ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಸರ್ಕಾರ ನಿಗದಿ ಮಾಡಿರುವ ದರಕ್ಕಿಂತ ಹೆಚ್ಚು ದರ ವಸೂಲಿ ಮಾಡುತ್ತಿರುವ ಆಪ್ (APP) ಆಧಾರಿತ ಆಟೋಗಳಾಗಲಿ ಅಥವಾ ಇನ್ನಾವುದೇ ಮಾದರಿಯ ಆಟೋಗಳಾಗಲಿ ಅಂತಹವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಖಡಕ್ ಆದೇಶ ಹೊರಡಿಸಿದ್ದಾರೆ.
ಪ್ರಯಾಣಿಕರಿಂದ ನಿಗದಿಕ್ಕಿಂತ ದರಕ್ಕಿಂತ ಹೆಚ್ಚಿನ ದರ ಬೇಡಿಕೆ, ಹೆಚ್ಚಿನ ದರ ನೀಡದಿದ್ದಲ್ಲಿ ಪ್ರಯಾಣವನ್ನು ರದ್ದುಗೊಳಿಸುವುದು ಹಾಗೂ ಅತೀ ಹೆಚ್ಚಿನ ದರ ವಸೂಲು ಮಾಡುತ್ತಿರುವ ಪ್ರಕರಣಗಳ ಬಗ್ಗೆ ದೂರು ಬಂದಲ್ಲಿ ತ್ವರಿತಗತಿಯಲ್ಲಿ ಕ್ರಮಕೈಗೊಂಡು ಅಂತಹ ಆಟೋಗಳ ಪರ್ಮಿಟ್ ರದ್ದು ಮಾಡುವುದರ ಜೊತೆಗೆ ಪ್ರಕರಣ ದಾಖಲಿಸಬೇಕು. ಉದಾ: ದಿನಾಂಕ 18 ನೇ ಜೂನ್ 2025 ರಂದು ರಂದು ರಾಪಿಡೋ ಆಟೋ ಆಪ್ ಪ್ರತಿಕಿ.ಮೀ ರೂ. 100.89, ಅದೇ ಆಟೋ ಓ ಆ್ಯಪ್ ಅವರು 4 ಕಿ.ಮೀ ದೂರದ ಪ್ರಯಾಣಕ್ಕೆ ರೂ. 184.19 ತೆಗೆದುಕೊಂಡಿರುತ್ತಾರೆ. ಸಾರ್ವಜನಿಕರಿಂದ ಈ ರೀತಿಯ ಹಗಲು ದರೋಡೆ ಅಕ್ಷಮ್ಯ, ಕಠಿಣ ಕ್ರಮ ಜರೂರಾಗಿ ಜರುಗಿಸಬೇಕು.
ಈಗಾಗಲೇ ಬಾಡಿಗೆಗೆ ನಿರಾಕರಣೆ, ಅಧಿಕ ಬಾಡಿಗೆಗೆ ಒತ್ತಾಯಿಸಿದ ಆಟೋ ಚಾಲಕರ ವಿರುದ್ಧ ಪ್ರಕರಣಗಳನ್ನು ಸಾರಿಗೆ ಇಲಾಖೆಯು ದಾಖಲಿಸುತ್ತಿದ್ದಾಗ್ಯೂ ಸಹ, ಸಾರ್ವಜನಿಕರಿಂದ ದೂರುಗಳು ಬರುತ್ತಿದ್ದು, ಈ ಪತ್ರದೊಂದಿಗೆ ನಿಗದಿತ ದರಕ್ಕಿಂತ ಹೆಚ್ಚು ದರ ವಸೂಲಿ ಮಾಡಿರುವ ದೂರುಗಳಿಗೆ ಸಂಬಂಧಪಟ್ಟಂತೆ ಸಾರ್ವಜನಿಕರು ಕಳುಹಿಸಿರುವ ಮೊಬೈಲ್ ಸ್ಟ್ರೀನ್ ಶಾಟ್ ಪ್ರತಿಗಳನ್ನು ಮುಂದಿನ ಸೂಕ್ತ ಕ್ರಮಕ್ಕಾಗಿ ಸಚಿವರು ಸೂಚಿಸಿದ್ದಾರೆ. ಸಾರ್ವಜನಿಕರ ಹಿತ ಕಾಪಾಡುವ ನಿಟ್ಟಿನಲ್ಲಿ ಕೂಡಲೇ ಪರಿಣಾಮಕಾರಿಯಾದ ಕಾರ್ಯ ಯೋಜನೆ ರೂಪಿಸಿ ತಪ್ಪಿತಸ್ಥ ಆಟೋ ಚಾಲಕರ/ ಮಾಲೀಕರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲು ಅದೇಶಿಸಿದ್ದಾರೆ.
ಇದನ್ನೂ ಓದಿ : ಅನಗತ್ಯ ಖರ್ಚಿಗೆ ಬ್ರೇಕ್.. ಈ ಬಾರಿ 11 ದಿನಗಳ ಕಾಲ ಮೈಸೂರು ದಸರಾ ಆಚರಣೆ – ಸಿಎಂ ಸಿದ್ದರಾಮಯ್ಯ!
