ಚಾಮರಾಜನಗರ : ಮಲೆಮಹದೇಶ್ವರ ಬೆಟ್ಟದಲ್ಲಿ 5 ಹುಲಿಗಳ ಸಾವಿನ ಪ್ರಕರಣ ರಾಜ್ಯಾದ್ಯಂತ ಸಂಚಲನ ಮೂಡಿಸಿದೆ. ಹುಲಿಗಳ ಸಾವಿಗೆ ವಿಷಪ್ರಾಶನವೇ ಕಾರಣ ಅನ್ನೋದು ಮರಣೋತ್ತರ ಪರೀಕ್ಷೆಯಲ್ಲಿ ದೃಢವಾಗಿದೆ. ಈ ಬೆನ್ನಲ್ಲೇ ಬಂಡೀಪುರ ಗುಂಡ್ರೆ ಅರಣ್ಯ ವ್ಯಾಪ್ತಿಯಲ್ಲಿ ಮತ್ತೊಂದು ಹುಲಿ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.
4 ರಿಂದ 5 ವರ್ಷ ವಯಸ್ಸಿನ ಹೆಣ್ಣು ಹುಲಿ ಸಾವನ್ನಪ್ಪಿದ್ದು, ಅರಣ್ಯ ಸಿಬ್ಬಂದಿ ಗಸ್ತಿನ ವೇಳೆ ಕಳೇಬರ ಪತ್ತೆಯಾಗಿದೆ. ಮೇಲ್ನೋಟಕ್ಕೆ ಸಹಜ ಸಾವಿನಂತೆ ಕಂಡುಬಂದಿದೆ. ಇಂದು ಹುಲಿಯ ಮರಣೋತ್ತರ ಪರೀಕ್ಷೆ ನಡೆಯಲಿದೆ.
ಮೀಣ್ಯಂ ಅರಣ್ಯ ಪ್ರದೇಶದಲ್ಲಿ ಐದು ಹುಲಿಗಳು ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ಶುಕ್ರವಾರ ಐವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಹುಲಿಗಳ ಸಾವು ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಈಗಾಗಲೇ ಆಶ್ವಾಸನೆ ನೀಡಿದೆ. ಹುಲಿ ಸಾವು ಸಂಬಂಧ ಮೀಣ್ಯಂ ಅರಣ್ಯ ಪ್ರದೇಶ ಸಮೀಪದ ಗ್ರಾಮಸ್ಥರನ್ನೂ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಪೊಲೀಸರು ಗ್ರಾಮಸ್ಥರನ್ನು ಘಟನಾ ಸ್ಥಳಕ್ಕೆ ಕರೆದುಕೊಂಡು ಹೋಗಿ ಮಾಹಿತಿ ಕಲೆಹಾಕುತ್ತಿದ್ದಾರೆ.
ಇದನ್ನೂ ಓದಿ : ಬಾಲಿವುಡ್ನ ಖ್ಯಾತ ನಟಿ, ಮಾಡೆಲ್ ಶೆಫಾಲಿ ಜರಿವಾಲಾ ಹೃದಯಘಾತದಿಂದ ನಿಧನ
