ಚಿಕ್ಕೋಡಿ : ಹೆಲ್ಮೆಟ್ ಧರಿಸಿಲ್ಲ ಎಂದು ಮನಬಂದಂತೆ ತಾಯಿ ಮಗನ ಮೇಲೆ ಪೋಲಿಸರು ಹಲ್ಲೆ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ನಡೆದಿದೆ. ರಸ್ತೆ ಮಧ್ಯದಲ್ಲೇ ದ್ವಿಚಕ್ರ ವಾಹನ ಅಡ್ಡಗಟ್ಟಿ ಅಂಕಲಿ ಪೋಲಿಸರು ಹಲ್ಲೆ ಮಾಡಿರುವ ಗಂಭೀರ ಆರೋಪ ಕೇಳಿಬಂದಿದೆ.
ಹೃಷಿಕೇಶ್ ಲಿಂಬಿಗಿಡದ ಹಾಗೂ ಸುಶೀಲಾ ಎಂಬುವವರು ಬೈಕ್ನಲ್ಲಿ ಮಹಾರಾಷ್ಟ್ರ ಸಾಂಗ್ಲಿಯಿಂದ ಚಿಕ್ಕೋಡಿಗೆ ಬರುತ್ತಿದ್ದರು. ಈ ವೇಳೆ ಹೆಲ್ಮೆಟ್ ಹಾಕಿಲ್ಲ ಎಂಬ ಕಾರಣಕ್ಕೆ ಪೊಲೀಸರು ದರ್ಪ ತೋರಿದ್ದಾರೆ.
ಅಂಕಲಿ ಪೋಲಿಸರು ರಸ್ತೆ ಮಧ್ಯದಲ್ಲೇ ಯುವಕನಿಗೆ ಮನಬಂದಂತೆ ಥಳಿಸಿದ್ದು, ಮೈಮೇಲಿದ್ದ ಬಟ್ಟೆ ಹರಿದು ಲಾಠಿಯಿಂದ ಬಡಿದಿದ್ದಾರೆ. ಈ ವೇಳೆ ಮಗನ ಬಿಡಿಸಲು ಮುಂದಾದ ತಾಯಿಯ ಮೇಲೂ ಹಲ್ಲೆ ನಡೆಸಿದ್ದಾರೆ. ಮಹಿಳೆ ಅಂತನೂ ಬಿಡದೆ ಪೊಲೀಸರು ರಸ್ತೆ ಮಧ್ಯದಲ್ಲೇ ಎಳೆದಾಡಿ ಬೂಟು ಕಾಲಿನಿಂದ ಒದ್ದಿದ್ದಾರೆ. ನಂತರ ಭಯದಿಂದ ಬಿಪಿ ಹೈ ಆಗಿ ಕೆಳಗೆ ಬಿದ್ದ ಯುವಕನನ್ನು ಪೊಲೀಸರೇ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
ಪೊಲೀಸರು ಹೊಸ ಟಿ-ಶರ್ಟ್ ಕೊಡಿಸಿ ಆಸ್ಪತ್ರೆಗೆ ದಾಖಲಿಸಿದ್ದು, ಈ ವಿಷಯ ತಿಳಿದು ಯುವಕನ ತಂದೆ ಕೂಡ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದೀಗ ಅಂಕಲಿ ಪೊಲೀಸರ ವಿರುದ್ಧ ಸಾರ್ವಜನಿಕರ ಆಕ್ರೋಶ ಭುಗಿಲೆದ್ದಿದೆ.
ಇದನ್ನೂ ಓದಿ : ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಕಾನೂನು ಸಮರಕ್ಕೆ ಜಯ – ನ್ಯಾಯಾಲಯದಲ್ಲಿ ಕ್ಷಮೆಯಾಚಿಸಿದ ಮಾಜಿ ಶಾಸಕ ಸುರೇಶ್ ಗೌಡ!







