ಬೆಂಗಳೂರು : ವಿಚಾರಣೆ ನೆಪದಲ್ಲಿ ವ್ಯಕ್ತಿಯೊಬ್ಬರಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡಿದ ಆರೋಪದ ಮೇಲೆ ಯಶವಂತಪುರ ACP ಮೇರಿ ಶೈಲಜಾ ಸಸ್ಪೆಂಡ್ ಮಾಡಲು ಮಾನವ ಹಕ್ಕು ಆಯೋಗ ಆದೇಶ ಹೊರಡಿಸಿದೆ. ಕಿರುಕುಳ ನೀಡಿರುವ ಬಗ್ಗೆ ದೂರುದಾರರಾದ ಕೃಷ್ಣ ಪ್ರಸಾದ್ ರವರು ಆಯೋಗಕ್ಕೆ ದೂರು ಸಲ್ಲಿಸಿದ್ದರು. ಹಾಗಾಗಿ ಇದೀಗ ಯಶವಂತಪುರ ACP ಮೇರಿ ಶೈಲಜಾ ಸಸ್ಪೆಂಡ್ ಮಾಡಲು ಮಾನವ ಹಕ್ಕು ಆಯೋಗ ಆದೇಶ ನೀಡಿದೆ.
ದೂರುದಾರರಾದ ಕೃಷ್ಣ ಪ್ರಸಾದ್ ರವರು ಆಯೋಗಕ್ಕೆ ದೂರು ಸಲ್ಲಿಸಿ, ತಮಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ನೀಡಿರುವ ಬೆಂಗಳೂರು ನಗರ ಹಲಸೂರು ಗೇಟ್ ಮಹಿಳಾ ಪೊಲೀಸ್ ಠಾಣೆಯ ಅಂಜು ಮಾಲಾ ನಾಯಕ್, ಕನಕಲಕ್ಷ್ಮೀ, ಮೇರಿ ಶೈಲಜಾ ಸಿಬ್ಬಂದಿಗಳಾದ ಪುಷ್ಪಕರನ್, ಶ್ರೀನಿವಾಸ್, ಗೋವಿಂದಪ್ಪ ಮತ್ತು ಇತರೆ ಅಧಿಕಾರಿಗಳ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಳ್ಳುವಂತೆ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಈ ದೂರಿನ ಬಗ್ಗೆ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಆಯೋಗದ ಐ.ಜಿ.ಪಿ ರವರಿಗೆ ಸೂಚಿಸಿದ್ದು, ದಿನಾಂಕ: 26.05.2023 ರಂದು ಆಯೋಗದ ಐ.ಜಿ.ಪಿ ಅವರು ವರದಿಯನ್ನು ಸಲ್ಲಿಸಿದ್ದಾರೆ. ದೂರುದಾರರಾದ ಕೃಷ್ಣಪ್ರಸಾದ್ ರವರು ದಿನಾಂಕ 19.022019 ರಂದು ಬೆಳಗ್ಗೆ 7:00 ಗಂಟೆಗೆ ಯು.ಕೆ.ಗೆ ಹೋಗಲು ಬಾಂಬೆ ಇಮಿಗ್ರೇಷನ್ ಕ್ಲಿಯರೆನ್ನಗೆ ಹೋದಾಗ ಇಮಿಗ್ರೇಷನ್ ಅಧಿಕಾರಿಗಳು ಹಲಸೂರು ಗೇಟ್ ಮಹಿಳಾ ಪೋಲಿಸ್ ಠಾಣೆಯ ಪೊಲೀಸರು ಕೃಷ್ಣಪ್ರಸಾದ್ ವಿರುದ್ಧ ಸಲ್ಲಿಸಿದ್ದ ಲುಕ್ ಔಟ್ ಸರ್ಕೂಲರ್ನಲ್ಲಿ ಅವರನ್ನು ವಶಕ್ಕೆ ಪಡೆದು ಮಾಹಿತಿಯನ್ನು ಪೊಲೀಸ್ ಇನ್ಸ್ ಪೆಕ್ಟರ್ ಮೇರಿ ಶೈಲಜ ರವರಿಗೆ ನೀಡಿದ್ದು, ಅವರು ‘ತನಿಖೆಗೆ ಅವಶ್ಯತೆ ಇದೆ’ ಆದ್ದರಿಂದ ಅವರ ಸಿಬ್ಬಂದಿಗಳ ವಶಕ್ಕೆ ನೀಡುವಂತೆ ಇಮಿಗ್ರೇಷನ್ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದರಿಂದ ಅವರು ತನ್ನನ್ನು ಸಹರ ಪೊಲೀಸ್ ಠಾಣೆಯ ಪೊಲೀಸರ ವಶಕ್ಕೆ ನೀಡಿದ್ದರು.
ಹಲಸೂರು ಗೇಟ್ ಮಹಿಳಾ ಠಾಣೆ ಸಿಬ್ಬಂದಿಗಳು ಬಾಂಬೆಗೆ ಬರುವವರೆಗೆ ಅಂದರೆ ದಿನಾಂಕ 20.02.2019 ರಂದು ಸಂಜೆ 6:00 ಗಂಟೆಯವರೆಗೆ ಹಲಸೂರು ಗೇಟ್ ಮಹಿಳಾ ಠಾಣೆಯ ಪೊಲೀಸರು ಕೃಷ್ಣಪ್ರಸಾದ್ ರವರನ್ನು ಬಂಧನದಲ್ಲಿರಿಸಿದ್ದು, ಹಲಸೂರು ಗೇಟ್ ಮಹಿಳಾ ಠಾಣೆಯ ಸಿಬ್ಬಂದಿಗಳಾದ ಪುಷ್ಪಕರಣ್ ಮತ್ತು ಶ್ರೀನಿವಾಸ್‌ರವರು ಬಂದ ನಂತರ ಪ್ರಕರಣದಲ್ಲಿ ಉಚ್ಚ ನ್ಯಾಯಾಲಯದ ಸ್ಟೇ ಆದೇಶವನ್ನು ತೋರಿಸಿದ ನಂತರ ಅವರು ಕೃಷ್ಣಪ್ರಸಾದ್ ರವರಿಗೆ ಅವಾಚ್ಯ ಶಬ್ದಗಳಿಂದ ಬೈಯ್ದು, ಅವರಿಂದ ಹೇಳಿಕೆ ಪಡೆದು, ಬೆಂಗಳೂರಿಗೆ ಕರೆದುಕೊಂಡು ಹೋಗಲು ಕೃಷ್ಣಪ್ರಸಾದ್ ರವರ ತಂಗಿಗೆ ಫೋನ್ ಮಾಡಿ ಆಕೆಯ ಕಡೆಯಿಂದ ಏರ್ ಟಿಕೇಟ್ ಬುಕ್ ಮಾಡಿಸಿ ನಂತರ ಅವರನ್ನು ಏರ್‌ಪೊರ್ಟ್ ವರೆಗೆ ಕರೆದುಕೊಂಡು ಬಂದು ನಾಳೆ ಪೊಲೀಸ್ ಠಾಣೆಗೆ ಬಂದು ಪೊಲೀಸ್ ಇನ್ಸ್ ಪೆಕ್ಟರ್ ರವರನ್ನು ಭೇಟಿ ಮಾಡುವಂತೆ ತಿಳಿಸಿ ರಸ್ತೆಯಲ್ಲಿ ಒಬ್ಬನನ್ನೇ ಬಿಟ್ಟು ಹೋದರು ಎಂದು ಕೃಷ್ಣಪ್ರಸಾದ್ ಆರೋಪಿಸಿದ್ದಾರೆ.
ಇದನ್ನೂ ಓದಿ : ಚಿಕ್ಕೋಡಿ : ಹೆಲ್ಮೆಟ್ ಧರಿಸಿಲ್ಲ ಎಂದು ತಾಯಿ-ಮಗನ ಮೇಲೆ ಮನಬಂದಂತೆ ಹಲ್ಲೆ ನಡೆಸಿದ ಅಂಕಲಿ ಪೊಲೀಸರು!
