ಕರ್ನಾಟಕ ಬ್ಯಾಂಕ್​ನ ಕೋಟಿ ಕೋಟಿ ಅವ್ಯವಹಾರ – CEO ರಾಜೀನಾಮೆ, ಸಂಕಷ್ಟದಲ್ಲಿ ಕರ್ನಾಟಕ ಬ್ಯಾಂಕ್.. ಆತಂಕದಲ್ಲಿ ಜನತೆ!

ಬೆಂಗಳೂರು : ಭಾರತದ ಪ್ರಮುಖ ಖಾಸಗಿ ಬ್ಯಾಂಕ್‌ಗಳಲ್ಲಿ ಕರ್ನಾಟಕ ಬ್ಯಾಂಕ್ ಕೂಡ ಒಂದು. ಈ ಬ್ಯಾಂಕ್​ನ ಒಂದು ನಿರ್ದಿಷ್ಟ ವೆಚ್ಚದ ಕುರಿತು ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಶ್ರೀಕೃಷ್ಣನ್ ಹರಿಹರ ಶರ್ಮಾ ಹಾಗೂ ಬ್ಯಾಂಕ್‌ನ ಆಡಳಿತ ಮಂಡಳಿ ನಡುವೆ ತೀವ್ರ ಜಟಾಪಟಿ ನಡೆಯುತ್ತಿತ್ತು. ಇದೀಗ ಈ ತಿಕ್ಕಾಟ ರಾಜೀನಾಮೆಯಲ್ಲಿ ಕೊನೆಯಾಗಿದೆ.

ಕರ್ನಾಟಕ ಬ್ಯಾಂಕಿನ ಎಂಡಿ ಮತ್ತು ಸಿಇಒ ಹುದ್ದೆಗೆ ಶ್ರೀಕೃಷ್ಣನ್ ಹರಿಹರ ಶರ್ಮಾ ಅವರು ರಾಜೀನಾಮೆ ನೀಡಿದ್ದಾರೆ. ಶರ್ಮಾ ಅವರು ಶುಕ್ರವಾರವೇ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಸೋಮವಾರವೇ ಅವರ ಕೊನೆಯ ಕೆಲಸದ ದಿನವಾಗಿದೆ. ಶ್ರೀಕೃಷ್ಣನ್‌ ಹರಿಹರ ಶರ್ಮಾ ಬಳಿಕ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಹಿರಿಯ ಅಧಿಕಾರಿ ಶೇಖರ್ ರಾವ್ ಕೂಡ ಜುಲೈ 30 ರೊಳಗೆ ತಮ್ಮ ಹುದ್ದೆಯಿಂದ ಕೆಳಗಿಳಿಯುವ ನಿರೀಕ್ಷೆ ಇದೆ.

ಏನಿದು ಜಟಾಪಟಿ?

ಕರ್ನಾಟಕ ಬ್ಯಾಂಕ್ ಮಾಡಿದ ಒಂದು ನಿರ್ದಿಷ್ಟ ವೆಚ್ಚದ ಕುರಿತು ಶ್ರೀಕೃಷ್ಣನ್‌ ಹರಿಹರ ಶರ್ಮಾ ಮತ್ತು ಶೇಖರ್‌ ರಾವ್ ಹಾಗೂ ಬ್ಯಾಂಕಿನ ಆಡಳಿತ ಮಂಡಳಿಯ ನಡುವೆ ತಿಕ್ಕಾಟ ಏರ್ಪಟ್ಟಿತ್ತು. ಈ ಹೊಯ್ದಾಟವೀಗ ಸಿಇಒ ತಮ್ಮ ಹುದ್ದೆಗೆ ರಾಜೀನಾಮೆ ನೀಡುವ ಹಂತಕ್ಕೆ ಬಂದು ನಿಂತಿದೆ.

ಮೇ ತಿಂಗಳಲ್ಲಿ ಶುರುವಾಗಿತ್ತು ಈ ವಿವಾದ : ಬ್ಯಾಂಕಿನ ಅಧಿಕೃತ ಲೆಕ್ಕಪರಿಶೋಧಕರಾದ ರವಿ ರಾಜನ್ ಆಂಡ್‌ ಕೊ ಎಲ್‌ಎಲ್‌ಪಿ ಮತ್ತು ಆರ್‌ಜಿಎನ್‌ ಪ್ರೈಸ್ ಆಂಡ್‌ ಕೊ ಮೇ ತಿಂಗಳಲ್ಲಿ ತಮ್ಮ ಟಿಪ್ಪಣಿಯಲ್ಲಿ, ಬ್ಯಾಂಕ್‌ ಸಲಹೆಗಾರರನ್ನು ತೊಡಗಿಸಿಕೊಳ್ಳುವ ಮತ್ತು ಬ್ಯಾಂಕಿನ ಪೂರ್ಣಾವಧಿ ನಿರ್ದೇಶಕರ ಅಧಿಕಾರವನ್ನು ಮೀರಿ ಇತರ ಉದ್ದೇಶಗಳಿಗಾಗಿ ಮಾಡಿದ 1.53 ಕೋಟಿ ರೂ. ವೆಚ್ಚದ ಬಗ್ಗೆ ಉಲ್ಲೇಖಿಸಿದ್ದರು. ಶ್ರೀಕೃಷ್ಣನ್ ಹರಿ ಹರ ಶರ್ಮಾ ಮತ್ತು ಶೇಖರ್ ರಾವ್ ಬ್ಯಾಂಕ್‌ನ ಪೂರ್ಣಾವಧಿ ನಿರ್ದೇಶಕರಾಗಿದ್ದಾರೆ.

ಆದರೆ, ಇದಕ್ಕೆ ಆಡಳಿತ ಮಂಡಳಿಯ ಅನುಮೋದನೆ ಪಡೆದುಕೊಂಡಿರಲಿಲ್ಲ. ಈ ಸಂಬಂಧ ಸಿಇಒ, ಕಾರ್ಯನಿರ್ವಾಹಕ ನಿರ್ದೇಶಕರು ಮತ್ತು ಆಡಳಿತ ನಡುವೆ ವ್ಯತ್ಯಾಸಗಳು ಹುಟ್ಟಿಕೊಂಡಿದ್ದವು. ಈ ಮೊತ್ತವನ್ನು ಸಂಬಂಧಪಟ್ಟ ನಿರ್ದೇಶಕರಿಂದ ವಸೂಲಿ ಮಾಡಬಹುದು ಎಂದು ಲೆಕ್ಕಪರಿಶೋಧಕರು ಹೇಳಿದ್ದರು. ಆ ವೆಚ್ಚದ ಸಂಬಂಧ ಹುಟ್ಟಿಕೊಂಡಿದ್ದ ವಿವಾದ ಇದೀಗ ಇಬ್ಬರ ಹುದ್ದೆಯನ್ನು ಬಲಿ ಪಡೆಯುವ ಹಂತಕ್ಕೆ ತಲುಪಿದೆ.

ಶ್ರೀಕೃಷ್ಣನ್ ಹರಿಹರ ಶರ್ಮಾ ಅವರು ಜೂನ್ 09, 2023 ರಂದು ಕರ್ಣಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಇದೀಗ ಸರಿಯಾಗಿ 2 ವರ್ಷಗಳ ಬಳಿಕ ಅವರು ಹುದ್ದೆಯಿಂದ ಕೆಳಗಿಳಿದಿದ್ದಾರೆ.

ಇದನ್ನೂ ಓದಿ : ಹೆಚ್ಚು ದರ ವಸೂಲಿ ಮಾಡುವ ಆಟೋ ಚಾಲಕರ ವಿರುದ್ಧ ಕ್ರಮ ಕೈಗೊಳ್ಳಲು ಸಚಿವ ರಾಮಲಿಂಗಾರೆಡ್ಡಿ ಖಡಕ್ ಆದೇಶ!

Btv Kannada
Author: Btv Kannada

Read More