ಭುವನೇಶ್ವರ : ಒಡಿಶಾದ ಪುರಿಯಲ್ಲಿ ನಿನ್ನೆ ನಡೆದ ವಿಶ್ವವಿಖ್ಯಾತ ಜಗನ್ನಾಥ ರಥಯಾತ್ರೆ ವೇಳೆ ಘೋರ ಕಾಲ್ತುಳಿತ ಸಂಭವಿಸಿದ್ದು, 600ಕ್ಕೂ ಹೆಚ್ಚು ಭಕ್ತರು ಗಾಯಗೊಂಡಿದ್ದು, 40ಕ್ಕೂ ಹೆಚ್ಚು ಭಕ್ತರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ಜಗನ್ನಾಥ ದೇವರು ಮತ್ತು ಅವರ ಅಣ್ಣ ಬಲಭದ್ರ ಮತ್ತು ತಂಗಿ ದೇವಿ ಸುಭದ್ರಾ ದೇವಿಯ ರಥಯಾತ್ರೆಯ ಸಂದರ್ಭದಲ್ಲಿ ಜನದಟ್ಟಣೆ ಹೆಚ್ಚಾಗಿದ್ದರಿಂದ ಕಾಲ್ತುಳಿತ ಸಂಭವಿಸಿದ್ದು, 600ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡ ಭಕ್ತರನ್ನ ಕೂಡಲೇ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಿಲಾಗಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಅಂಬುಲೆನ್ಸ್‌ಗಳು ರಥಯಾತ್ರೆ ಸ್ಥಳಕ್ಕೆ ತಲುಪಿದ್ದು, ಸಂತ್ರಸ್ತರನ್ನ ಆಸ್ಪತ್ರೆಗೆ ದಾಖಲಿಸಿ, ಉಳಿದವರಿಗೂ ಅಗತ್ಯ ವೈದ್ಯಕೀಯ ನೆರವು ನೀಡಿದೆ.
ಬಲಭದ್ರನ ತಾಳಧ್ವಜ ರಥ ಎಳೆಯುವ ವೇಳೆ ವಿಳಂಭವಾಗಿತ್ತು. ಇದರಿಂದ ರಥಯಾತ್ರೆ ಮಾರ್ಗದ ತಿರುವಿನಲ್ಲಿ ಬಹಳಷ್ಟು ತೊಂದ್ರೆ ಉಂಟಾಗಿತ್ತು. ಈ ವೇಳೆ ರಥ ನಿಂತಿದ್ದರಿಂದ ಕಾಲ್ತುಳಿತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಇನ್ನು ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಒಡಿಶಾ ಸಚಿವ ಮುಖೇಶ್ ಮಹಾಲಿಂಗ್, ಘಟನೆ ನಿಜಕ್ಕೂ ಆಘಾತಕಾರಿಯಾಗಿದೆ. ರಕ್ಷಣಾ ತಂಡವು ಕೂಡಲೇ ನೆರವಿಗೆ ಧಾವಿಸಿ ಸಂತ್ರಸ್ತರನ್ನು ಆಸ್ಪತ್ರೆಗೆ ದಾಖಲಿಸಿದೆ. ಸ್ಥಳದಲ್ಲಿ ಆರೋಗ್ಯ ಕೇಂದ್ರಗಳನ್ನೂ ಸ್ಥಾಪಿಸಲಾಗಿದೆ. ನೀರು ಮತ್ತು ಗ್ಲೂಕೋಸ್‌ಗೆ ವ್ಯವಸ್ಥೆ ಮಾಡಲಾಗಿದೆ. ಆಸ್ಪತ್ರೆಗೆ ಭೇಟಿ ನೀಡಿ ಭಕ್ತರ ಆರೋಗ್ಯ ವಿಚಾರಿಸುತ್ತೇನೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : “ರಂಗಿತರಂಗ” ಸಿನಿಮಾ ಮತ್ತೆ ತೆರೆಗೆ – ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಚಿತ್ರತಂಡ!
