ಬೆಂಗಳೂರು : ಕರ್ನಾಟಕದ ಹೆಮ್ಮೆಯ ರಾಜ್ಯ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತನ (KMF) ನಂದಿನಿ ದೇಶದ ಆಹಾರ ಮತ್ತು ಪಾನೀಯ ವಿಭಾಗದ ಮುಂಚೂಣಿಯ ಬ್ರ್ಯಾಂಡ್ ಗಳಲ್ಲಿ ನಾಲ್ಕನೇ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.
ವಿಶ್ವದ ಪ್ರಮುಖ ಬ್ರ್ಯಾಂಡ್ ಮೌಲ್ಯಮಾಪನ ಸಂಸ್ಥೆಯಾದ ಬ್ರ್ಯಾಂಡ್ ಫೈನಾನ್ಸ್ ತನ್ನ 2025ರ ವರದಿ ಬಿಡುಗಡೆ ಮಾಡಿದ್ದು, 2024ರಲ್ಲಿ 43ನೇ ಸ್ಥಾನದಲ್ಲಿದ್ದ ನಂದಿನಿ ಈ ಬಾರಿ ನೂರು ಬ್ರ್ಯಾಂಡ್‌ಗಳ ಪಟ್ಟಿಯಲ್ಲಿ 38ನೇ ಸ್ಥಾನಕ್ಕೆ ಏರಿದೆ. ಭಾರತೀಯ ಬ್ರ್ಯಾಂಡ್‌ಗಳ ಅಗ್ರ ನೂರರಲ್ಲಿ ನಂದಿನಿ ಬ್ರ್ಯಾಂಡ್ ಮೌಲ್ಯವು 1,079 ಮಿಲಿಯನ್‌ಗೆ (107.9 ಕೋಟಿ ರು.) ಏರಿಕೆಯಾಗಿದೆ. ಇದು ಹಿಂದಿನ ವರ್ಷಕ್ಕಿಂತ 139 ಮಿಲಿಯನ್ (13.90 ಕೋಟಿ ರು.)ಗಿಂತ ಹೆಚ್ಚು.
ಇನ್ನು ಆಹಾರ ಮತ್ತು ಪಾನೀಯಗಳ ವಿಭಾಗದಲ್ಲಿ ನಂದಿನಿ ದೇಶದಲ್ಲೇ ನಾಲ್ಕನೇ ಸ್ಥಾನವನ್ನು ಉಳಿಸಿಕೊಂಡಿದೆ. ಮೊದಲ ಮೂರು ಸ್ಥಾನದಲ್ಲಿ ಅಮುಲ್, ಮದರ್ ಡೇರಿ ಮತ್ತು ಬ್ರಿಟಾನಿಯಾ ಇದ್ದರೆ, ಐದನೇ ಸ್ಥಾನದಲ್ಲಿ ಡಾಬರ್ ಇದೆ. ನಂದಿನಿ ಬ್ರ್ಯಾಂಡ್ ನಿರಂತರ ಕಾರ್ಯಕ್ಷಮತೆ ಮತ್ತು ಮೌಲ್ಯವೃದ್ಧಿಯಿಂದ ಬೆಳೆದಿದ್ದು, ದೇಶದಲ್ಲೇ ಖ್ಯಾತಿಯನ್ನು ಗಳಿಸಿದೆ.
ಬ್ರ್ಯಾಂಡ್ ಫೈನಾನ್ಸ್ ಮೌಲ್ಯಮಾಪನ ಸಂಸ್ಥೆ ಬ್ರ್ಯಾಂಡ್‌ಗಳ ಆರ್ಥಿಕ ಸದೃಢತೆ, ಜಾಗತಿಕ ಮಟ್ಟದಲ್ಲಿ ಬ್ರ್ಯಾಂಡ್‌ಗಳ ಮೌಲ್ಯಮಾಪನ ಅಳೆಯುವ ಸಂಸ್ಥೆಯಾಗಿದೆ. ಇದರ ಕೇಂದ್ರ ಕಚೇರಿ ಲಂಡನ್‌ನಲ್ಲಿದ್ದು ಈ ಸಂಸ್ಥೆ 25ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಸಂಸ್ಥೆ ವಾರ್ಷಿಕ 6 ಸಾವಿರಕ್ಕೂ ಹೆಚ್ಚು ಬ್ರ್ಯಾಂಡ್‌ಗಳನ್ನು ಮೌಲ್ಯಮಾಪನಕ್ಕೆ ಒಳಪಡಿಸುತ್ತದೆ. ಬ್ರ್ಯಾಂಡ್ ಫೈನಾನ್ಸ್ ವಿವಿಧ ಬ್ರ್ಯಾಂಡ್‌ಗಳ ಆರ್ಥಿಕ ಮೌಲ್ಯವನ್ನು ಅಳೆಯುವುದರಿಂದ ಕಂಪನಿಗಳು ಕಾರ್ಯತಂತ್ರದ ನಿರ್ಧಾರಗಳನ್ನು ತೆಗೆದುಕೊಳ್ಳಲು ಈ ಸಂಸ್ಥೆ ವರದಿ ನೆರವಾಗುತ್ತದೆ.
ಇದನ್ನೂ ಓದಿ : ಕರ್ನಾಟಕ ಬ್ಯಾಂಕ್ನ ಕೋಟಿ ಕೋಟಿ ಅವ್ಯವಹಾರ – CEO ರಾಜೀನಾಮೆ, ಸಂಕಷ್ಟದಲ್ಲಿ ಕರ್ನಾಟಕ ಬ್ಯಾಂಕ್.. ಆತಂಕದಲ್ಲಿ ಜನತೆ!
