದರು.
ನಿರ್ದೇಶಕ ಕೀರ್ತಿ ಕೃಷ್ಣಪ್ಪ ಅವರು, ಇದು ನನ್ನ ನಿರ್ದೇಶನದ ಮೊದಲ ಚಿತ್ರ. ಈಗಾಗಲೇ ನಮ್ಮ ಚಿತ್ರದ ಮೊದಲ ಸಾಂಗ್ಸ್ ಮಿಲಿಯನ್ಸ್ ಗಟ್ಟಲೆ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದು, ಒಳ್ಳೆ ರೆಸ್ಪಾನ್ಸ್ ನಮಗೆ ಸಿಕ್ಕಿದೆ. ನಾವು ಆ ಸಾಂಗ್ ಶೂಟಿಂಗ್ ಮಾಡುವ ಬಹಳಷ್ಟು ಮಳೆ ಇತ್ತು, ಕೊರೋನಾ ಸಂದರ್ಭದಲ್ಲಿ ಚಿತ್ರೀಕರಣ ಮಾಡಿದ್ದು, ಆಗ ಯುಗಾದಿಯ ಹಬ್ಬ, ನಿರ್ಮಾಪಕರು ನಮ್ಮ ಜೊತೆ ಇದ್ದು ಸಂಭ್ರಮಿಸಿದ್ದ ಕ್ಷಣ ಮರೆಯಲು ಸಾಧ್ಯವಿಲ್ಲ. ನಮಗೆ ಏನು ಬೇಕು ಅದೆಲ್ಲವನ್ನು ನಿರ್ಮಾಪಕ ಭುವನ್ ಸುರೇಶ್ ನೀಡಿದ್ದಾರೆ. ನಿರ್ಮಾಪಕರು ಚಿತ್ರ ಚೆನ್ನಾಗಿ ಬರಲು ಬಹಳಷ್ಟು ಸಪೋರ್ಟ್ ಮಾಡುತ್ತಿದ್ದಾರೆ. ನಮ್ಮ ಚಿತ್ರದಲ್ಲಿ ವಿನಯ್ ರಾಜ್‍ಕುಮಾರ್ ಬಹಳ ಸಪೋರ್ಟ್ ಮಾಡಿದ್ದು , ತುಂಬಾ ಸೈಲೆಂಟ್ ವ್ಯಕ್ತಿತ್ವ, ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಈಗ ಬಿಡುಗಡೆಯಾಗಿರುವ ಹಾಡಿಗೆ ಅರಸು ಅಂತಾರೆ ಸಾಹಿತ್ಯ ಬರೆದಿದ್ದು, ವಿನಯ್ ರಾಜ್ ಕುಮಾರ್ ಹಾಗೂ ನಿಶಾ ಬಹಳ ಸೊಗಸಾಗಿ ಅಭಿನಯಿಸಿದ್ದಾರೆ. ನಿರ್ಮಾಪಕರ ಪತ್ನಿಯವರು ನಟಿ ನಿಶಾರನ್ನು ಆಯ್ಕೆ ಮಾಡಿದ್ದು ಮರೆಯುವಂತಿಲ್ಲ. ನಮ್ಮ ಚಿತ್ರದ ಇನ್ನೂ ಮೂರು ಹಾಡು, ಟ್ರೇಲರ್ ಹಂತ ಹಂತವಾಗಿ ಬಿಡುಗಡೆ ಮಾಡುತ್ತೇವೆ. ಆಗಸ್ಟ್ 29ರಂದು ಸಿನಿಮಾ ರಿಲೀಸ್ ಆಗಲಿದೆ. ಇದೊಂದು ಪ್ಯೂರ್ ಲವ್ ಹಾಗೂ ಗೆಳೆತನ ಚಿತ್ರವಾಗಿದ್ದು, ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತೆ ಎಂದರು.
ನನಗೆ ನಮ್ಮ ಹುಡುಗರ ಶ್ರಮದ ಬಗ್ಗೆ ಬಹಳ ನಂಬಿಕೆ ಇದೆ. ಚಿತ್ರ ಚೆನ್ನಾಗಿ ಬಂದಿದೆ. ಇದಕ್ಕೂ ಮೊದಲು ನಾನು ಕಾಲಾಪತ್ತರ ಚಿತ್ರ ಮಾಡಿದ್ದೆ. ಇದು ನನ್ನ ಎರಡನೇ ಚಿತ್ರ. ಈಗಾಗಲೇ ಮುಂಗಾರು ಮಳೆಯಲ್ಲಿ… ಹಾಡು ದೊಡ್ಡ ಹಿಟ್ ಆಗಿದ್ದು, ನನ್ನ ರಾಜಕೀಯ ಸ್ನೇಹಿತರು ಹಾಗೂ ನಮ್ಮೂರಿನ ಜನರು ಹಾಡಿನ ಬಗ್ಗೆ ಮೆಚ್ಚುಗೆಯನ್ನು ತಿಳಿಸಿದ್ದಾರೆ. ಈಗ ನಮ್ಮ ಚಿತ್ರದ ಎರಡನೇ ಹಾಡು ಕೂಡ ಹಿಟ್ ಆಗಲಿ. ನಾನು ನನ್ನ ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡುತ್ತೇನೆ, ನೀವು ಎಲ್ಲರೂ ಬಂದು ನೋಡಿ ಹರಸಿ ಎಂದು ಭುವನ್ ಮೂವೀಸ್ ಬ್ಯಾನರ್ನ ಭುವನ್ ಸುರೇಶ್ ಹೇಳಿದರು.
ಸಂಗೀತ ನಿರ್ದೇಶಕ ರಾಘವೇಂದ್ರ .ವಿ ಅವರು, ನಮ್ಮ ಮೊದಲ ಸಾಂಗ್ ಮೇಘಾ ಹಿಟ್ ಆಗಿದ್ದು, ನಿಮ್ಮ ಪ್ರೋತ್ಸಾಹ ಇದಕ್ಕೆ ಕಾರಣ. ಈಗ ಎರಡನೇ ಹಾಡು ಎ2 ಮ್ಯೂಸಿಕ್ ನಲ್ಲಿ ರಿಲೀಸ್ ಆಗಿದೆ. ನಿರ್ದೇಶಕ, ನಿರ್ಮಾಪಕರಿಗೆ ಧನ್ಯವಾದ ಹೇಳುವೆ. ಇಡೀ ಸಾಂಗ್ ನಲ್ಲಿ ನಿಶಾ ಅವರ ಲುಕ್ ಹಾಗೂ ವಿನಯ್ ಇನೂಸೆಂಟ್ ಹೈಲಟ್ ಆಗಿದೆ. ಪ್ರತಿ ಶಾಟ್ ಕೂಡ ಅದ್ಭುತವಾಗಿ ಬಂದಿದೆ. ಚಿತ್ರದಲ್ಲಿ ಇನ್ನೂ ಮೂರು ಹಾಡುಗಳಿವೆ ಎಂದರು. ಇನ್ನು ಛಾಯಾಗ್ರಾಹಕ ಅಭಿಷೇಕ್ ಕಾಸರಗೋಡು, ಸಂಕಲನಗಾರ ಕೀರ್ತಿ, ನೃತ್ಯ ನಿರ್ದೇಶಕ ರಘು ಆರ್.ಜೆ ಚಿತ್ರದ ಕುರಿತು ತಮ್ಮ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಈಗ ‘ಅರೇರೇ ಯಾರೋ ಇವಳು …’ ಸಾಂಗ್ ರಿಲೀಸ್ ಆಗಿದ್ದು, 90ರ ಕಾಲಘಟ್ಟದಲ್ಲಿ ನಾಯಕ ವಿನಯ್ ರಾಜ್ ಕುಮಾರ್ ಹಾಗೂ ನಾಯಕಿ ನಿಶಾ ಹರಿಕೃಷ್ಣನ್ 10ನೇ ತರಗತಿ ವಿದ್ಯಾರ್ಥಿಗಳಾಗಿ ಅಭಿನಯಿಸಿದ್ದಾರೆ. ಹಾಡು ಮಧುರವಾಗಿ ಮನಮುಟ್ಟುವಂತಿದೆ. ಈ “ಅಂದೊಂದಿತ್ತು ಕಾಲ” ಚಿತ್ರದಲ್ಲಿ ವಿನಯ್ ರಾಜ್‍ಕುಮಾರ್ ಮತ್ತು ಅದಿತಿ ಜೊತೆಗೆ ನಿಶಾ ರವಿಕೃಷ್ಣನ್, ಜಗ್ಗಪ್ಪ, ಅರುಣಾ ಬಾಲರಾಜ್ ಮುಂತಾದವರು ನಟಿಸಿದ್ದು, ರವಿಚಂದ್ರನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬೆಂಗಳೂರು, ತೀರ್ಥಹಳ್ಳಿ ಮುಂತಾದ ಕಡೆ ಚಿತ್ರದ ಚಿತ್ರೀಕರಣವಾಗಿದೆ.
ಇದನ್ನೂ ಓದಿ : ‘ಜೂನಿಯರ್’ ಚಿತ್ರದ ಟೀಸರ್ ಔಟ್ – ಭರ್ಜರಿಯಾಗಿ ಎಂಟ್ರಿ ಕೊಟ್ಟ ಕಿರೀಟಿ!
